ಸಾರಾಂಶ
ನವದೆಹಲಿ : ‘ಟಿಪ್ಪು ಸುಲ್ತಾನ್ ವಾಸ್ತವವಾಗಿ ಇತಿಹಾಸದಲ್ಲಿ ಬಹಳ ಸಂಕೀರ್ಣ ವ್ಯಕ್ತಿ. ಟಿಪ್ಪು ಬಗ್ಗೆ ಆಯ್ದ ಅಂಶಗಳನ್ನು ಮಾತ್ರ ವೈಭವೀಕರಿಸಿ ಪ್ರಚಾರ ಮಾಡಲಾಗುತ್ತಿದೆ. ಅನೇಕ ಅಂಶಗಳನ್ನು ನಿರ್ಲಕ್ಷಿಸಲಾಗುತ್ತಿದೆ’ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅಭಿಪ್ರಾಯಪಟ್ಟಿದ್ದಾರೆ.
ಇತಿಹಾಸಕಾರ ವಿಕ್ರಮ್ ಸಂಪತ್ ಅವರ ‘ಟಿಪ್ಪು ಸುಲ್ತಾನ್: ದಿ ಸಾಗಾ ಆಫ್ ದಿ ಮೈಸೂರು ಇಂಟರ್‌ರೆಗ್ನಮ್’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಒಂದೆಡೆ ಭಾರತದ ಮೇಲೆ ಬ್ರಿಟಿಷರ ವಸಾಹತುಶಾಹಿ ನಿಯಂತ್ರಣವನ್ನು ವಿರೋಧಿಸಿದ ಪ್ರಮುಖ ವ್ಯಕ್ತಿ ಎಂಬ ಖ್ಯಾತಿ ಟಿಪ್ಪುಗಿದೆ. ಇನ್ನೊಂದು ಕಡೆ ಟಿಪ್ಪು ವಿರುದ್ಧ ಕೆಲವು ಪ್ರತಿಕೂಲ ಭಾವನೆ ಉಂಟು ಮಾಡುವ ಅಂಶಗಳೂ ಇವೆ. ಕೆಲ ಇತಿಹಾಸಕಾರರು ಟಿಪ್ಪುವಿನ ಆಯ್ದ ಅಂಶಗಳನ್ನು ಮಾತ್ರ ವೈಭವೀಕರಿಸಿದ್ದಾರೆ. ಆದರೆ ವಿಕ್ರಮ್ ಸಂಪತ್ ಅವರ ಪುಸ್ತಕ ಟಿಪ್ಪುವಿನ ಎಲ್ಲ ಆಯಾಮಗಳನ್ನು ತೆರೆದಿಟ್ಟಿದೆ. ಟಿಪ್ಪು ಹೇಗಿದ್ದ ಎಂಬುದನ್ನು ಓದುಗರೇ ನಿರ್ಧರಿಸಲಿದ್ದಾರೆ’ ಎಂದರು.
ಟಿಪ್ಪು ಹೊಂದಿದ್ದ ಎನ್ನಲಾದ ವಿರೋಧಾಭಾಸಗಳನ್ನು ವಿಶ್ಲೇಷಿಸಿದ ಅವರು, ‘ಬ್ರಿಟಿಷರ ವಿರುದ್ಧ ದನಿ ಎತ್ತಿದ ಪ್ರಮುಖ ವ್ಯಕ್ತಿ ಎಂಬ ಖ್ಯಾತಿ ಟಿಪ್ಪುಗಿದೆ. ಟಿಪ್ಪು ಬ್ರಿಟಿಷರ ವಿರೋಧಿ ವ್ಯಕ್ತಿ ಎಂಬುದು ನಿಸ್ಸಂದೇಹ. ಟಿಪ್ಪುವಿನ ಸೋಲು ಹಾಗೂ ಆತನ ಸಾವು ದಕ್ಷಿಣ ಭಾರತದ ಇತಿಹಾಸದಲ್ಲೇ ಒಂದು ಟರ್ನಿಂಗ್ ಪಾಯಿಂಟ್. ಆದರೆ ಇದೇ ವೇಳೆ, ಆತ ಫ್ರೆಂಚರ ಜತೆ ಹೊಂದಾಣಿಕೆ ಮಾಡಿಕೊಳ್ಳಲು ಹಿಂಜರಿಯಲಿಲ್ಲ. ಇದು ಆತ ‘ವಿದೇಶಿ-ವಿರೋಧಿ ಮನಸ್ಥಿತಿ ಹೊಂದಿದ್ದ’ ಎಂಬ ತೀರ್ಮಾನಕ್ಕೆ ಬರಲು ಅಡ್ಡಿ ಮಾಡುವ ಅಂಶವಾಗಿದೆ’ ಎಂದರು.
‘ಮೈಸೂರು, ಕೊಡಗು, ಮಲಬಾರ್ ಪ್ರದೇಶದಲ್ಲಿ ಟಿಪ್ಪು ಸುಲ್ತಾನ್ ಆಳ್ವಿಕೆಯ ‘ಪ್ರತಿಕೂಲ’ ಪರಿಣಾಮಗಳ ಬಗ್ಗೆ ಇತಿಹಾಸದಲ್ಲಿ ವಿಶ್ಲೇಷಿಸಲಾಗಿದೆ. ಟಿಪ್ಪು ಆಳ್ವಿಕೆಯ ಬಗ್ಗೆ ಮೈಸೂರಿನಲ್ಲೇ ಮಿಶ್ರ ಪ್ರತಿಕ್ರಿಯೆಗಳಿವೆ. ಆದರೆ ಇತಿಹಾಸದಲ್ಲಿ ಆಯ್ದ ಅಂಶಗಳನ್ನು ಮಾತ್ರ ವೈಭವೀಕರಿಸಿ ಉಳಿದ ವಿಷಯಗಳನ್ನು ನಿರ್ಲಕ್ಷಿಸಲಾಗಿದೆ’ ಎಂದು ಅವರು ವಿಷಾದಿಸಿದರು.
ಫ್ರೆಂಚ್ ಹಾಗೂ ಟರ್ಕಿಯಂತಹ ವಿದೇಶಿ ಪಾಲುದಾರರಿಂದ ಟಿಪ್ಪು ಕಂಡಿದ್ದ ನಿರೀಕ್ಷೆಗಳು, ಅದಕ್ಕಾಗಿ ನೀಡಲು ಉದ್ದೇಶಿಸಿದ್ದ ಕೊಡುಗೆಗಳು ಆತನ ಮನಸ್ಥಿತಿಯನ್ನು ತಿಳಿಸುತ್ತವೆ ಎಂದರು.
;Resize=(690,390))
;Resize=(128,128))
;Resize=(128,128))
;Resize=(128,128))
;Resize=(128,128))