ಸಾರಾಂಶ
ನವದೆಹಲಿ : ರಾಜ್ಯಪಾಲರು ಮಾತ್ರವಲ್ಲ, ಯಾವುದೇ ವಿಧೇಯಕಗಳಿಗೆ ಸಂಬಂಧಿಸಿ ನಿರ್ಧಾರ ತೆಗೆದುಕೊಳ್ಳಲು ರಾಷ್ಟ್ರಪತಿಗಳಿಗೂ ಸುಪ್ರೀಂ ಕೋರ್ಟ್ 3 ತಿಂಗಳ ಕಾಲಮಿತಿ ನಿಗದಿಪಡಿಸಿ ಆದೇಶ ಹೊರಡಿಸಿದೆ. ‘ರಾಜ್ಯಪಾಲರು ರಾಷ್ಟ್ರಪತಿಗಳ ಬಳಿ ಕಳುಹಿಸಿಕೊಡುವ ವಿಧೇಯಕದ ಕುರಿತು 3 ತಿಂಗಳೊಳಗೆ ಸೂಕ್ತ ನಿರ್ಧಾರ ಮಾಡಬೇಕು. ತಪ್ಪಿದಲ್ಲಿ ರಾಜ್ಯಗಳು ಕೋರ್ಟ್ ಮೆಟ್ಟಿಲೇರಬಹುದು‘ ಎಂದು ಅದು ತಿಳಿಸಿದೆ. ಸುಪ್ರೀಂ ಕೋರ್ಟು ಇಂಥ ಆದೇಶ ನೀಡಿದ್ದು ಇದೇ ಮೊದಲು.
ಏ.8ರಂದು ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಮತ್ತು ತಮಿಳುನಾಡು ಸರ್ಕಾರದ ನಡುವಿನ ಸಂಘರ್ಷಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ಈ ಆದೇಶದ ಪ್ರತಿಯನ್ನು ಇದೀಗ ಸುಪ್ರೀಂ ಕೋರ್ಟ್‌ನ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲಾಗಿದ್ದು, ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲ ಮತ್ತು ನ್ಯಾ। ಆರ್.ಮಹದೇವನ್ ಅವರ ದ್ವಿಸದಸ್ಯ ಪೀಠವು, ‘ಸಂವಿಧಾನದ 201ನೇ ವಿಧಿಯ ಪ್ರಕಾರ ರಾಷ್ಟ್ರಪತಿಗಳ ಕಾರ್ಯವನ್ನೂ ನ್ಯಾಯಾಲಯ ವಿರ್ಮಶೆಗೊಳಪಡಿಸಬಹುದು’ ಎಂದು ಅಭಿಪ್ರಾಯಪಟ್ಟಿದೆ.
ಶುಕ್ರವಾರ ತನ್ನ ತೀರ್ಪಿನಲ್ಲಿ ಸುಪ್ರೀಂ ಕೋರ್ಟು, 10 ವಿಧೇಯಕಗಳನ್ನು ಅನಿರ್ದಿಷ್ಟಾವಧಿ ವರೆಗೆ ಇಟ್ಟುಕೊಂಡು ಕಾಲಹರಣ ಮಾಡಿರುವ ತಮಿಳುನಾಡು ರಾಜ್ಯಪಾಲರ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ರಾಜ್ಯಪಾಲರ ಈ ನಡೆ ಸಂವಿಧಾನ ವಿರೋಧಿ. ತಮ್ಮ ಬಳಿ ಅನುಮೋದನೆಗಾಗಿ ಕಳುಹಿಸಿಕೊಡುವ ವಿಧೇಯಕಗಳಿಗೆ 3 ತಿಂಗಳೊಳಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಕಾಲಮಿತಿ ನಿಗದಿಪಡಿಸಿ ಮಹತ್ವದ ಆದೇಶ ನೀಡಿತ್ತು.
ರಾಷ್ಟ್ರಪತಿಗಳ ಬಗ್ಗೆ ಸುಪ್ರೀಂ ಆದೇಶ:
ಈಗ ಕೋರ್ಟ್ ವೆಬ್‌ಸೈಟ್‌ನಲ್ಲಿ ಹಾಕಲಾಗಿರುವ ಸಂಪೂರ್ಣ ಆದೇಶ ಪ್ರತಿಯಲ್ಲಿ ಮಸೂದೆ ಅಂಗೀಕಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿಗಳ ಪಾತ್ರದ ಬಗ್ಗೆಯೂ ವಿವರಿಸಲಾಗಿದೆ.
