ಸಾರಾಂಶ
ಮುಂಬೈ: ಈ ಬಾರಿ ಕೇಂದ್ರದಲ್ಲಿ ಮತ್ತೆ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಮರಳುವುದು ಖಚಿತ ಎಂದಿರುವ ಚುನಾವಣಾ ರಣತಂತ್ರಗಾರ ಪ್ರಶಾಂತ್ ಕಿಶೋರ್, ಅದು ಎಷ್ಟು ಸ್ಥಾನ ಗೆಲ್ಲಬಹುದು ಎನ್ನುವುದಷ್ಟೇ ಕುತೂಹಲ ಎಂದು ಭವಿಷ್ಯ ನುಡಿದಿದ್ದಾರೆ.
ಅಲ್ಲದೆ, ‘ಈ ಬಾರಿ ಬಿಜೆಪಿ 370, ಎನ್‌ಡಿಎ 400 ಎಂಬ ಘೋಷಣೆ ಇಡೀ ಚುನಾವಣೆಯ ದಿಕ್ಕನ್ನೇ ಬದಲಿಸಿದೆ. ಬಹುಮತದ ಬದಲು 370ರ ಬಗ್ಗೆ ಮಾತ್ರ ಚರ್ಚೆ ಇದರಿಂದ ಆರಂಭವಾಗಿದೆ. ಇಂಥದ್ದೊಂದು ಘೋಷಣೆಯನ್ನೇ ಇಡೀ ಚುನಾವಣಾ ಚರ್ಚೆಯ ಕೇಂದ್ರಬಿಂದು ಮಾಡಿದ್ದು ಮೋದಿ ಮತ್ತು ಅವರ ತಂಡದ ಹೆಗ್ಗಳಿಕೆ’ ಎಂದು ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದಾರೆ.ಎನ್‌ಡಿಟೀವಿ ಸುದ್ದಿವಾಹಿನಿಗೆ ಸಂದರ್ಶನ ನೀಡಿರುವ ಪ್ರಶಾಂತ್ ಕಿಶೋರ್, ‘ಬಿಜೆಪಿ ಈ ಬಾರಿ ಕಳೆದ ಬಾರಿ ಗೆದ್ದ 303 ಸ್ಥಾನಕ್ಕಿಂತ ಸ್ವಲ್ಪ ಕಡಿಮೆ ಅಥವಾ ಸ್ವಲ್ಪ ಹೆಚ್ಚು ಸ್ಥಾನ ಗೆಲ್ಲಬಹುದು. ಆದರೆ 370ರ ಗುರಿ ಮುಟ್ಟುವುದು ಕಷ್ಟ. ಆದರೆ ಇಂಥ ಘೋಷಣೆ ಮೂಲಕ, ಬಿಜೆಪಿ ಮತ್ತು ಮೋದಿ ಇಡೀ ಚರ್ಚೆಯ ವಿಷಯವನ್ನೇ ಬಹುಮತಕ್ಕೆ ಅಗತ್ಯವಾದ 272ರ ಬದಲಿಗೆ ಬಿಜೆಪಿ ಈ ಬಾರಿ 370 ಸ್ಥಾನ ಗೆಲ್ಲಲಿದೆ ಎಂಬಲ್ಲಿಗೆ ವರ್ಗಾಯಿಸಿದರು. ಈಗ ಯಾರೂ ಬಿಜೆಪಿ 272 ಸ್ಥಾನ ಗೆಲ್ಲುವ ಬಗ್ಗೆ ಮಾತನಾಡುತ್ತಿಲ್ಲ. ಯಾರೂ ಮೋದಿ ಸೋಲುತ್ತಾರೆ ಎನ್ನುತ್ತಿಲ್ಲ. ಎಲ್ಲರೂ ಬಿಜೆಪಿ 370 ಸ್ಥಾನ ಗೆಲ್ಲಲ್ಲ ಎಂಬಲ್ಲಿಗೆ ಚರ್ಚೆ ನಡೆಸುತ್ತಿದ್ದಾರೆ’ ಎಂದು ಪ್ರಶಾಂತ್ ಕಿಶೋರ್ ಹೇಳಿದರು.
