ಸಾರಾಂಶ
ಪಣಜಿ: ಮಹದಾಯಿ ನದಿ ಜಲಾನಯನ ಪ್ರದೇಶದ ಜಂಟಿ ಪರಿಶೀಲನೆಗಾಗಿ ಗೋವಾ ಸರ್ಕಾರ ಮಾಡಿದ್ದ ಮನವಿಯನ್ನು ‘ಕಲ್ಯಾಣ ಮತ್ತು ಸಾಮರಸ್ಯ ಮಹದಾಯಿ ಪ್ರಗತಿಶೀಲ ನದಿ ಪ್ರಾಧಿಕಾರ’ (ಪ್ರವಾಹ್) ಸ್ವೀಕರಿಸಿದೆ ಎಂದು ಗೋವಾ ಸಚಿವ ಸುಭಾಷ್ ಶಿರೋಡ್ಕರ್ ಶುಕ್ರವಾರ ಹೇಳಿದ್ದಾರೆ.
ಮಹದಾಯಿ ಜಲವಿವಾದ ನ್ಯಾಯಾಧಿಕರಣದ ತೀರ್ಪು ಮತ್ತು ತೀರ್ಪುಗಳ ಅನುಷ್ಠಾನಕ್ಕೆ ಚುರುಕು ಮುಟ್ಟಿಸಲು ಕೇಂದ್ರ ಸರ್ಕಾರವು ಕಳೆದ ವರ್ಷ ಸಂಸ್ಥೆಯೊಂದನ್ನು ರಚಿಸಿತ್ತು. ಅದಕ್ಕ ಪ್ರವಾಹ್ ಎನ್ನುತ್ತಾರೆ.
ಈ ಬಗ್ಗೆ ಶುಕ್ರವಾರ ಮಾಹಿತಿ ನೀಡಿದ ಶಿರೋಡ್ಕರ್, ‘ಮಲಪ್ರಭಾ ಜಲಾನಯನ ಪ್ರದೇಶಕ್ಕೆ ನೀರನ್ನು ತಿರುಗಿಸಲು ಕರ್ನಾಟಕವು ಕಾಲುವೆಗಳನ್ನು (ಕಳಸಾ-ಬಂಡೂರಿ ನಾಲೆ) ಅಗೆಯಲು ಪ್ರಾರಂಭಿಸಿದೆ ಎಂದು ಮಾಧ್ಯಮ ವರದಿಗಳು ವರದಿ ಮಾಡಿದ್ದವು. ಹೀಗಾಗಿ ಕರ್ನಾಟಕದ ಕಣಕುಂಬಿಯಲ್ಲಿ ಆಯಾ ರಾಜ್ಯಗಳ ಜತೆ ಜಂಟಿ ತಪಾಸಣೆಗೆ ಕೋರಿ ರಾಜ್ಯ ಸರ್ಕಾರವು ಪ್ರವಾಹ್‌ಗೆ ಪತ್ರ ಬರೆದಿತ್ತು. ಇದಕ್ಕೆ ಅದು ಒಪ್ಪಿದೆ’ ಎಂದಿದ್ದಾರೆ.
ಅಲ್ಲದೆ, ‘ಇದರ ಪರಿಶೀಲನೆಗಾಗಿ ತಮ್ಮ ಅನುಕೂಲಕ್ಕೆ ತಕ್ಕಂತೆ ದಿನಾಂಕಗಳನ್ನು ನೀಡುವಂತೆ ರಾಜ್ಯಗಳಿಗೆ ಪ್ರಾಧಿಕಾರವು ಕೇಳಿದೆ’ ಎಂದು ಅವರು ಹೇಳಿದರು.ಮಹದಾಯಿ ನದಿ ಕರ್ನಾಟಕದಲ್ಲಿ ಹುಟ್ಟುತ್ತದೆ ಮತ್ತು ಕೊಂಚ ಮಹಾರಾಷ್ಟ್ರದಲ್ಲಿ ಸಾಗಿ ನಂತಗರ ಗೋವಾದ ಪಣಜಿ ಬಳಿ ಅರಬ್ಬಿ ಸಮುದ್ರವನ್ನು ಸೇರುತ್ತದೆ. ಮಲಪ್ರಭಾ ಜಲಾನಯನ ಪ್ರದೇಶಕ್ಕೆ ಮಹದಾಯಿ ನದಿ ನೀರನ್ನು ತಿರುಗಿಸಲು ಖಾನಾಪುರ ತಾಲೂಕಿನ ಕಣಕುಂಬಿಯಲ್ಲಿ ಅಣೆಕಟ್ಟು ನಿರ್ಮಿಸಲು ಕರ್ನಾಟಕ ಯೋಜಿಸಿದೆ. ಆದರೆ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಅಂತಾರಾಜ್ಯ ಜಲ ವಿವಾದ ನ್ಯಾಯಾಧಿಕರಣ ಆದೇಶ ನೀಡಿದ್ದರೂ, ಅದನ್ನು ಪ್ರಶ್ನಿಸಿ ಗೋವಾ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ಏನಿದು ವಿವಾದ?
- ಮಹದಾಯಿ ನ್ಯಾಯಾಧಿಕರಣದ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಹೋಗಿರುವ ಗೋವಾ
- ಆದರೂ ಕಳಸಾ-ಬಂಡೂರಿ ನಾಲೆ ನಿರ್ಮಾಣ ಕಾಮಗಾರಿ ಕರ್ನಾಟಕ ನಿಲ್ಲಿಸಿಲ್ಲ ಎಂದು ಕೇಂದ್ರಕ್ಕೆ ಗೋವಾ ದೂರು
ಈ ದೂರಿನ ಪರಿಶೀಲನೆ ನಡೆಸಲು ಕೇಂದ್ರ ಸರ್ಕಾರ ರಚಿಸಿರುವ ಪ್ರವಾಹ್ ಸಂಸ್ಥೆ ಒಪ್ಪಿಗೆ
- ಅನುಕೂಲದ ದಿನಾಂಕ ತಿಳಿಸಿ ಎಂದು ಎರಡೂ ರಾಜ್ಯಗಳಿಗೆ ಪ್ರವಾಹ್ ಸಂಸ್ಥೆ ನೋಟಿಸ್