‘ಸಂವಿಧಾನದ 201ನೇ ವಿಧಿ ಪ್ರಕಾರ ರಾಜ್ಯಪಾಲರು ಕಳುಹಿಸಿಕೊಟ್ಟ ವಿಧೇಯಕಕ್ಕೆ ರಾಷ್ಟ್ರಪತಿಗಳು ಅಂಗೀಕಾರ ನೀಡಬಹುದು ಅಥವಾ ತಡೆಹಿಡಿಯಬಹುದು. ಸಂವಿಧಾನ ಈ ವಿಚಾರದಲ್ಲಿ ಯಾವುದೇ ಕಾಲಮಿತಿ ನಿಗದಿಪಡಿಸಿಲ್ಲವಾರೂ ರಾಜ್ಯಪಾಲರ ರೀತಿಯಲ್ಲೇ ರಾಷ್ಟ್ರಪತಿಗಳು ಕೂಡ ಪಾಕೆಟ್ ವಿಟೋ(ಆಂಶಿಕ ವಿಟೋ) ಅಧಿಕಾರ ಹೊಂದಿಲ್ಲ. ವಿಧೇಯಕಕ್ಕೆ ಒಪ್ಪಿಗೆ ನೀಡುವುದು ಅಥವಾ ತಿರಸ್ಕರಿಸುವ ಅಧಿಕಾರವಷ್ಟೇ ಅವರಿಗಿರುತ್ತದೆ’ ಎಂದು ಹೇಳಿದೆ.
‘ಶಾಸನಬದ್ಧ ಯಾವುದೇ ಅಧಿಕಾರವನ್ನು ಕಾಲಮಿತಿಯಲ್ಲಿ ಚಲಾಯಿಸಬೇಕೆಂಬುದು ಸಾಮಾನ್ಯ ಕಾನೂನು ನಿಯಮ. ಹೀಗಾಗಿ 201ನೇ ವಿಧಿಯೂ ಸಾಮಾನ್ಯ ಕಾನೂನಿನ ಈ ತತ್ವಕ್ಕೆ ಹೊರತಾಗಿಲ್ಲ. ಒಂದು ವೇಳೆ ವಿಧೇಯಕದ ವಿಚಾರದಲ್ಲಿ ನಿರ್ಧಾರಕ್ಕೆ ಬರುವಲ್ಲಿ 3 ತಿಂಗಳಿಗಿಂತ ಹೆಚ್ಚಿನ ಸಮಯ ಹಿಡಿದರೆ ರಾಷ್ಟ್ರಪತಿಗಳು ಸೂಕ್ತ ಕಾರಣಗಳನ್ನು ದಾಖಲಿಸಬೇಕು ಮತ್ತು ಆ ಕುರಿತು ಸಂಬಂಧಪಟ್ಟ ರಾಜ್ಯಗಳಿಗೆ ಮಾಹಿತಿ ನೀಡಬೇಕು’ ಎಂದು ಕೋರ್ಟ್ ಸೂಚಿಸಿದೆ.
ವಿಧೇಯಕಕ್ಕೆ ಸಂಬಂಧಿಸಿ 3 ತಿಂಗಳೊಳಗೆ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಸಂಬಂಧಪಟ್ಟ ರಾಜ್ಯಗಳು ಕೋರ್ಟ್ ಮೊರೆ ಹೋಗಬಹುದು ಎಂದು ಸಲಹೆ ನೀಡಿರುವ ಪೀಠ, ರಾಜ್ಯಗಳು ಕೂಡ ಕೇಂದ್ರ ಸರ್ಕಾರ ಎತ್ತಿದ ಪ್ರಶ್ನೆಗಳಿಗೆ ಉತ್ತರ ನೀಡಲು ಸಹಕಾರ ನೀಡಬೇಕು ಮತ್ತು ಕೇಂದ್ರ ಸರ್ಕಾರ ನೀಡಿದ ಸಲಹೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದೂ ತಿಳಿಸಿದೆ.
ಇದೇ ವೇಳೆ, ‘ರಾಜ್ಯಪಾಲರ ಹುದ್ದೆಯನ್ನು ನಾವೇನೂ ಕಡೆಗಣಿಸುತ್ತಿಲ್ಲ. ಅವರು ಕೇವಲ ಸಾಂವಿಧಾನಿಕ ಮೌಲ್ಯ ಎತ್ತಿಹಿಡಿಯಬೇಕು ಎಂಬುದಷ್ಟೇ ನಮ್ಮ ಆಶಯ’ ಎಂದು ಸ್ಪಷ್ಟಪಡಿಸಿದೆ.


;Resize=(128,128))
;Resize=(128,128))
;Resize=(128,128))
;Resize=(128,128))