ಸಾರಾಂಶ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಏ.22ರಿಂದ ಎರಡು ದಿನಗಳ ಕಾಲ ಸೌದಿ ಅರೇಬಿಯಾಕ್ಕೆ ಪ್ರವಾಸ ಕೈಗೊಳ್ಳಲಿದ್ದಾರೆ. ಇಂಧನ, ವ್ಯಾಪಾರ ಮತ್ತು ರಕ್ಷಣಾ ವಲಯದಲ್ಲಿ ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು ವಿಸ್ತರಿಸುವ ಸಲುವಾಗಿ ಪ್ರಧಾನಿ ಮೋದಿ ಈ ಭೇಟಿ ಕೈಗೊಳ್ಳುತ್ತಿದ್ದಾರೆ. ಮೋದಿ ಮತ್ತು ಸೌದಿಯ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅಲ್ ಸೌದ್ ಉಪಸ್ಥಿತಯಲ್ಲಿ ಉಭಯ ದೇಶಗಳು ಹಲವು ಒಪ್ಪಂದಗಳಿಗೆ ಸಹಿ ಹಾಕಲಿವೆ.
ನಮೀಬಿಯಾ, ಆಫ್ರಿಕಾ ಬಳಿಕ ಬೋಟ್ಸ್ವಾನಾ ಚೀತಾಗಳು ಭಾರತಕ್ಕೆ
ಭೋಪಾಲ್: ನಮೀಬಿಯಾ ಮತ್ತು ಆಫ್ರಿಕಾದ ಬಳಿಕ ಇದೀಗ ದಕ್ಷಿಣ ಆಫ್ರಿಕಾದ ಬೋಟ್ಸ್ವಾನಾ ಹಾಗೂ ಕೀನ್ಯಾದಿಂದ 2 ಹಂತಗಳಲ್ಲಿ 8 ಚೀತಾಗಳನ್ನು ಭಾರತಕ್ಕೆ ತರಲಾಗುವುದು ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಮಧ್ಯಪ್ರದೇಶ ಸರ್ಕಾರ ಹೇಳಿಕೆ ಬಿಡುಗಡೆ ಮಾಡಿದ್ದು, ‘2 ಹಂತದಲ್ಲಿ 8 ಚೀತಾಗಳನ್ನು ತರುವ ಯೋಜನೆಯಿದೆ. ಮೇ ವೇಳೆಗೆ ಬೋಟ್ಸ್ವಾನಾದಿಂದ 4 ಚೀತಾಗಳನ್ನು ತರಲಾಗುವುದು. ಪ್ರಸ್ತುತ, ಭಾರತ ಮತ್ತು ಕೀನ್ಯಾ ನಡುವೆ ಈ ಸಂಬಂಧ ಒಪ್ಪಂದ ನಡೆಯುತ್ತಿದೆ’ ಎಂದು ತಿಳಿಸಲಾಗಿದೆ. ಈವರೆಗೆ ದೇಶದಲ್ಲಿ ಚೀತಾ ಯೋಜನೆಗಾಗಿ 122 ಕೋಟಿ ರು. ವ್ಯಯಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕುಟುಂಬಕ್ಕೆ ಗೋಳು ಬೇಡ: ಬ್ರಾಹ್ಮಣರ ಮೇಲೆ ಮೂತ್ರ ಎಂದ ಕಶ್ಯಪ್ ಮನವಿ!
ಮುಂಬೈ: ಫುಲೆ ಚಿತ್ರದ ಬಿಡುಗಡೆ ವಿವಾದ ಸಂಬಂಧ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡುವ ವೇಳೆ ಬ್ರಾಹ್ಮಣರ ಮೇಲೆ ಮೂತ್ರ ಮಾಡುವೆ. ಏನಾಗುತ್ತೆ ಎಂದು ಪ್ರಶ್ನಿಸಿದ್ದ ನಿರ್ದೇಶಕ ಅನುರಾಗ್ ಕಶ್ಯಪ್ ಇದೀಗ ಇಂಥ ಹೇಳಿಕೆ ನೀಡಿದ್ದಕ್ಕೆ ನನ್ನನ್ನ ಬೇಕಿದ್ದರೆ ದೂಷಿಸಿ, ಆದರೆ ನನ್ನ ಕುಟುಂಬವನ್ನಲ್ಲ ಎಂದು ಮನವಿ ಮಾಡಿದ್ದಾರೆ. ಕಶ್ಯಪ್ ಕೀಳು ಹೇಳಿಕೆ ಬಳಿಕ ಅವರ ಕುಟುಂಬಕ್ಕೆ ದೂರವಾಣಿ ಮೂಲಕ ಹತ್ಯೆ ಮತ್ತು ಜೀವ ಬೆದರಿಕೆ ಕರೆ ರವಾನೆಯಾಗಿತ್ತು. ಈ ಹಿನ್ನೆಲೆಯಲ್ಲಿ ಹೇಳಿಕೆ ಕುರಿತು ಕ್ಷಮೆಯಾಚಿಸಿರುವ ಕಶ್ಯಪ್, ನನ್ನ ಕುಟುಂಬದ ಬಗ್ಗೆ ಏನೂ ದೂಷಣೆ ಮಾಡಬೇಡಿ ಎಂದಿದ್ದಾರೆ.
