ಸಾರಾಂಶ
ಲಾಸ್ ಏಂಜಲೀಸ್: ಅಮೆರಿಕದ ಲಾಸ್ ಏಂಜಲೀಸ್ ನಗರದ ಹೊರವಲಯದಲ್ಲಿ ಕಾಣಿಸಿಕೊಂಡಿರುವ ಕಾಡ್ಗಿಚ್ಚು ನಿಯಂತ್ರಣಕ್ಕೆ ಭಾರೀ ಪ್ರಯತ್ನ ನಡೆಸಿರುವ ಹೊರತಾಗಿಯೂ, ಅಗ್ನಿಯ ಕೆನ್ನಾಲಿಗೆಗಳು ಮತ್ತಷ್ಟು ವಿನಾಶ ಮುಂದುವರೆಸಿವೆ.
ಶುಷ್ಕ ವಾತಾವರಣ ಮತ್ತು ಬಿಸಿಗಾಳಿ, ಪರಿಸ್ಥಿತಿ ನಿಯಂತ್ರಣದ ಕ್ರಮಗಳನ್ನು ವಿಫಲಗೊಳಿಸಿದ್ದು ಮತ್ತಷ್ಟು ಪ್ರದೇಶಗಳಿಗೆ ಬೆಂಕಿ ಹರಡಲು ಕಾರಣವಾಗಿದೆ. ಅಗ್ನಿ ನಿಯಂತ್ರಣಕ್ಕೆ 1354 ಅಗ್ನಿಶಾಮಕ ವಾಹನ, 84 ವಿಮಾನಗಳು ಮತ್ತು 14000ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಬಳಸಿಕೊಂಡಿದ್ದರೂ ಅದು ಫಲ ಕೊಡುತ್ತಿಲ್ಲ.
ಈಗಾಗಲೇ ಬೆಂಕಿಗೆ 16 ಜನರು ಬಲಿಯಾಗಿದ್ದು, 12000ಕ್ಕೂ ಹೆಚ್ಚು ಕಟ್ಟಡಗಳು ಸುಟ್ಟು ಬೂದಿಯಾಗಿವೆ. ಬೆಂಕಿಯ ಕೆನ್ನಾಲಿಗೆ ವಿಶ್ವವಿಖ್ಯಾತ ಜೆ.ಪೌಲ್ ಗೆಟ್ಟಿ ಮ್ಯೂಸಿಯಂ ಮತ್ತು ಕ್ಯಾಲಿಪೋರ್ನಿ ವಿಶ್ವವಿದ್ಯಾಲಯಕ್ಕೂ ವ್ಯಾಪಿಸುವ ಆತಂಕ ಮನೆ ಮಾಡಿದೆ.
ಕಾಡ್ಗಿಚ್ಚಿನ ಹಿನ್ನೆಲೆಯಲ್ಲಿ ಈಗಾಗಲೇ ಸಾವಿರಾರು ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದ್ದು, ಅಗತ್ಯಬಿದ್ದರೆ ಇನ್ನಷ್ಟು ಮಂದಿಯನ್ನು ಮನೆ ಬಿಡುವಂತೆ ಸೂಚಿಸುವ ನಿರೀಕ್ಷೆ ಇದೆ. ಕಾಡ್ಗಿಚ್ಚು ಈಗಾಗಲೇ ಸ್ಯಾನ್‌ಫ್ರಾನ್ಸಿಸ್ಕೋ ನಗರಕ್ಕಿಂತಲೂ ದೊಡ್ಡದಾದ ಅಂದರೆ 145 ಚದರ ಕಿ.ಮೀ. ಪ್ರದೇಶವನ್ನು ಸುಟ್ಟು ಭಸ್ಮಮಾಡಿದೆ.
ಸದ್ಯಕ್ಕೆ ನಾವು ಸುರಕ್ಷಿತ: ಪ್ರೀತಿ ಜಿಂಟಾ
ನವದೆಹಲಿ: ಹಾಲಿವುಡ್ ಹಿಲ್ಸ್‌ನಲ್ಲಿ ಕಾಣಿಸಿಕೊಂಡಿರುವ ಭೀಕರ ಕಾಡ್ಗಿಚ್ಚಿನ ದೃಶ್ಯಗಳನ್ನು ನೋಡಿ ನನಗೆ ತೀವ್ರ ದುಃಖವಾಗಿದೆ. ಕಾಡ್ಗಿಚ್ಚು ಮಾಡಿ ಹೋದ ಇಂಥ ಭೀಕರ ಅನಾಹುತದ ದೃಶ್ಯಗಳನ್ನು ನನ್ನ ಜೀವಮಾನದಲ್ಲಿ ನೋಡುತ್ತೇನೆಂದು ನಾನು ಅಂದುಕೊಂಡಿರಲಿಲ್ಲ ಎಂದು ಬಾಲಿವುಡ್ ನಟಿ ಪ್ರೀತಿ ಝಿಂಟಾ ನೋವು ತೋಡಿಕೊಂಡಿದ್ದಾರೆ.
ಪತಿ, ಮಕ್ಕಳ ಜತೆಗೆ ಲಾಸ್‌ಏಂಜಲೀಸ್‌ನ ಹೊರವಲಯದಲ್ಲಿ ನೆಲೆಸಿರುವ ಪ್ರೀತಿ ಝಿಂಟಾ ಕಾಡ್ಗಿಚ್ಚು ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದು, ತಾನು ಮತ್ತು ತನ್ನ ಕುಟುಂಬ ಸುರಕ್ಷಿತವಾಗಿರುವುದಾಗಿ ತಿಳಿಸಿದ್ದಾರೆ.