ಸಾರಾಂಶ
ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ವಿರುದ್ಧ ಮತ್ತೆ ಚಾಟಿ ಬೀಸಿರುವ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ‘ಗವರ್ನರ್‌ಗಳು ಕೇಂದ್ರ ಮತ್ತು ರಾಜ್ಯಗಳ ನಡುವೆ ಅಂಚೆಯವ ಇದ್ದಂತೆ’ ಎಂದು ವ್ಯಂಗ್ಯವಾಡಿದ್ದಾರೆ.
ಚೆನ್ನೈ: ತಮ್ಮ ಅಂಕಿತಕ್ಕೆ ಬಂದ ಮಸೂದೆಗಳನ್ನು ಬಹುಕಾಲ ತಡೆಹಿಡಿದು ಸುಪ್ರೀಂ ಕೋರ್ಟಿಂದ ಛೀಮಾರಿಗೆ ಗುರಿಯಾದ ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ವಿರುದ್ಧ ಮತ್ತೆ ಚಾಟಿ ಬೀಸಿರುವ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ‘ಗವರ್ನರ್‌ಗಳು ಕೇಂದ್ರ ಮತ್ತು ರಾಜ್ಯಗಳ ನಡುವೆ ಅಂಚೆಯವ ಇದ್ದಂತೆ’ ಎಂದು ವ್ಯಂಗ್ಯವಾಡಿದ್ದಾರೆ.
ಪತ್ರಿಕಾ ಸಂದರ್ಶನ ನೀಡಿದ ಸ್ಟಾಲಿನ್, ‘ರಾಜ್ಯಪಾಲರ ಅಧಿಕಾರವು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವಿನ ಪೋಸ್ಟ್‌ಮ್ಯಾನ್ ಆಗಿರುವುದಕ್ಕೆ ಸೀಮಿತವಾಗಿದೆ ಎಂಭ ಡಿಎಂಕೆ ನಿಲುವನ್ನು ಸುಪ್ರೀಂ ಕೋರ್ಟ್ ಮಾನ್ಯ ಮಾಡಿದೆ. ಪ್ರಜಾಪ್ರಭುತ್ವದಲ್ಲಿ ಜನರಿಂದ ಆಯ್ಕೆಯಾದ ಸರ್ಕಾರಕ್ಕೆ ಮಾತ್ರ ಶಾಸನ ರಚಿಸುವ ಅಧಿಕಾರವಿದೆ. ರಾಜ್ಯಪಾಲರದ್ದು ಬರಿ ಗೌರವಾನ್ವಿತ ಹುದ್ದೆ. ಶಾಸಕಾಂಗದ ಅಧಿಕಾರವನ್ನು ದುರ್ಬಲಗೊಳಿಸಲು ಆಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ಸ್ಪಷ್ಟಪಡಿಸಿದೆ’ ಎಂದು ಅವರು ಹೇಳಿದರು.
ಇದೇ ವೇಳೆ ರವಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ರಾಜ್ಯಪಾಲರು ಅನೈತಿಕ ರಾಜಕಾರಣದಲ್ಲಿ ತೊಡಗಿದ್ದಾರೆ. ಕುಲಪತಿಯಾಗಿರುವ ಅವರು ವಿಶ್ವವಿದ್ಯಾಲಯಗಳನ್ನು ಕೇಸರೀಕರಣಗೊಳಿಸಲು ತಮ್ಮ ಅಧಿಕಾರವನ್ನು ಬಳಸುತ್ತಿದ್ದಾರೆ’ ಎಂದು ಆರೋಪಿಸಿದರು.