ಹ್ಯಾಟ್ರಿಕ್‌ ಪ್ರಧಾನಿ ಆಗಿ ಇಂದು ಮೋದಿ ಶಪಥ

| Published : Jun 09 2024, 01:37 AM IST / Updated: Jun 09 2024, 04:08 AM IST

ಸಾರಾಂಶ

ನಮೋ 3.0 ಸರ್ಕಾರ ಅಸ್ತಿತ್ವಕ್ಕೆ ಕೌಂಟ್‌ಡೌನ್‌ ಪ್ರಾರಂಭವಾಗಿದ್ದು, ಕರ್ನಾಟಕದಿಂದ ಮಂತ್ರಿಗಳ್ಯಾರು ಎಂಬ ಕುತೂಹಲ ಗರಿಗೆದರಿದೆ.

 ನವದೆಹಲಿ :  ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ 293 ಸ್ಥಾನ ಗೆದ್ದು ಅಧಿಕಾರದ ಭಾಗ್ಯ ಪಡೆದಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಕೂಟದ ಕೇಂದ್ರ ಸರ್ಕಾರ ಭಾನುವಾರ ಅಸ್ತಿತ್ವಕ್ಕೆ ಬರಲಿದೆ. ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಮಂತ್ರಿಮಂಡಲದ ಸದಸ್ಯರು ರಾತ್ರಿ 7.15ಕ್ಕೆ ರಾಷ್ಟ್ರಪತಿ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡುವುದರೊಂದಿಗೆ ನೂತನ ಸರ್ಕಾರ ರಚನೆಯಾಗಲಿದೆ.

ಇದರೊಂದಿಗೆ ಪಂ. ಜವಾಹರಲಾಲ್‌ ನೆಹರು ಅವರ ನಂತರ ಸತತ 3ನೇ ಬಾರಿಗೆ ಪ್ರಧಾನಿ ಆದ ಮೊದಲ ಪ್ರಧಾನಿ ಎಂಬ ಕೀರ್ತಿಗೆ ಮೋದಿ ಭಾಜನರಾಗಲಿದ್ದಾರೆ. ಜತೆಗೆ ಸತತ 3 ಬಾರಿ ಪ್ರಧಾನಿಯಾದ ಏಕೈಕ ಕಾಂಗ್ರೆಸ್ಸೇತರ ನಾಯಕ ಎಂಬ ಕೀರ್ತಿಯನ್ನೂ ಮೋದಿ ಸಂಪಾದಿಸಲಿದ್ದಾರೆ.ಈ ಹಿಂದೆ 2014 ಹಾಗೂ 2019ರಲ್ಲಿ ಬಿಜೆಪಿ ಏಕಾಂಗಿಯಾಗಿ ಬಹುಮತ ಪಡೆದಿತ್ತು. 

ಮಿತ್ರರ ಬಲವೂ ಸೇರಿ ಎನ್‌ಡಿಎ ಮೈತ್ರಿಕೂಟ ಸಂಖ್ಯಾಬಲ 300ರ ಗಡಿ ದಾಟಿತ್ತು. ಆದರೆ ಈ ಬಾರಿ ಬಿಜೆಪಿ 240 ಮತ್ತು ಎನ್‌ಡಿಎ ಮೈತ್ರಿಕೂಟ 293 ಸ್ಥಾನ ಪಡೆದಿವೆ. ಹೀಗಾಗಿ ಮುಂದಿನ 5 ವರ್ಷ ಮಿತ್ರಪಕ್ಷಗಳಾದ ಟಿಡಿಪಿ (16 ಸ್ಥಾನ), ಜೆಡಿಯು (12) ಸೇರಿದಂತೆ ಇತರೆ ಪಕ್ಷಗಳ ಬೆಂಬಲ ಅನಿವಾರ್ಯ. ಮೋದಿ ಅವರ ಪಾಲಿಗೆ ಇದು ಮೊದಲ ಸಮ್ಮಿಶ್ರ ಸರ್ಕಾರದ ಅನುಭವ.ಹೀಗಾಗಿಯೇ ಮಿತ್ರಪಕ್ಷಗಳು ಕೂಡಾ ಸಂಪುಟದಲ್ಲಿ ಹೆಚ್ಚಿನ ಸ್ಥಾನ ಮತ್ತು ಮಹತ್ವದ ಖಾತೆಗಳಿಗೆ ಬೇಡಿಕೆ ಸಲ್ಲಿಸಿವೆ. ಆದ್ದರಿಂದ ಈ ಕಸರತ್ತನ್ನು ಮೋದಿ ಮತ್ತು ಬಿಜೆಪಿ ಹೇಗೆ ನಿರ್ವಹಿಸುತ್ತದೆ ಎಂಬುದು ಸದ್ಯದ ಕುತೂಹಲ.

