ಸಾರಾಂಶ
ಅಯೋಧ್ಯೆ: ಶತಕೋಟಿ ಭಾರತೀಯರ ಐದು ಶತಮಾನಗಳ ಕನಸು ಕೊನೆಗೂ ಸಾಕಾರಗೊಂಡಿದೆ. ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ರಾಮಮಂದಿರ ವಿಧ್ಯುಕ್ತವಾಗಿ ಉದ್ಘಾಟನೆಗೊಂಡು ಪ್ರಧಾನಿ ನರೇಂದ್ರ ಮೋದಿ ಅವರ ಅಮೃತ ಹಸ್ತದಿಂದ ಬಾಲರಾಮನ ಪ್ರತಿಷ್ಠಾಪನೆ ಸೋಮವಾರ ಮಧ್ಯಾಹ್ನ 12.30ರ ಶುಭಮುಹೂರ್ತದಲ್ಲಿ ನೆರವೇರಿದೆ.
ಒಂದು ಗಂಟೆ ಅವಧಿಯ ‘ಪ್ರಾಣ ಪ್ರತಿಷ್ಠಾ’ ಸಮಾರಂಭದಲ್ಲಿ ಮೈಸೂರು ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ 51 ಇಂಚು ಎತ್ತರದ 5 ವರ್ಷ ವಯಸ್ಸಿನ ಮಂದಸ್ಮಿತ ರಾಮಲಲ್ಲಾ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು.
ಪ್ರತಿಷ್ಠಾಪನೆ ನೆರವೇರುತ್ತಿದ್ದಂತೆಯೇ ವೇದ ಘೋಷಗಳ ನಡುವೆ, ಶಂಖ ಊದಿ ಹೆಲಿಕಾಪ್ಟರ್ ಮೂಲಕ ದೇವಸ್ಥಾನದ ಮೇಲೆ ಪುಷ್ಪವೃಷ್ಟಿ ಮಾಡಲಾಯಿತು.
ಮೋದಿ ನಡೆಸಿದ ಧಾರ್ಮಿಕ ವಿಧಿವಿಧಾನಗಳ ವೇಳೆ ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.
ಮಂದಿರದ ಹೊರಗೆ ಸುಮಾರು 8 ಸಾವಿರ ಗಣ್ಯರು ಕುರ್ಚಿಗಳಲ್ಲಿ ಆಸೀನರಾಗಿ ಎಲ್‌ಇಡಿ ಪರದೆಯಲ್ಲಿ ಪ್ರತಿಷ್ಠಾಪನೆ ವೀಕ್ಷಿಸಿದರು. ದೇಶಾದ್ಯಂತ ಜನರು ಟೀವಿಗಳಲ್ಲಿ ಇದರ ನೇರಪ್ರಸಾರ ವೀಕ್ಷಿಸಿದರು.
ಪ್ರತಿಷ್ಠಾಪನೆ ಬಳಿಕ ಮಾತನಾಡಿದ ಮೋದಿ, ‘ಇದು ಭಾವುಕ ಕ್ಷಣ, ರಾಮನಿಗೆ ಮನೆ ಸಿಕ್ಕಿದೆ, ಆತನ ಟೆಂಟ್ ವಾಸ ಮುಕ್ತಾಯವಾಗಿದೆ’ ಎಂದು ಭಾವನಾತ್ಮಕ ಶೈಲಿಯಲ್ಲಿ ನುಡಿದರು.
ಇನ್ನು ಹೊಸ ಯುಗಾರಂಭ: ಸುದೀರ್ಘ ಕಾಯುವಿಕೆಯ ಬಳಿಕ ಕಡೆಗೂ ರಾಮನ ಆಗಮನವಾಗಿದೆ. ಬಾಲರಾಮ ಇನ್ನು ಟೆಂಟ್‌ನಲ್ಲಿ ಇರಬೇಕಿಲ್ಲ.
ಭವ್ಯವಾದ ದೇಗುಲದಲ್ಲಿ ನೆಲೆಸಲಿದ್ದಾನೆ. ಕ್ಯಾಲೆಂಡರ್‌ನಲ್ಲಿ ಈ ದಿನ ಒಂದು ದಿನಾಂಕವಷ್ಟೇ ಅಲ್ಲ. ಹೊಸ ಕಾಲಚಕ್ರದ ಉದಯ.
ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯೊಂದಿಗೆ ಹೊಸ ಯುಗ ಆರಂಭವಾಗಿದೆ. ಇನ್ನೇನಿದ್ದರೂ ಮುಂದಿನ 1000 ವರ್ಷಗಳ ಬಲಿಷ್ಠ, ಭವ್ಯ, ದಿವ್ಯ ಭಾರತ ಕಟ್ಟಲು ಜನತೆ ಅಡಿಪಾಯ ಹಾಕಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.