ಎಐ ಎಲ್ಲರಿಗೂ ಮುಕ್ತವಾಗಬೇಕು: ಪ್ರಧಾನಿ ಮೋದಿ ಆಗ್ರಹ

| Published : Feb 12 2025, 12:33 AM IST

ಸಾರಾಂಶ

‘ಕೃತಕ ಬುದ್ಧಿಮತ್ತೆ ಕ್ಷೇತ್ರವು ಏಕಸ್ವಾಮ್ಯತೆಯಿಂದ ಹೊರಬಂದು ಎಲ್ಲರಿಗೂ ಮುಕ್ತವಾದ ಜಾಗತಿಕ ಚೌಕಟ್ಟನ್ನು ಸ್ಥಾಪಿಸಲು ಜಾಗತಿಕ ಮಟ್ಟದಲ್ಲಿ ಪ್ರಯತ್ನಗಳ ಅಗತ್ಯವಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಪ್ಯಾರಿಸ್‌: ‘ಕೃತಕ ಬುದ್ಧಿಮತ್ತೆ ಕ್ಷೇತ್ರವು ಏಕಸ್ವಾಮ್ಯತೆಯಿಂದ ಹೊರಬಂದು ಎಲ್ಲರಿಗೂ ಮುಕ್ತವಾದ ಜಾಗತಿಕ ಚೌಕಟ್ಟನ್ನು ಸ್ಥಾಪಿಸಲು ಜಾಗತಿಕ ಮಟ್ಟದಲ್ಲಿ ಪ್ರಯತ್ನಗಳ ಅಗತ್ಯವಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಫ್ರಾನ್ಸ್‌ ಅಧ್ಯಕ್ಷ ಇಮಾನ್ಯುವಲ್‌ ಮ್ಯಾಕ್ರಾನ್‌ ಅವರೊಂದಿಗೆ ಎಐ ಶೃಂಗಸಭೆಯ ಜಂಟಿ ಅಧ್ಯಕ್ಷತೆ ವಹಿಸಿದ ಮೋದಿ, ‘ದೇಶಗಳ ನಡುವೆ ಪರಸ್ಪರ ಅವಲಂಬನೆ ಇರುವ ಕಾರಣ ಮೌಲ್ಯಗಳನ್ನು ಎತ್ತಿಹಿಡಿದು, ಅಪಾಯಗಳನ್ನು ಪರಿಹರಿಸಿ, ವಿಶ್ವಾಸ ಬೆಳೆಸುವ ಆಡಳಿತ ಸ್ಥಾಪನೆಗೆ ಎಲ್ಲಾ ದೇಶಗಳು ಒಟ್ಟಾಗಿ ಪ್ರಯತ್ನಿಸಬೇಕು. ಆಡಳಿತವೆಂದರೆ ಕೇವಲ ಅಪಾಯಗಳು ಹಾಗೂ ಶಕ್ತುಗಳನ್ನು ಎದುರಿಸುವುದಲ್ಲ. ಬದಲಿಗೆ ನಾವೀನ್ಯತೆಯನ್ನು ಪ್ರೋತ್ಸಾಹಿಸಿ ಜಾಗತಿಕ ಒಳಿತಿಗಾಗಿ ಬಳಸಬೇಕು’ ಎಂದರು. ಇದೇ ವೇಳೆ, ‘ತಂತ್ರಜ್ಞಾನವನ್ನು ಪ್ರಜಾಸತ್ತಾತ್ಮಕವಾಗಿಸಬೇಕು ಹಾಗೂ ಜನ ಕೇಂದ್ರಿತ ಅಪ್ಲಿಕೇಶನ್‌ಗಳನ್ನು ಸೃಷ್ಟಿಸಬೇಕು. ಸೈಬರ್‌ ಭದ್ರತೆ, ಸುಳ್ಳುಸುದ್ದಿ ಹಾಗೂ ಡೀಪ್‌ಫೇಕ್‌ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಬೇಕು. ಇದಕ್ಕಾಗಿ ವಿಶ್ವಾಸಾರ್ಹತೆ ಹಾಗೂ ಪಾರದರ್ಶಕತೆ ಅಗತ್ಯ’ ಎಂದರು.

ದಕ್ಷಿಣ ದೇಶಗಳಿಗೆ ಮಾನ್ಯತೆ ಅಗತ್ಯ:‘ನಾವೀನ್ಯತೆ ಹಾಗೂ ಆಡಳಿತದ ಬಗ್ಗೆ ಆಳವಾಗಿ ಯೋಚಿಸಿ ಚರ್ಚಿಸಬೇಕು. ಕಂಪ್ಯೂಟರ್‌, ಶಕ್ತಿ, ಕೌಶಲ್ಯ, ಡೇಟಾ, ಆರ್ಥಿಕ ಸಂಪನ್ಮೂಲಗಳ ವಿಷಯದಲ್ಲಿ ಹಿಂದಿರುವ ದಕ್ಷಿಣದ ದೇಶಗಳಿಗೂ ಮುಕ್ತ ಅವಕಾಶ ನೀಡಬೇಕು’ ಎಂದು ಮೋದಿ ಆಗ್ರಹಿಸಿದರು.

