2ನೇ ಉಪಗ್ರಹ ಉಡಾವಣಾ ಕೇಂದ್ರಕ್ಕೆ ಇಂದು ಮೋದಿ ಶಂಕು

| Published : Feb 28 2024, 02:38 AM IST / Updated: Feb 28 2024, 09:44 AM IST

ಸಾರಾಂಶ

ತಮಿಳುನಾಡಿನ ತೂತ್ತುಕುಡಿ ಜಿಲ್ಲೆಯ ಕುಲಶೇಖರಪಟ್ಟಿಣಂನಲ್ಲಿ ನಿರ್ಮಾಣ ಮಾಡಲು ಯೋಜಿಸಲಾಗಿರುವ ಇಸ್ರೋದ 2ನೇ ಉಡಾವಣಾ ಕೇಂದ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಚೆನ್ನೈ: ತಮಿಳುನಾಡಿನ ತೂತ್ತುಕುಡಿ ಜಿಲ್ಲೆಯ ಕುಲಶೇಖರಪಟ್ಟಿಣಂನಲ್ಲಿ ನಿರ್ಮಾಣ ಮಾಡಲು ಯೋಜಿಸಲಾಗಿರುವ ಇಸ್ರೋದ 2ನೇ ಉಡಾವಣಾ ಕೇಂದ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಲಘು ಉಪಗ್ರಹಗಳ ಉಡಾವಣೆಗೆ ಈ ಕೇಂದ್ರವನ್ನು ಬಳಕೆ ಮಾಡಲಾಗುತ್ತದೆ ಎಂದು ಇಸ್ರೋ ಹೇಳಿದೆ.

ಪ್ರಸ್ತುತ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಉಪಗ್ರಹ ಉಡಾವಣಾ ಕೇಂದ್ರ ಕಾರ್ಯಾಚರಣೆ ನಡೆಸುತ್ತಿದೆ. ಇದಕ್ಕೆ ಈಗ ಇನ್ನಿಂದು ಸೇರ್ಪಡೆ ಆಗಲಿದೆ.

ಇಂಧನ ಉಳಿತಾಯ: ತಮಿಳುನಾಡಿನಲ್ಲಿ ಉಪಗ್ರಹ ಉಡಾವಣಾ ಕೇಂದ್ರ ನಿರ್ಮಾಣ ಮಾಡುವುದರಿಂದ ಇಸ್ರೋಗೆ ಸಾಕಷ್ಟು ಪ್ರಮಾಣದಲ್ಲಿ ಇಂಧನ ಉಳಿತಾಯವಾಗಲಿದೆ.

ಈ ಮೊದಲು ಶ್ರೀಹರಿಕೋಟಾದಿಂದ ಉಡಾವಣೆ ಮಾಡುವ ಸಮಯದಲ್ಲಿ ಶ್ರೀಲಂಕಾದ ಮೇಲೆ ಹಾದು ಹೋಗಬಾರದು ಎಂಬ ಕಾರಣಕ್ಕೆ ರಾಕೆಟನ್ನು ಆಗ್ನೇಯ ದಿಕ್ಕಿನತ್ತ ಹಾರಿಸಿ, ಬಳಿಕ ದಕ್ಷಿಣಕ್ಕೆ ತಿರುಗಿಸಲಾಗುತ್ತಿತ್ತು. 

ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ಇಂಧನ ಖರ್ಚಾಗುತ್ತಿತ್ತು. ಆದರೆ ತಮಿಳುನಾಡಿನಿಂದ ನೇರವಾಗಿ ದಕ್ಷಿಣಕ್ಕೆ ಹಾರಿಸುವ ಅವಕಾಶ ಇರುವುದರಿಂದ ಇಂಧನ ಉಳಿತಾಯವಾಗಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.