ಸಾರಾಂಶ
ವಯನಾಡು : 400ಕ್ಕೂ ಅಧಿಕ ಮಂದಿಯನ್ನು ಬಲಿ ಪಡೆದ ಭೂಕುಸಿತ ದುರಂತಕ್ಕೆ ಸಾಕ್ಷಿಯಾದ ವಯನಾಡ್ ಜಿಲ್ಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ವೈಮಾನಿಕ ಸಮೀಕ್ಷೆ ನಡೆಸಿದ್ದಲ್ಲದೆ, ಸಂತ್ರಸ್ತರ ನೋವು ಆಲಿಸಿ ಅವರಿಗೆ ಧೈರ್ಯ ತುಂಬಿದ್ದಾರೆ.
‘ಸಾವಿರಾರು ಜನರ ಕನಸನ್ನು ಛಿದ್ರಗೊಳಿಸಿದ ಇದು ಅಸಾಮಾನ್ಯ ದುರಂತ ಇದಾಗಿದೆ. ಇಂಥ ಕಷ್ಟಕರ ಸಂದರ್ಭದಲ್ಲಿ ಪರಿಹಾರ, ಪುನರ್ವಸತಿಗೆ ಕೇಂದ್ರ ಸರ್ಕಾರ ಸಂಪೂರ್ಣ ಯತ್ನ ಮಾಡಲಿದೆ’ ಎಂದು ಘೋಷಿಸಿದ್ದಾರೆ.
ಶನಿವಾರ ದಿಲ್ಲಿಯಿಂದ ದೆಹಲಿಯಿಂದ ಕಣ್ಣೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೋದಿ, ಮೊದಲಯ ವಯನಾಡ್‌ನಲ್ಲಿ ವಾಯುಪಡೆಯ ಹೆಲಿಕಾಪ್ಟರ್ ಏರಿ ವೈಮಾನಿಕ ಸಮೀಕ್ಷೆ ನಡೆಸಿದರು.
ಬಳಿಕ ದುರ್ಘಟನೆ ನಡೆದ ಚೂರಲ್‌ಮಲೆ ಸೇರಿದಂತೆ ವಿವಿಧ ಸ್ಥಳಗಳಿಗೆ ತೆರಳಿ ಅನಾಹುತದ ತೀವ್ರತೆ ಪರಿಶೀಲಿಸಿದರು. ನಿರಾಶ್ರಿತರ ಶಿಬಿರಕ್ಕೆ ತೆರಳಿ ಜನರ ಅಹವಾಲು ಆಲಿಸಿ ಧರ್ಯ ತುಂಬಿದರು. ಇದೇ ವೇಳೆ, ಸೇನೆ ನಿರ್ಮಿಸಿರುವ 190 ಅಡಿ ಉದ್ದದ ಸೇತುವೆ ಮೇಲೆ ಅಡ್ಡಾಡಿ ಭೂಕುಸಿತದಿಂದಾಗಿ ಎಲ್ಲೆಂದರಲ್ಲಿ ಬಿದ್ದಿರುವ ಬಂಡೆಗಳು ಸೇರಿ ಅವಶೇಷಗಳನ್ನು ಗಮನಿಸಿದರು.
ಬಳಿಕ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಹಾಗೂ ಪ್ರಮುಖರ ಜತೆ ಪರಿಶೀಲನಾ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ‘ಈ ಅನಾಹುತ ಸಾಮಾನ್ಯವಲ್ಲ. ಇದು ಹಲವಾರು ಕುಟುಂಬಗಳ ಕನಸುಗಳನ್ನು ಛಿದ್ರಗೊಳಿಸಿದೆ. ಈ ದುರಂತವನ್ನು ಎದುರಿಸಿದ ಸಂತ್ರಸ್ತರನ್ನು ನಾನು ಖುದ್ದು ನೋಡಿದ್ದೇನೆ’ ಎಂದು ಬೇಸರಿಸಿದರು.
