ಸಾರಾಂಶ
ವಾರಾಣಸಿಯ ಜನರು ಕುಡುಕರು ಎಂದು ಹೇಳಿದ್ದ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಿ ಮೋದಿ, ‘ತಮ್ಮ ಮೇಲೆಯೇ ಪ್ರಜ್ಞೆ ಇಲ್ಲದ ಜನರು ನಶೆಯ ಬಗ್ಗೆ ಮಾತನಾಡುತ್ತಾರೆ’ ಎಂದು ಹೇಳಿದ್ದಾರೆ.
ವಾರಾಣಸಿ: ವಾರಾಣಸಿಯ ಜನರು ಕುಡುಕರು ಎಂದು ಹೇಳಿದ್ದ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಿ ಮೋದಿ, ‘ತಮ್ಮ ಮೇಲೆಯೇ ಪ್ರಜ್ಞೆ ಇಲ್ಲದ ಜನರು ನಶೆಯ ಬಗ್ಗೆ ಮಾತನಾಡುತ್ತಾರೆ’ ಎಂದು ಹೇಳಿದ್ದಾರೆ.
ತಮ್ಮ ಲೋಕಸಭಾ ಕ್ಷೇತ್ರವಾದ ವಾರಾಣಸಿಯಲ್ಲಿ 13 ಸಾವಿರ ಕೋಟಿ ರು. ಮೌಲ್ಯದ ಯೋಜನೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಮೋದಿ, ‘ವಂಶ ಪರಂಪರೆಯಿಂದ ಬಂದಿರುವ ಕಾಂಗ್ರೆಸ್‌ನ ಸದಸ್ಯರೊಬ್ಬರು ವಾರಾಣಸಿಯ ಜನರು ಸದಾ ನಶೆಯಲ್ಲಿರುತ್ತಾರೆ ಎಂದು ಹೇಳಿದ್ದಾರೆ.
ಆದರೆ ಅವರಿಗೆ ಪ್ರಜ್ಞೆಯೇ ಇರುವುದಿಲ್ಲ’ ಎಂದು ಹೇಳಿದ್ದಾರೆ. ಕೆಲ ದಿನಗಳ ಹಿಂದೆ ಭಾರತ್ ಜೋಡೋ ಯಾತ್ರೆ ವೇಳೆ ರಾಹುಲ್ ಗಾಂಧಿ ಮಾತನಾಡಿ, ‘ವಾರಾಣಸಿಯ ಜನರು ಸದಾ ಅಮಲಿನಲ್ಲಿರುವುದು, ರಸ್ತೆಯಲ್ಲೇ ಬಿದ್ದಿರುವುದು ಮತ್ತು ರಾತ್ರಿಗಳಲ್ಲಿ ನೃತ್ಯ ಮಾಡುತ್ತಿರುವುದನ್ನು ನಾನು ನೋಡಿದ್ದೇನೆ’ ಎಂದು ಹೇಳಿದ್ದರು.
ಜಾತೀಯತೆ ವಿರುದ್ಧ ಕಿಡಿ: ಇನ್ನು ಸಂತ ರವಿದಾಸ್ ಅವರ ಪ್ರತಿಮೆ ಅನಾವರಣ ಮಾಡಿ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ವಿಪಕ್ಷ ಮೈತ್ರಿಕೂಟ ಇಂಡಿಯಾ ವಿರುದ್ಧ ವಾಗ್ದಾಳಿ ನಡೆಸಿದರು.
‘ಇವರು ಜಾತೀಯತೆಯ ಹೆಸರಿನಲ್ಲಿ ಜನರ ಮೇಲೆ ಶೋಷಣೆ ಮಾಡುತ್ತಿದ್ದಾರೆ. ವಿಪಕ್ಷಗಳು ತಮ್ಮ ಕುಟುಂಬದ ಯೋಗಕ್ಷೇಮದ ಬಗ್ಗೆ ಮಾತ್ರ ಕಾಳಜಿ ವಹಿಸುತ್ತವೆ ಹೊರತು ದಲಿತರು ಮತ್ತು ಬುಡಕಟ್ಟು ಜನರ ಕಲ್ಯಾಣದ ಕುರಿತು ಯೋಚಿಸುವುದಿಲ್ಲ.
ಕೆಲವು ವಿಪಕ್ಷ ನಾಯಕರು ಬುಡಕಟ್ಟು ಜನಾಂಗದ ಮಹಿಳೆ ದೇಶದ ರಾಷ್ಟ್ರಪತಿಯಾಗುವುದನ್ನೂ ವಿರೋಧಿಸಿದರು’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಶಿ ಅಭಿವೃದ್ಧಿಯೇ ಮೋದಿ ಗ್ಯಾರಂಟಿಗೆ ಮಾದರಿ
ಮುಂದಿನ ಐದು ವರ್ಷಗಳಲ್ಲಿ ಭಾರತವು ಅಭಿವೃದ್ಧಿಯ ಮಾದರಿಯಾಗಲಿದೆ, ಇದು ಮೋದಿ ಗ್ಯಾರಂಟಿ. ಕಳೆದ 10 ವರ್ಷದಲ್ಲಿ ಕಾಶಿ ಅಭಿವೃದ್ಧಿಗೊಂಡಿದ್ದೇ ಮೋದಿ ಗ್ಯಾರಂಟಿಗೆ ನಿದರ್ಶನ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬನಾರಸ ಹಿಂದೂ ವಿವಿಯಲ್ಲಿ ನಡೆದ ಸಂಸ್ಕೃತ ಪರೀಕ್ಷಾರ್ಥಿಗಳ ಸಮಾರಂಭದಲ್ಲಿ ಮಾತನಾಡಿದ ಅವರು ಕಾಶಿಯ ಉದಾಹರಣೆ ನೀಡಿ ‘ಸಂಸ್ಕ್ರತಿ ಮತ್ತು ಸಂಪ್ರದಾಯದ ಸುತ್ತ ಆಧುನಿಕತೆಯು ಹೇಗೆ ಅಭಿವೃದ್ಧಿಗೊಂಡಿದೆ ಎಂಬುದನ್ನು ಜಗತ್ತು ನೋಡುತ್ತಿದೆ’ ಎಂದರು.
‘ಕಾಶಿಯನ್ನು ಈಗ ಪ್ರಪಂಚದಾದ್ಯಂತ ಅಭಿವೃದ್ಧಿ ಮತ್ತು ಪರಂಪರೆಯ ಮಾದರಿಯಾಗಿ ನೋಡಲಾಗುತ್ತಿದೆ. ಭಾರತದ ಶ್ರೀಮಂತ ಪರಂಪರೆಯ ಪ್ರತಿಧ್ವನಿ ವಿಶ್ವಾದ್ಯಂತ ಕೇಳಿಬರುತ್ತಿದೆ.
ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ಬಳಿಕ ಅಯೋಧ್ಯೆ ಕಾಶಿಯಂತೆ ವಿಜೃಂಭಿಸುತ್ತಿರುವುದನ್ನು ಜಗತ್ತು ನೋಡುತ್ತಿದೆ’ ಎಂದರು.