ಮೋದಿ ಜೊತೆ ಮಾತುಕತೆ ಗೌರವ, ವರ್ಷಾಂತ್ಯಕ್ಕೆ ಭಾರತಕ್ಕೆ ಎಲಾನ್ ಮಸ್ಕ್
ವಾಷಿಂಗ್ಟನ್: ವಿಶ್ವದ ನಂ.1 ಶ್ರೀಮಂತ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆತ್ಯಾಪ್ತ ಎಲಾನ್ ಮಸ್ಕ್ ಅವರು ಈ ವರ್ಷ ಕೊನೆಯಲ್ಲಿ ಭಾರತಕ್ಕೆ ಭೇಟಿ ನೀಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಸಂಭಾಷಣೆಯ ಬಳಿಕ ಮಸ್ಕ್ ಈ ರೀತಿ ಹೇಳಿದ್ದಾರೆ. ಜೊತೆಗೆ ಮೋದಿ ಜೊತೆ ಮಾತುಕತೆ ಗೌರವದ ವಿಷಯ ಎಂದಿದ್ದಾರೆ. ಮೋದಿ ಹಾಗೂ ಮಸ್ಕ್ ನಡುವೆ, ತಂತ್ರಜ್ಞಾನ ಮತ್ತು ನಾವೀನ್ಯತೆಯಲ್ಲಿ ಸಹಯೋಗದ ಸಾಧ್ಯತೆಗಳ ಬಗ್ಗೆ ಮಾತುಕತೆ ನಡೆದಿದ್ದು, ಈ ಕ್ಷೇತ್ರಗಳಲ್ಲಿ ಅಮೆರಿಕ ಜೊತೆಗಿನ ಪಾಲುದಾರಿಕೆಯನ್ನು ಮುಂದುವರಿಸಲು ಭಾರತ ಬದ್ಧವಾಗಿದೆ ಎಂದು ಮೋದಿ ಹೇಳಿದ್ದರು.
ಪಾಕಿಸ್ತಾನ, ಆಫ್ಘನ್‌ನಲ್ಲಿ ಭೂಕಂಪ, ದೆಹಲಿ ಕಾಶ್ಮೀರವೂ ಗಢಗಢ
ಕಾಬೂಲ್: ಆಫ್ಘಾನಿಸ್ತಾನದಲ್ಲಿ ಶನಿವಾರ ಮಧ್ಯಾಹ್ನ ರಿಕ್ಟರ್ ಮಾಪಕದಲ್ಲಿ 5.8 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದ ತೀವ್ರತೆ ಹೆಚ್ಚಿದ್ದ ಕಾರಣ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್, ಭಾರತದ ರಾಜಧಾನಿ ನವದೆಹಲಿ, ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದೆ ಎಂದು ನಾಗರಿಕರು ಹೇಳಿದ್ದಾರೆ. ಅಧಿಕಾರಿಗಳ ಅನ್ವಯ, ಭೂಕಂಪದ ಕೇಂದ್ರಬಿಂದು ಶ್ರೀನಗರದಿಂದ 396 ಕಿ.ಮೀ. ವಾಯುವ್ಯದ ದೂರದಲ್ಲಿತ್ತು. ಈ ನಡುವೆ ಪಾಕಿಸ್ತಾನದಲ್ಲೂ ಶನಿವಾರ 5.9 ತೀವ್ರತೆ ಭೂಕಂಪ ಸಂಭವಿಸಿದೆ. ಇದು ಈ ವಾರವೊಂದರಲ್ಲೇ ಸಂಭವಿಸಿದ ಮೂರನೇ ಭೂಕಂಪವಾಗಿದೆ.