ಸಾರಾಂಶ
ಪುಣೆ: ಶ್ರೀಮಂತ ಅಪ್ರಾಪ್ತನೊಬ್ಬ ಐಷಾರಾಮಿ ಪೋರ್ಷೆ ಕಾರನ್ನು ಯರ್ರಾಬಿರ್ರಿ ಚಲಾಯಿಸಿ ಯುವ ದಂಪತಿಗಳ ಸಾವಿಗೆ ಕಾರಣನಾದ ಘಟನೆಗೆ ಸಂಬಂಧಿಸಿದಂತೆ ಬಾಲಾರೋಪಿಯ ತಂದೆಯನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಅಪ್ರಾಪ್ತ ಬಾಲಕನಿಗೆ ಮದ್ಯ ನೀಡಿದ್ದಕ್ಕೆ ಎರಡು ಹೋಟೆಲ್‌ನ ಮೂವರು ಸಿಬ್ಬಂದಿಗಳನ್ನು ಕೂಡ ಬಂಧಿಸಲಾಗಿದ್ದು, ಬಾರ್ ಅನ್ನು ಪೊಲೀಸರು ಸೀಲ್ ಮಾಡಿದ್ದಾರೆ.ಬಾಲಕನ ತಂದೆಯ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ತನ್ನ ಮಗನಿಗೆ ವಾಹನ ಪರಾವಾನಗಿ ಇಲ್ಲ ಎನ್ನುವ ವಿಚಾರ ತಿಳಿದಿದ್ದರೂ ಕೂಡ ಕಾರು ನೀಡಿದ್ದಕ್ಕೆ ಕೇಸ್ ದಾಖಲಿಸಿ ಬಂಧಿಸಿದ್ದಾರೆ. ಇದರ ಜೊತೆಗೆ ಬಾರ್‌ನಲ್ಲಿ ಬಾಲಕ ಮದ್ಯ ಸೇವಿಸಿರುವುದು ಸಿಸಿಟಿವಿಯಲ್ಲಿ ದೃಢವಾಗಿತ್ತು, ಹೀಗಾಗಿ ಅಪ್ರಾಪ್ತರಿಗೆ ಮದ್ಯ ವಿತರಿಸಿದ ಕಾರಣಕ್ಕೆ ಹೋಟೆಲ್ ಮಾಲೀಕನೂ ಸೇರಿದಂತೆ ಮೂವರ ಬಂಧನವಾಗಿದೆ.ಭಾನುವಾರ ಅಪಘಾತ ಮಾಡಿ ಇಬ್ಬರು ಸಾವಿಗೆ ಕಾರಣನಾಗಿದ್ದ ಬಾಲಕನ ಬಂಧನವಾದ 14 ಗಂಟೆಯಲ್ಲಿಯೇ ನ್ಯಾಯಾಲಯ ಜಾಮೀನು ನೀಡಿತ್ತು. ಜೊತೆಗೆ 15 ದಿನಗಳ ಕಾಲ ಸಂಚಾರಿ ಪೊಲೀಸರ ಜೊತೆ ಕೆಲಸ ಮಾಡುವ ಶಿಕ್ಷೆ, ರಸ್ತೆ ಅಪಘಾತ ಮತ್ತು ಅದನ್ನು ತಡೆಗಟ್ಟುವ ಬಗ್ಗೆ 300 ಪದಗಳ ಪ್ರಬಂಧ ಬರೆಯಲು ಕೋರ್ಟ್ ಸೂಚಿಸಿತ್ತು. ಈ ಬಗ್ಗೆ ಪೊಲೀಸರು ಮೇಲ್ಮನವಿ ಹೋಗುವುದಕ್ಕೆ ನಿರ್ಧರಿಸಿದ್ದರು. ಈ ಬೆನ್ನಲ್ಲೇ ತಂದೆಯ ಬಂಧನವಾಗಿದೆ.