 ಇದರ ಜೊತೆಗೆ ಈ ಬಾರಿ ಕರ್ನಾಟಕದಿಂದ ಬಿಜೆಪಿ 17 ಮತ್ತು ಮಿತ್ರಪಕ್ಷ ಜೆಡಿಎಸ್‌ನ ಇಬ್ಬರು ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಈ ಪೈಕಿ ಯಾರಿಗೆ? ಯಾವ ಖಾತೆ ಸಿಗಬಹುದು ಎಂಬ ಕುತೂಹಲ ಇದೆ. ಮೂಲಗಳ ಪ್ರಕಾರ ಟಿಡಿಪಿಗೆ 4 ಹಾಗೂ ಜೆಡಿಯುಗೆ 2 ಸಚಿವ ಸ್ಥಾನ ಲಭಿಸುವ ನಿರೀಕ್ಷೆ ಇದೆ.ಈ ವರ್ಷ ಮಹಾರಾಷ್ಟ್ರ, ಹರ್ಯಾಣ, ಜಾರ್ಖಂಡ್‌ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಇದೆ. ಈ ಮೂರೂ ರಾಜ್ಯಗಳಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಭಾರೀ ಹಿನ್ನಡೆ ಸಾಧಿಸಿದೆ. ಹೀಗಾಗಿ ಸಂಪುಟದಲ್ಲಿ ಈ ರಾಜ್ಯಗಳಿಗೆ ಆದ್ಯತೆ ಸಿಗುವ ನಿರೀಕ್ಷೆ ಇದೆ. ಜೊತೆಗೆ ಮುಂದಿನ ವರ್ಷ ದೆಹಲಿ ಮತ್ತು ಬಿಹಾರ ವಿಧಾನಸಭಾ ಚುನಾವಣೆ ಇದ್ದು ಅದನ್ನೂ ಬಿಜೆಪಿ ಗಮನದಲ್ಲಿಟ್ಟುಕೊಂಡು ಸಚಿವ ಸ್ಥಾನ ಹಂಚಲಿದೆ ಎನ್ನಲಾಗಿದೆ.

ಮೂಲಗಳ ಪ್ರಕಾರ ಗೃಹ, ಹಣಕಾಸು, ವಿದೇಶಾಂಗ, ಸಂಸದೀಯ ರಕ್ಷಣೆ, ರಸ್ತೆ ಸಾರಿಗೆ, ಶಿಕ್ಷಣ ಖಾತೆಗಳನ್ನು ಬಿಜೆಪಿ ತನ್ನ ಬಳಿಯೇ ಇಟ್ಟುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಉಳಿದಂತೆ ಕೃಷಿ, ಗ್ರಾಮೀಣಾಭಿವೃದ್ಧಿ, ಐಟಿ, ಆರೋಗ್ಯ ಖಾತೆಗಳನ್ನು ಮಿತ್ರರಿಗೆ ಬಿಟ್ಟುಕೊಡುವ ಸಾಧ್ಯತೆ ಇದೆ.

ಯಾರಿಗೆ ಸ್ಥಾನ?:

ಹಾಲಿ ಕೇಂದ್ರ ಸಚಿವ ಸಂಪುಟದ ಭಾಗವಾಗಿರುವ ಅಮಿತ್‌ ಶಾ, ರಾಜ್‌ನಾಥ್‌ ಸಿಂಗ್‌, ಪಿಯೂಷ್‌ ಗೋಯಲ್‌, ನಿತಿನ್‌ ಗಡ್ಕರಿ, ಅನುಪ್ರಿಯಾ ಪಟೇಲ್‌, ಜ್ಯೋತಿರಾದಿತ್ಯ ಸಿಂಧಿಯಾ, ಕಿಶನ್‌ ರೆಡ್ಡಿ, ಧಮೇಂದ್ರ ಪ್ರಧಾನ್‌, ಗಜೇಂದ್ರ ಸಿಂಗ್‌ ಶೆಖಾವತ್‌, ಸುರೇಶ್‌ ಗೋಪಿ, ಸರ್ಬಾನಂದ್‌ ಸೋನೋವಾಲ್‌, ಕಿರಣ್‌ ರಿಜಿಜು ಮೊದಲಾದವರು ಹುದ್ದೆಯಲ್ಲಿ ಮುಂದುವರೆಯುವ ಸಾಧ್ಯತೆ ನಿಚ್ಚಳವಾಗಿದೆ.ಸಂಭಾವ್ಯ ಕೇಂದ್ರ ಸಚಿವರು

ಉತ್ತರಪ್ರದೇಶ:

ರಾಜ್‌ನಾಥ್‌ ಸಿಂಗ್‌, ಜಿತಿನ್‌ ಪ್ರಸಾದ್‌ (ಇಬ್ಬರೂ ಬಿಜೆಪಿ) ಅನುಪ್ರಿಯಾ ಪಟೇಲ್‌ (ಅಪ್ನಾದಳ), ಜಯಂತ್‌ ಚೌಧರಿ (ಆರ್‌ಎಲ್‌ಡಿ)