ಮೋದಿಗೆ ಏಕೆ ಗೆಲುವು?:ಆಡಳಿತಾರೂಢ ಬಿಜೆಪಿ ಬಗ್ಗೆ ದೊಡ್ಡ ಮಟ್ಟದ ಆಕ್ರೋಶ ಇಲ್ಲ. ಬಿಜೆಪಿ ಬಗ್ಗೆ ಒಂದಷ್ಟು ನಿರಾಸೆ, ಕೆಲ ಭರವಸೆ ನೀಡಿಲ್ಲ ಎಂಬ ಅಸಮಾಧಾನ ಇರಬಹುದು. ಆದರೆ ದೊಡ್ಡ ಮಟ್ಟದ ಆಕ್ರೋಶ ಇಲ್ಲೂ ಇಲ್ಲ. ಮತ್ತೊಂದೆಡೆ ಈ ವ್ಯಕ್ತಿ ಆಯ್ಕೆಯಾದರೆ ನಮ್ಮ ಸಮಸ್ಯೆ ಸರಿ ಹೋಗಬಹುದು ಎಂದು ಬಿಜೆಪಿ ಅಥವಾ ಮೋದಿಗೆ ಸವಾಲು ಹಾಕುವ ವ್ಯಕ್ತಿ ಯಾರೂ ಕಾಣುತ್ತಿಲ್ಲ. ಮೋದಿಗೆ ರಾಹುಲ್ ಸವಾಲು ಹಾಕಬಲ್ಲರು ಎಂದು ಅವರ ಬೆಂಬಲಿಗರು ಹೇಳಬಹುದು, ಆದರೆ ನಾನು ಅಂದುಕೊಂಡಿಲ್ಲ.
ಇನ್ನೊಂದೆಡೆ ದೇಶದ ಉತ್ತರ ಮತ್ತು ಪಶ್ಚಿಮದ ರಾಜ್ಯಗಳಲ್ಲಿನ 325 ಸ್ಥಾನಗಳು ಬಿಜೆಪಿಯ ಪ್ರಮುಖ ಶಕ್ತಿಕೇಂದ್ರ. ಅಲ್ಲಿ ಬಿಜೆಪಿ ಬಲ ಕಳೆದುಕೊಳ್ಳುವ ಸಾಧ್ಯತೆ ಇಲ್ಲ. ಇನ್ನೊಂದೆಡೆ 225 ಸ್ಥಾನ ಹೊಂದಿರುವ ದಕ್ಷಿಣ ಮತ್ತು ಪೂರ್ವದಲ್ಲೂ ಈ ಬಾರಿ ಬಿಜೆಪಿ ಬಲ ಹೆಚ್ಚಬಹುದು. ಹೀಗಾಗಿ ಮತ್ತೊಮ್ಮೆ ಮೋದಿ ಆಯ್ಕೆ ಖಚಿತ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.370ಕ್ಕಿಂತ ಕಮ್ಮಿ ಗೆದ್ದರೆ ಷೇರುಪೇಟೆ ಕುಸಿತ: ಪಿಕೆಒಂದು ವೇಳೆ ಬಿಜೆಪಿ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಿರುವ 370 ಸ್ಥಾನ ಗೆಲ್ಲುವ ಗುರಿ ಮುಟ್ಟದೇ ಹೋದಲ್ಲಿ ಫಲಿತಾಂಶ ಪ್ರಕಟವಾಗುವ ಜೂ.4ರಂದು ಷೇರುಪೇಟೆ ಕುಸಿತ ಕಾಣಬಹುದು ಎಂದು ಕಿಶೋರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.