ಇವಿಎಂ ಟೀಕಾಕಾರರ ಆರೋಪಗಳಿಗೆ ಮುಖ್ಯ ಚುನಾಚಣಾ ಆಯುಕ್ತ ರಾಜೀವ್‌ ಕುಮಾರ್‌ ತಿರುಗೇಟು

| Published : Jan 08 2025, 01:31 AM IST / Updated: Jan 08 2025, 04:45 AM IST

ಸಾರಾಂಶ

ಇವಿಎಂಗಳನ್ನು ತಿರುಚಲಾಗುತ್ತಿದೆ, ಮತದಾನದ ಅಂಕಿಸಂಖ್ಯೆಗಳಲ್ಲಿ ಆಯೋಗ ಬೇಕೆಂದೇ ಏರುಪೇರು ಮಾಡುತ್ತಿದೆ, ಚುನಾವಣೆ ವೇಳೆ ನಿಷ್ಪಕ್ಷಪಾತ ಕಾರ್ಯನಿರ್ವಹಣೆ ಮಾಡಲ್ಲ ಎಂಬ ಆರೋಪಗಳಿಗೆ ಮುಖ್ಯ ಚುನಾಚಣಾ ಆಯುಕ್ತ ರಾಜೀವ್‌ ಕುಮಾರ್‌ ತಿರುಗೇಟು ನೀಡಿದ್ದಾರೆ.

 ನವದೆಹಲಿ : ಇವಿಎಂಗಳನ್ನು ತಿರುಚಲಾಗುತ್ತಿದೆ, ಮತದಾನದ ಅಂಕಿಸಂಖ್ಯೆಗಳಲ್ಲಿ ಆಯೋಗ ಬೇಕೆಂದೇ ಏರುಪೇರು ಮಾಡುತ್ತಿದೆ, ಚುನಾವಣೆ ವೇಳೆ ನಿಷ್ಪಕ್ಷಪಾತ ಕಾರ್ಯನಿರ್ವಹಣೆ ಮಾಡಲ್ಲ ಎಂಬ ಆರೋಪಗಳಿಗೆ ಮುಖ್ಯ ಚುನಾಚಣಾ ಆಯುಕ್ತ ರಾಜೀವ್‌ ಕುಮಾರ್‌ ತಿರುಗೇಟು ನೀಡಿದ್ದಾರೆ. ‘ಇವಿಎಂಗಳನ್ನು ಹ್ಯಾಕ್‌ ಮಾಡಲು ಬರಲ್ಲ ಎಂದು 42 ಸಲ ಕೋರ್ಟುಗಳು ತೀರ್ಪು ನೀಡಿವೆ. ಮತದಾನದ ಅಂಕಿ ಅಂಶಗಳನ್ನು ಏರುಪೇರು ಮಾಡುವ ಪ್ರಶ್ನೆಯೇ ಇಲ್ಲ. ನಮ್ಮಿಂದ ನಿಷ್ಪಕ್ಷಪಾಯ ಕೆಲಸ ನಡೆಯುತ್ತಿದೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ದಿಲ್ಲಿ ಚುಣಾವಣೆ ಘೋಷಣೆಗೆ ಸುದ್ದಿಗೋಷ್ಠಿ ನಡೆಸಿದ ಅವರು, ‘ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ದುರ್ಬಳಕೆ ಆರೋಪ ಸುಳ್ಳು. ಇವಿಎಂಗಳು ಟ್ಯಾಂಪರ್ ಪ್ರೂಫ್ ಆಗಿದ್ದು, ಅವುಗಳನ್ನು ಹ್ಯಾಕ್ ಮಾಡುವುದು ಅಸಾಧ್ಯ. ಹೀಗಂತ 42 ಬಾರಿ ಕೋರ್ಟುಗಳು ತೀರ್ಪು ನೀಡಿವೆ .ಪ್ರತಿ ಸಲ ದೂರು ಬಂದಾಗಲೂ ಪರಿಶೀಲನೆ ವೇಳೆ ಆರೋಪ ಸುಳ್ಳೆಂದು ಸಾಬೀತಾಗಿದೆ. ಇವಿಎ ತಂತ್ರಜ್ಞಾನವು ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳ ತತ್ವಗಳನ್ನು ನಿರಂತರವಾಗಿ ಎತ್ತಿಹಿಡಿದಿದೆ’ ಎಂದರು.

ಮತದಾರರ ಪಟ್ಟಿಯಲ್ಲಿ ಕೆಲವು ಹೆಸರು ಬೇಕೆಂದೇ ತೆಗೆಯಲಾಗಿದೆ ಎಂಬ ಆಪ್‌ ಆರೋಪ ಸುಳ್ಳು. ಮತದಾರರ ಪಟ್ಟಿಗಳಲ್ಲಿನ ಯಾವುದೇ ಬದಲಾವಣೆಗೆ ಚುನಾವಣಾ ಆಯೋಗವು ಕಟ್ಟುನಿಟ್ಟಾಗಿ ಸರಿಯಾದ ಪ್ರಕ್ರಿಯೆಯನ್ನು ಅನುಸರಿಸುತ್ತದೆ ಎಂದರು.

ಅಲ್ಲದೆ, ಮತದಾನದ ಅಂಕಿ-ಅಂಶಗಳಲ್ಲಿ ಆಯೋಗ ಅಕ್ರಮ ಎಸಗುತ್ತಿದೆ ಎಂಬ ಆರೋಪವೂ ಸುಳ್ಳು ಎಂದು ಅವರು ಸ್ಪಷ್ಟಪಡಿಸಿದರು.

ಇನ್ನು ಚುನಾವಣೆ ವೇಳೆ ಎಲ್ಲ ಪಕ್ಷಗಳ ನಾಯಕರ ತಪಾಸಣೆ ನಡೆಯುವುದು ಸಹಜ. ಇದರಲ್ಲಿ ಯಾವುದೇ ತಾರತಮ್ಯ ಮಾಡಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಇದೇ ವೇಳೆ, ಚುನಾವಣೆಯಲ್ಲಿ ಪುಕ್ಕಟೆ ಭರವಸೆಗಳನ್ನು ತಡೆಯುವುದು ಅಯೋಗಕ್ಕೆ ಅಸಾಧ್ಯ ಎಂದು ಅವರು ನುಡಿದರು.