ಪ್ರಜ್ವಲ್‌ ವಿಕೃತ ಕಾಮಿ: ಸರ್ಕಾರಿ ವಕೀಲ

| Published : Jun 01 2024, 01:47 AM IST / Updated: Jun 01 2024, 04:56 AM IST

ಸಾರಾಂಶ

‘ಹಾಸನ ಸಂಸದ ಪ್ರಜ್ವಲ್ ರೇವಣ್ಣನನ್ನು ವಿಕೃತ ಕಾಮಿ ಅಂದರೂ ತಪ್ಪಾಗುವುದಿಲ್ಲ - ಎಸ್‌ಐಟಿ ಪರ ವಿಶೇಷ ಸರ್ಕಾರಿ ಅಭಿಯೋಜಕ ಅಶೋಕ್ ನಾಯ್ಕ್ ಪ್ರಬಲ ವಾದ ಮಂಡಿಸಿದರು.

 ಬೆಂಗಳೂರು :  ‘ಹಾಸನ ಸಂಸದ ಪ್ರಜ್ವಲ್ ರೇವಣ್ಣನನ್ನು ವಿಕೃತ ಕಾಮಿ ಅಂದರೂ ತಪ್ಪಾಗುವುದಿಲ್ಲ. ಅಮಾಯಕ ಮಹಿಳೆಯರ ಮೇಲೆ ಅಪ್ಪ (ರೇವಣ್ಣ) ಹಾಗೂ ಮಗ (ಪ್ರಜ್ವಲ್‌) ಮೃಗೀಯ ವರ್ತನೆ ತೋರಿದ್ದಾರೆ’ ಎಂದು ಕಠಿಣ ಶಬ್ದಗಳಲ್ಲೇ ನ್ಯಾಯಾಲಯದ ಮುಂದೆ ಎಸ್‌ಐಟಿ ಪರ ವಿಶೇಷ ಸರ್ಕಾರಿ ಅಭಿಯೋಜಕ ಅಶೋಕ್ ನಾಯ್ಕ್ ಪ್ರಬಲ ವಾದ ಮಂಡಿಸಿದರು.

ನಗರದ ಜನಪ್ರತಿನಿಧಿ ವಿಶೇಷ ನ್ಯಾಯಾಲಯದ ಮುಂದೆ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಬಂಧಿತ ಆರೋಪಿ ಪ್ರಜ್ವಲ್‌ರನ್ನು ಎಸ್ಐಟಿ ಹಾಜರುಪಡಿಸಿತು. ಆಗ ಹೆಚ್ಚಿನ ತನಿಖೆಗೆ ಎಸ್‌ಐಟಿ ವಶಕ್ಕೆ 15 ದಿನಗಳು ನೀಡುವಂತೆ ನ್ಯಾಯಾಲಯಕ್ಕೆ ಎಸ್‌ಪಿಪಿ ಅಶೋಕ್ ನಾಯ್ಕ್ ವಾದಿಸಿದರು. ಕೊನೆಗೆ ಆರೋಪಿಯನ್ನು ಆರು ದಿನಗಳ ಕಾಲ ಎಸ್‌ಐಟಿಗೆ ಒಪ್ಪಿಸಿ ನ್ಯಾಯಾಲಯ ಆದೇಶಿಸಿತು.

ಅಶೋಕ್ ವಾದ ವಿವರ ಹೀಗಿತ್ತು:

ಮೊದಲು ಪ್ರಜ್ವಲ್ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ಆನಂತರ ಅತ್ಯಾಚಾರ ಆಗಿದೆ ಎಂದು ಆ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಅತ್ಯಾಚಾರ ಪ್ರಕರಣ ದಾಖಲಾಯಿತು. ಸಂತ್ರಸ್ತೆಯು ಆರು ವರ್ಷ ಆರೋಪಿ ಮನೆಯಲ್ಲಿ ಕೆಲಸ ಮಾಡಿದ್ದಾಳೆ. ಆಗ ಆಕೆಗೆ ಪ್ರಜ್ವಲ್‌ ಅಪಾಯಕಾರಿ ಮನುಷ್ಯ ಎಂದು ಇತರೆ ಕೆಲಸಗಾರರು ಎಚ್ಚರಿಕೆ ಕೊಟ್ಟಿದ್ದರು. ಅದರಂತೆಯೇ ಸಂತ್ರಸ್ತೆ ಮೇಲೆ ಅಪ್ಪ-ಮಗ ಮೃಗೀಯ ವರ್ತನೆ ತೋರಿದ್ದಾರೆ. ತಮ್ಮ ಪೈಶಾಚಿಕ ಕೃತ್ಯಗಳು ಹೊರಬಾರದಂತೆ ಮಾಡಲು ಆರೋಪಿಗಳು ಮಾಧ್ಯಮಗಳ‍ ಮೇಲೆ ನಿರ್ಬಂಧಾಜ್ಞೆಯನ್ನು ತಂದಿದ್ದರು ಎಂದು ಹೇಳಿದರು.