‘ಇಂಥ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಪರಿಹಾರ ಮತ್ತು ಪುನರ್ವಸತಿಗೆ ಸಾಧ್ಯವಿರುವ ಎಲ್ಲ ಸಹಾಯ ನೀಡಲಿದೆ. ಭೂಕುಸಿತದಲ್ಲಿ ಬದುಕುಳಿದರವರ ಒಳಿತಿಗೆ ನಾನು ಪ್ರಾರ್ಥಿಸುವೆ. ದುರಂತದಲ್ಲಿ ಎಲ್ಲವನ್ನೂ ಕಳೆದುಕೊಂಡವರಿಗೆ ಸಹಾಯ ಮಾಡಲು ಕೇಂದ್ರವು ಕೇರಳ ಸರ್ಕಾರದೊಂದಿಗೆ ಒಟ್ಟಾಗಿ ನಿಲ್ಲುತ್ತದೆ’ ಎಂದರು.
ಅಲ್ಲದೆ, ‘ಭೂಕುಸಿತದ ಬಗ್ಗೆ ನನಗೆ ತಿಳಿದಾಗಿನಿಂದ ಮಾಹಿತಿ ತೆಗೆದುಕೊಳ್ಳುತ್ತಿದ್ದೇನೆ. ದುರಂತದಲ್ಲಿ ಸಹಾಯ ಮಾಡಬಹುದಾದ ಕೇಂದ್ರ ಸರ್ಕಾರದ ಎಲ್ಲಾ ಸಂಸ್ಥೆಗಳನ್ನು ತಕ್ಷಣವೇ ಸಜ್ಜುಗೊಳಿಸಲಾಯಿತು’ ಎಂದೂ ಅವರು ಈವರೆಗಿನ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಮೋದಿ ಎದುರು ಸಂತ್ರಸ್ತರ ಕಣ್ಣೀರು ವಯನಾಡು: ಪ್ರಧಾನಿ ನರೇಂದ್ರ ಮೋದಿ ಭೇಟಿ ವೇಳೆ ವಯನಾಡು ಸಂತ್ರಸ್ತರು ತಮ್ಮ ನೋವು ಹಂಚಿಕೊಂಡು ಕಣ್ಣೀರು ಹಾಕಿದರು. ಆದರೆ ಪ್ರಧಾನಿ ತಮ್ಮ ನೋವು ಆಲಿಸಿದ್ದಕ್ಕೆ ಸಂತಸಗೊಂಡರು. ಆಗ ಮೋದಿ, ‘ಸರ್ಕಾರ ನಿಮ್ಮ ಪರವಾಗಲಿದೆ’ ಎಂದು ಧೈರ್ಯ ತುಂಬಿದರು.‘ಮೋದಿ ತನ್ನ ಬಳಿ ಮಾತನಾಡಿದ್ದಕ್ಕೆ ತುಂಬಾ ಖುಷಿಗೊಂಡಿದ್ದೇನೆ.
ಸರ್ಕಾರ ನಮ್ಮ ಪರವಾಗಿ ಇದೆ ಎಂದು ಭರವಸೆ ನೀಡಿದ್ದಾರೆ. ಪ್ರಧಾನಿಯವರನ್ನು ಟೀವಿಗಳಲ್ಲಿ ಮಾತ್ರ ನೋಡುತ್ತಿದ್ದೆವು. ಆದರೆ ಅವರನ್ನು ಇಂದು ಎದುರೇ ನೋಡಿದ್ದೇನೆ. ನನಗೆ ಮನೆಯಿಲ್ಲ. ಇದನ್ನು ಕೇಳಿಸಿಕೊಂಡು ಪ್ರಧಾನಿಯವರು ಧೈರ್ಯ ತುಂಬಿದರು. ಎಲ್ಲರಿಗೂ ಭರವಸೆ ನೀಡಿದರು. ಬಹಳ ಖುಷಿ ಆಗಿದೆ’ ಎಂದು ನಿರಾಶ್ರಿತ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಅಯ್ಯಪ್ಪನ್ ಹೇಳಿದ.ಇನ್ನೊಬ್ಬ ಸಂತ್ರಸ್ತ ಮಾತನಾಡಿ, ‘ಮೋದಿ ನನ್ನ ಹೆಗಲ ಮೇಲೆ ಕೈ ಹಾಕಿ ನೋವು ಆಲಿಸಿದರು’ ಎಂದು ಹೇಳಿದ.