ಭೂಕುಸಿತದಿಂದ ಸಂಕಷ್ಟಕ್ಕೆ ಸಿಲುಕಿದ 30 ಜನರ ಜೀವ ಕಾಪಾಡಿ ದುರಂತ ಅಂತ್ಯಕಂಡ ಪ್ರಜೀಶ್‌, ಶರತ್‌ಬಾಬು

| Published : Aug 06 2024, 12:33 AM IST / Updated: Aug 06 2024, 06:15 AM IST

ಸಾರಾಂಶ

ಭೂಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರ ನೆರವಿಗೆ ನಿಂತ ಇಬ್ಬರು ಯುವಕರು ಕೊನೆಗೆ ತಾವೇ ಬಲಿಯಾಗಿದ್ದಾರೆ. ಚೂರಲ್‌ಮಲೈ ನಿವಾಸಿಗಳಾದ ಸೇವಾಭಾರತಿ ಸಂಸ್ಥೆಯ ಪ್ರಜೀಶ್ ಮತ್ತು ಶರತ್‌ ಬಾಬು ಈ ಸಾಹಸಿಗಳು.

ವಯನಾಡ್‌: ಭೂಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರ ನೆರವಿಗೆ ನಿಂತ ಇಬ್ಬರು ಯುವಕರು ಕೊನೆಗೆ ತಾವೇ ಬಲಿಯಾಗಿದ್ದಾರೆ. ಚೂರಲ್‌ಮಲೈ ನಿವಾಸಿಗಳಾದ ಸೇವಾಭಾರತಿ ಸಂಸ್ಥೆಯ ಪ್ರಜೀಶ್ ಮತ್ತು ಶರತ್‌ ಬಾಬು ಈ ಸಾಹಸಿಗಳು.

ಗೆಳೆಯರ ಎಚ್ಚರಿಕೆಯನ್ನೂ ಲೆಕ್ಕಿಸದ ಪ್ರಜೀಶ್ ಮುಂಡಕ್ಕೈನಲ್ಲಿ ಮಧ್ಯರಾತ್ರಿ ಒಂದು ಗಂಟೆಗೆ ಭೂಕುಸಿತ ಸಂಭವಿಸುತ್ತಿದ್ದಂತೆ ಕತ್ತಲಲ್ಲೇ ಜನರ ರಕ್ಷಣೆಗೆ ಧಾವಿಸಿದ್ದಾರೆ. ಈ ವೇಳೆ ಬೆಟ್ಟದಿಂದ ಉರುಳಿದ ಬಂಡೆ ಆತನನ್ನು ಗಾಡಿ ಸಮೇತ ಹೊಸಕಿ ಹಾಕಿರಬಹುದು ಎನ್ನಲಾಗಿದೆ.

ಇತ್ತ ತನ್ನ ಮನೆಯ ಮಾಡು ಹಾರಿದಾಗ ಹೆತ್ತವರನ್ನು ಸುರಕ್ಷಿತ ಜಾಗಕ್ಕೆ ತಲುಪಿಸಿದ ಶರತ್ ಉಳಿದ 18 ಮಂದಿಯ ರಕ್ಷಣೆಗೆ ಧಾವಿಸಿದ್ದರು. ಆದರೆ ಅವರನ್ನು ರಕ್ಷಿಸಿದ ನಂತರ ಕಾಣೆಯಾಗಿದ್ದು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.

ಸೇವಾಭಾರತಿ ಶ್ಲಾಘಿಸಿದ ಕೇರಳದ ಚರ್ಚ್‌ ಪಾದ್ರಿ

ಮೆಪ್ಪಾಡಿ: ಆರ್‌ಎಸ್‌ಎಸ್‌ ಪ್ರೇರಿತ ಸಂಸ್ಥೆಯಾದ ಸೇವಾಭಾರತಿ ಭೂಕುಸಿತದ ಸಂದರ್ಭದಲ್ಲಿ ಜನರ ಸೇವೆಗೆ ಧಾವಿಸಿದ್ದನ್ನು ಮೆಪ್ಪಾಡಿ ಚರ್ಚ್‌ನ ಪಾದ್ರಿ ಶ್ಲಾಘಿಸಿದ್ದಾರೆ.ಸಂಕಷ್ಟದ ಸಮಯದಲ್ಲಿ ಈ ಸಂಸ್ಥೆ ಜನರಿಗೆ ನೆರವಾದ ರೀತಿ ನೋಡಿದ ಪಿ.ವಿ. ಚೆರಿಯನ್‌ ಸೇವಾಭಾರತಿಯನ್ನು ಪ್ರಶಂಸಿಸಿದ್ದಾರೆ. ಅಲ್ಲದೆ ಸಂಘಟನೆ ಕುರಿತು ತಮಗೆ ಈ ಮೊದಲು ಇದ್ದ ಭಾವನೆ ಇದೀಗ ಬದಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಾರ್ಯಕರ್ತರಿಗೆ ತಮ್ಮ ಚರ್ಚ್‌ನಲ್ಲೇ ಉಳಿದುಕೊಳ್ಳುವ ವ್ಯವಸ್ಥೆ ಮಾಡಿಕೊಟ್ಟಿರುವುದಾಗಿ ಹೇಳಿದ್ದಾರೆ. ಜೊತೆಗೆ ಅವರ ಕಾರ್ಯಾಚರಣೆಗೆ ಚರ್ಚ್‌ನ ಆವರಣವನ್ನು ಬಳಸಲು ಅನುಮತಿಸಿದ್ದಾರೆ.

ಭೂಕುಸಿತ ಸಂಭವಿಸಿದ ಸ್ಥಳಕ್ಕೆ ಮೊತ್ತಮೊದಲು ಧಾವಿಸಿದ್ದ ಸೇವಾಭಾರತಿ, ಸೇನೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಪೊಲೀಸ್, ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಜೊತೆ ರಕ್ಷಣಾ ಕಾರ್ಯಾಚರಣೆಯಲ್ಲಿ ಕೈ ಜೋಡಿಸಿತ್ತು.