ಬಿಜೆಪಿ ಈಗ ಬನಿಯಾ- ಬ್ರಾಹ್ಮಣ ಪಕ್ಷವಲ್ಲ: ಮೋದಿ

| Published : May 21 2024, 01:58 AM IST / Updated: May 21 2024, 05:16 AM IST

ಸಾರಾಂಶ

ಬಿಜೆಪಿ ಈಗ ಬನಿಯಾ- ಬ್ರಾಹ್ಮಣ ಪಕ್ಷವಲ್ಲ ಎಂದು ಮೋದಿ ಸ್ಪಷ್ಟಪಡಿಸಿದ್ದು, ಅತಿ ಹೆಚ್ಚು ದಲಿತ, ಒಬಿಸಿ ಜನಪ್ರತಿನಿಧಿಗಳು ಆಯ್ಕೆಯಾಗಿದ್ದೇ ಬಿಜೆಪಿಯಿಂದ ಎಂಬುದಾಗಿ ತಿಳಿಸಿದ್ದಾರೆ.

ನವದೆಹಲಿ: ಬಿಜೆಪಿಯನ್ನು ಕೇವಲ ಬನಿಯಾ - ಬ್ರಾಹ್ಮಣ ಪಕ್ಷವೆಂಬ ಹಣೆಪಟ್ಟ ಕಟ್ಟುವ ಯತ್ನ ನಡೆಯುತ್ತಿದೆ. ವಿಪಕ್ಷಗಳು ಇಂಥದ್ದೊಂದು ಮಿಥ್ಯೆಯನ್ನು ಹರಡುವ ಕೆಲಸದಲ್ಲಿ ನಿರತವಾಗಿವೆ. ಆದರೆ ಅದು ಈಗ ಸುಳ್ಳೆಂದು ಸಾಬೀತಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು.

ಸೋಮವಾರ ಇಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದ ಮೋದಿ, ‘ಬಿಜೆಪಿಯನ್ನು ನಗರ ಕೇಂದ್ರೀತ, ಪುರುಷ ಕೇಂದ್ರಿತ, ಉತ್ತರ ಭಾರತೀಯ ಕೇಂದ್ರಿತ ಮತ್ತು ಬನಿಯಾ- ಬ್ರಾಹ್ಮಣ ಪಕ್ಷ ಎಂದು ಬಿಂಬಿಸುವ ಯತ್ನ ಮಾಡಲಾಗುತ್ತಿದೆ. ಆದರೆ ಅತಿ ಹೆಚ್ಚು ದಲಿತ, ಒಬಿಸಿ ಮತ್ತು ಆದಿವಾಸಿಗಳು ಲೋಕಸಭೆಗೆ ಆಯ್ಕೆಯಾಗಿರುವುದೇ ಬಿಜೆಪಿಯಿಂದ. ಕಳೆದ ಚುನಾವಣೆಯಲ್ಲೂ ದಕ್ಷಿಣದಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.

ಈ ಬಾರಿಯೂ ಅದು ಮುಂದುವರೆಯಲಿದೆ. ಜೊತೆಗೆ ದೇಶದ ಎಲ್ಲಾ ಭಾಗಗಳಲ್ಲೂ, ನಗರ- ಗ್ರಾಮೀಣ ಪ್ರದೇಶಗಳಲ್ಲೂ ನಾವು ಉತ್ತಮ ಮತಗಳನ್ನು ಪಡೆದು 400ರ ಗುರಿ ಮುಟ್ಟುತ್ತೇವೆ’ ಎಂದು ಹೇಳಿದರು.