ಭಾರತದ ಸಾಧನೆ:

ಎಐ ಕ್ಷೇತ್ರದಲ್ಲಿ ಭಾರತದ ಸಾಧನೆ ಬಗ್ಗೆ ವರ್ಣಿಸಿದ ಮೋದಿ, ‘ನಮ್ಮ ದೇಶ ಕಡಿಮೆ ವೆಚ್ಚದಲ್ಲಿ 1.4 ಶತಕೋಟಿ ಜನರಿಗೆ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಿದೆ. ನಮ್ಮಲ್ಲಿ ಎಐ ಕೌಶಲ್ಯವಿರುವವರು ಅಪಾರ ಸಂಖ್ಯೆಯಲ್ಲಿದ್ದಾರೆ. ಭಾರತವೂ ತನ್ನ ಸ್ವಂತ ಎಐ ಮಾದರಿ ಅಭಿವೃದ್ಧಿಪಡಿಸುತ್ತಿದೆ ಹಾಗೂ ಎಐ ಅಳವಡಿಕೆ, ಡೇಟಾ ಸುರಕ್ಷತೆಗೆ ಸಂಬಂಧಿಸಿದಂತೆ ತಾಂತ್ರಿಕ-ಕಾನೂನು ಪರಿಹಾರಗಳಲ್ಲಿ ಮುಂಚೂಣಿಯಲ್ಲಿದೆ’ ಎಂದರು.

==

ಎಐನಿಂದ ಕೆಲಸಕ್ಕೆ ಕುತ್ತಿಲ್ಲ, ಕೆಲಸದ ಸ್ವರೂಪ ಬದಲು: ಮೋದಿ ಭರವಸೆ

ಪ್ಯಾರಿಸ್‌: ಕೃತಕ ಬುದ್ಧಿಮತ್ತೆ ವ್ಯವಸ್ಥೆಗಳು ದಿನೇ ದಿನೇ ಮಾನವನ ಉದ್ಯೋಗಕ್ಕೆ ಕುತ್ತು ತರುತ್ತಿವೆ ಎಂಬ ಜಾಗತಿಕ ಕಳವಳದ ನಡುವೆಯೇ, ಅಂಥ ಆತಂಕ ಬೇಡ ಎಂಬ ಭರವಸೆ ಮಾತುಗಳನ್ನು ಪ್ರಧಾನಿ ನರೇಂದ್ರ ಮೋದಿ ಆಡಿದ್ದಾರೆ. ಎಐನಿಂದಾಗಿ ಕೆಲಸಕ್ಕೆ ಕುತ್ತಾಗುವ ಸಾಧ್ಯತೆ ಇಲ್ಲ, ಬದಲಾಗಿ ನಾವು ಮಾಡುವ ಕೆಲಸದ ಸ್ವರೂಪ ಬದಲಾಗಬಹುದು ಎಂದು ಹೇಳಿದ್ದಾರೆ.

ಫ್ರಾನ್ಸ್‌ ಪ್ರವಾಸದ ವೇಳೆ ಪ್ಯಾರಿಸ್‌ನಲ್ಲಿ ಆಯೋಜನೆಗೊಂಡಿದ್ದ ಕೃತಕ ಬುದ್ಧಿಮತ್ತೆ ವ್ಯವಸ್ಥೆ ಕುರಿತ ಜಾಗತಿಕ ಸಮ್ಮೇಳನದಲ್ಲಿ ‘ಮಾನವರು ಮಾಡುವ ಕೆಲಸಗಳನ್ನು ಎಐ ಮಾಡಿ ಅವರ ಸ್ಥಾನ ತುಂಬಬಹುದೇ?’ ಎಂಬ ಪ್ರಶ್ನೆಗೆ ಉತ್ತರಿಸಿದ ಮೋದಿ, ‘ತಂತ್ರಜ್ಞಾನದಿಂದಾಗಿ ಕೆಲಸಗಳು ಮಾಯವಾಗುವುದಿಲ್ಲ ಎಂಬುದನ್ನು ಇತಿಹಾಸವೇ ತೋರಿಸಿದೆ. ಕೆಲಸಗಳ ಸ್ವಭಾವ ಬದಲಾಗಬಹುದು ಹಾಗೂ ಹೊಸ ಉದ್ಯೋಗಗಳು ಸೃಷ್ಟಿಯಾಗಬಹುದು’ ಎಂದರು.ಅಂತೆಯೇ, ‘ಇಂದು ಎಐ ರಾಜಕೀಯ, ಆರ್ಥಿಕತೆ, ಭದ್ರತೆ ಹಾಗೂ ಇಡೀ ಸಮಾಜಕ್ಕೇ ಹೊಸ ರೂಪ ನೀಡುತ್ತಿದೆ. ಇದರ ಬಳಕೆಯಿಂದ ಶಿಕ್ಷಣ, ಕೃಷಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬದಲಾವಣೆ ತರಬಹುದು. ಸುಸ್ಥಿರತೆ ಸಾಧಿಸುವ ಕಡೆಗಿನ ಹಾದಿಯಲ್ಲಿ ವೇಗವಾಗಿ ಮುನ್ನಡೆಯಬಹುದು’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.