ಗುಜರಾತ್‌:ಅಮಿತ್‌ ಶಾ, ಮನಸುಖ್ ಮಾಂಡವೀಯ (ಇಬ್ಬರೂ ಬಿಜೆಪಿ)

ಬಿಹಾರ:

ನಿತ್ಯಾನಂದ್‌ ರಾಯ್‌, ರಾಜೀವ್‌ ಪ್ರತಾಪ್‌ ರೂಡಿ, ಸಂಜಯ್‌ ಜೈಸ್ವಾಲ್‌ (ಎಲ್ಲರೂ ಬಿಜೆಪಿ), ಲಲನ್‌ ಸಿಂಗ್‌, ಸಂಜಯ್‌ ಕುಮಾರ್‌ ಝಾ, ರಾಮ್‌ನಾಥ್‌ ಠಾಕೂರ್‌, ಸುನಿಲ್ ಕುಮಾರ್‌, ಕುಶಲೇಂದ್ರ ಕುಮಾರ್‌ (ಎಲ್ಲರೂ ಜೆಡಿಯು), ಚಿರಾಗ್‌ ಪಾಸ್ವಾನ್‌ (ಎಲ್‌ಜೆಪಿ), ಜೀತನ್‌ ರಾಂ ಮಾಂಝಿ (ಎಚ್‌ಎಎಂ)

ಮಹಾರಾಷ್ಟ್ರ:

ಪ್ರತಾಪ್‌ರಾವ್‌ ಜಾಧವ್‌, ನಿತಿನ್‌ ಗಡ್ಕರಿ, ಪಿಯೂಷ್‌ ಗೋಯಲ್‌ (ಎಲ್ಲರೂ ಬಿಜೆಪಿ)

ಮಧ್ಯಪ್ರದೇಶ:

ಶಿವರಾಜ್‌ ಸಿಂಗ್‌ ಚೌಹಾಣ್‌, ಜ್ಯೋತಿರಾದಿತ್ಯ ಸಿಂಧಿಯಾ (ಇಬ್ಬರೂ ಬಿಜೆಪಿ)

ತೆಲಂಗಾಣ:

ಕಿಶನ್‌ ರೆಡ್ಡಿ, ರಾಜೇಂದರ್‌, ಡಿ.ಕೆ. ಅರುಣಾ, ಬಂಡಿ ಸಂಜಯ್‌ (ಎಲ್ಲರೂ ಬಿಜೆಪಿ)

ಒಡಿಶಾ:

ಧರ್ಮೇಂದ್ರ ಪ್ರಧಾನ್‌, ಮನಮೋಹನ್‌ ಸಮಲ್‌ (ಇಬ್ಬರೂ ಬಿಜೆಪಿ)

ರಾಜಸ್ಥಾನ:

ಗಜೇಂದ್ರ ಸಿಂಗ್‌ ಶೆಖಾವತ್‌, ದುಷ್ಯಂತ್‌ ಸಿಂಗ್‌ (ಇಬ್ಬರೂ ಬಿಜೆಪಿ)

ಕೇರಳ:

ಸುರೇಶ್‌ ಗೋಪಿ (ಬಿಜೆಪಿ)

ಪಶ್ಚಿಮ ಬಂಗಾಳ:

ಶಂತನು ಠಾಕೂರ್‌ (ಬಿಜೆಪಿ)

ಆಂಧ್ರಪ್ರದೇಶ:

ಡಿ. ಪುರಂದೇಶ್ವರಿ (ಬಿಜೆಪಿ), ಹರೀಶ್‌ ಬಾಲಯೋಗಿ, ರಾಮಮೋಹನ ನಾಯ್ಡು, ದಗ್ಗುಮಲ್ಲ ಪ್ರಸಾದ್‌ (ಟಿಡಿಪಿ)

ಜಮ್ಮು:

ಜಿತೇಂದ್ರ ಸಿಂಗ್‌, ಜುಗಲ್‌ ಕಿಶೋರ್‌ ಶರ್ಮಾ (ಇಬ್ಬರೂ ಬಿಜೆಪಿ)

ಅಸ್ಸಾಂ:

ಸರ್ಬಾನಂದ ಸೋನೋವಾಲ್‌, ಬಿಜುಲಿ ಕಲಿತಾ ಮೇಧಿ (ಇಬ್ಬರೂ ಬಿಜೆಪಿ)

ಅರುಣಾಚಲ ಪ್ರದೇಶ:

ಕಿರಣ್‌ ರಿಜಿಜು (ಬಿಜೆಪಿ)

ತ್ರಿಪುರಾ:

ಬಿಪ್ಲಬ್‌ ದೇವ್‌ (ಬಿಜೆಪಿ)