ಅಲ್ಲದೆ, ಪ್ರಜ್ವಲ್‌ನನ್ನು ವಿಕೃತ ಕಾಮಿ ಎಂದರು ತಪ್ಪಾಗುವುದಿಲ್ಲ. ಎಲ್ಲ ಮಹಿಳೆಯರ ವಿಡಿಯೋ ಮಾಡಿದ್ದಾನೆ. ಆ ಸಂತ್ರಸ್ತೆಯರ ಮುಖ ಕಾಣುವಂತೆ ಆತ ವಿಡಿಯೋ ಮಾಡಿದ್ದಾನೆ ಎಂದು ಎಸ್‌ಪಿಪಿ ತೀಕ್ಷ್ಣ ಪದಗಳಿಂದ ವಾದಿಸಿದರು.

ಈ ಅಶ್ಲೀಲ ವಿಡಿಯೋ ಆಧರಿಸಿ ಪ್ರಜ್ವಲ್‌ನನ್ನು ಬಂಧಿಸಲಾಗಿದೆ. ಶೋಷಿತ ಮಹಿಳೆಯರಿಗೆ ವಿಡಿಯೋ ಕಾಲ್‌ ಮಾಡಿ ಬಟ್ಟೆ ಬಿಚ್ಚು ಅನ್ನುತ್ತಾನೆ. ಆಗ ವಿಡಿಯೋ ಮಾಡಿಕೊಂಡಿದ್ದಾನೆ. ಕೆಲವರ ಪೋಟೋ ತೆಗೆದಿದ್ದಾನೆ. ಅಷ್ಟು ವಿಕೃತ ಮನಸ್ಸಿನ ವ್ಯಕ್ತಿಯಾಗಿದ್ದಾನೆ. ಈತ ದೇಶ ಬಿಟ್ಟು ಪರಾರಿಯಾಗಿದ್ದ. ಸಾಕ್ಷ್ಯ ಮುಚ್ಚಿಡುವ ಪ್ರಯತ್ನ ಮಾಡಿದ್ದಾನೆ.

ಈಗ ಈತನಿಂದ ಶೋಷಣೆಗೊಳಗಾದ ಮಹಿಳೆಯರ ಬದುಕಿಗೆ ಬೆಂಕಿ ಬಿದ್ದಿದೆ. ಆ ಮಹಿಳೆಯರನ್ನು ಅವರ ಪತಿಯರು ಅನುಮಾನದಿಂದ ನೋಡುವಂತಾಗಿದೆ. ದೂರು ಕೊಡಲು ಸಂತ್ರಸ್ತೆಯರು ಹಿಂದೇಟು ಹಾಕುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಮೊಬೈಲ್‌ ವಶಕ್ಕೆ ಬೇಕು-ಎಸ್‌ಪಿಪಿ:

ಸಂತ್ರಸ್ತೆಯರ ಅಶ್ಲೀಲ ವಿಡಿಯೋ ಚಿತ್ರೀಕರಿಸಿಕೊಂಡಿದ್ದ ಪ್ರಜ್ವಲ್‌ ಮೊಬೈಲ್ ಜಪ್ತಿ ಮಾಡಬೇಕಿದೆ. ಈತನೇ ವಿಡಿಯೋ ಚಿತ್ರೀಕರಿಸಿದ್ದಾನೆ. ಆ ಮೊಬೈಲ್‌ನಲ್ಲಿ ಫೇಸ್ ಲಾಕ್ ವ್ಯವಸ್ಥೆ ಇತ್ತು. ಪ್ರಜ್ವಲ್ ಹಾಗೂ ಆತನ ಸ್ನೇಹಿತ ಮಧುಗೆ ಮಾತ್ರ ಫೇಸ್‌ ಲಾಕ್ ಓಪನ್ ಮಾಡುವ ಅವಕಾಶವಿತ್ತು. ಈ ಇಬ್ಬರಲ್ಲಿ ವಿಡಿಯೋ ಹರಿಬಿಟ್ಟವರು ಯಾರು ಎಂಬುದು ಗೊತ್ತಾಗಬೇಕಿದೆ. ಇದಲ್ಲದೆ ಬೇರೆ ಡಿವೈಸ್‌ಗಳನ್ನು ಸಹ ಜಪ್ತಿ ಮಾಡಬೇಕಿದೆ ಎಂದು ಎಸ್‌ಪಿಪಿ ಹೇಳಿದರು.

ವಿದೇಶದಲ್ಲಿ ಎಲ್ಲಿದ್ದೆ ಎಂದು ಪ್ರಜ್ವಲ್‌ ರೇವಣ್ಣ ಹೇಳುತ್ತಿಲ್ಲ

ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್‌ ಬಳಸಿ ವಿದೇಶಕ್ಕೆ ಪ್ರಜ್ವಲ್ ಹೋಗಿದ್ದ. ಆದರೆ ಇಷ್ಟು ದಿನಗಳು ಎಲ್ಲಿದ್ದೆ ಎಂಬ ಸಂಗತಿಯನ್ನು ಆತ ಬಾಯಿಬಿಡುತ್ತಿಲ್ಲ ಎಂದು ಎಸ್‌ಪಿಪಿ ಇದೇ ವೇಳೆ ಹೇಳಿದರು.