ಹಳೆ ವಾಹನ ಗುಜರಿಗೆ ಹಾಕೋ ಬದಲು ಇ.ವಿ. ಮಾಡಲು ಸಲಹೆ

| Published : Jan 19 2024, 01:45 AM IST / Updated: Jan 19 2024, 12:18 PM IST

ಸಾರಾಂಶ

ಇವಿ ಪರಿವರ್ತನೆಗೆ ಪ್ರೋತ್ಸಾಹಧನ ನೀಡಿ ಎಂದು ಸರ್ಕಾರಕ್ಕೆ ಪ್ರೈಮಸ್‌-ಇಟಿಬಿ ವರದಿ ಸಲಹೆ ನೀಡಿದೆ.

ಪಿಟಿಐ ಮುಂಬೈ

ದೇಶದಲ್ಲಿ ಹಳೆಯ ವಾಹನಗಳನ್ನು ಗುಜರಿಗೆ ಹಾಕುವ ಬದಲು ಎಲೆಕ್ಟ್ರಿಕ್‌ ವಾಹನಗಳಾಗಿ ಪರಿವರ್ತಿಸಲು ಸರ್ಕಾರ ಪ್ರೋತ್ಸಾಹ ನೀಡಬೇಕು ಎಂದು ಎರಡು ಖಾಸಗಿ ಮ್ಯಾನೇಜ್‌ಮೆಂಟ್‌ ಕನ್ಸಲ್ಟೆನ್ಸಿ ಕಂಪನಿಗಳ ಜಂಟಿ ವರದಿಯೊಂದು ಸಲಹೆ ನೀಡಿದೆ.

‘ದೇಶದಲ್ಲಿ ಹಳೆಯ ವಾಹನಗಳನ್ನು ಗುಜರಿಗೆ ಹಾಕಲು ನೂತನ ಗುಜರಿ ನೀತಿ ಜಾರಿಗೊಳಿಸಲಾಗಿದೆ. ಇನ್ನೊಂದೆಡೆ ಎಲೆಕ್ಟ್ರಿಕ್‌ ವಾಹನಗಳ ಖರೀದಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಆದರೆ, ಗುಜರಿಗೆ ಹಾಕುವುದರಿಂದ ಜನರಿಗಾಗುವ ನಷ್ಟ ಕಡಿಮೆ ಮಾಡಲು ಹಾಗೂ ಎಲೆಕ್ಟ್ರಿಕ್‌ ವಾಹನಗಳನ್ನು ಬಳಸುವುದರಿಂದ ಉಂಟಾಗುವ ಲಾಭವನ್ನು ಹೆಚ್ಚಿಸಲು ಸರ್ಕಾರವು ಹಳೆಯ ವಾಹನಗಳನ್ನು ಎಲೆಕ್ಟ್ರಿಕ್‌ ವಾಹನಗಳಾಗಿ ಪರಿವರ್ತಿಸುವ ಉದ್ದಿಮೆಗೆ ಪ್ರೋತ್ಸಾಧನ ಅಥವಾ ಬೆಂಬಲ ನೀಡಬೇಕು. 

ಆಗ ದೇಶದಲ್ಲಿ ಎಲೆಕ್ಟ್ರಿಕ್‌ ವಾಹನಗಳ ಸಂಖ್ಯೆ ಹೆಚ್ಚಾಗುವುದರ ಜೊತೆಗೆ ಮಾಲಿನ್ಯ ಕಡಿತಗೊಳಿಸುವ ಉದ್ದೇಶಕ್ಕೂ ವೇಗ ಸಿಗುತ್ತದೆ’ ಎಂದು ಪ್ರೈಮಸ್‌ ಪಾರ್ಟ್ನರ್ಸ್‌ ಹಾಗೂ ಇಟಿಬಿ (ಯುರೋಪಿಯನ್‌ ಬಿಸಿನೆಸ್‌ ಅಂಡ್‌ ಟೆಕ್ನಾಲಜಿ ಸೆಂಟರ್‌) ಎಂಬ ಸಂಸ್ಥೆಗಳು ಸಿದ್ಧಪಡಿಸಿರುವ ವರದಿಯಲ್ಲಿ ಹೇಳಲಾಗಿದೆ.

ಬಸ್‌ಗಳು, ಟ್ರಕ್‌ಗಳು ಸೇರಿದಂತೆ ಎಲ್ಲಾ ರೀತಿಯ ಹಳೆಯ ವಾಹನಗಳನ್ನೂ ಈ ರೀತಿ ಇ.ವಿ. ಆಗಿ ಪರಿವರ್ತಿಸಲು ಸಾಧ್ಯವಿದೆ. ಅದಕ್ಕೆ ಸಾಕಷ್ಟು ಸವಾಲುಗಳೂ ಇವೆ. ಆದರೆ ಸರ್ಕಾರ ಮನಸ್ಸು ಮಾಡಿದರೆ ಅಸಾಧ್ಯವಲ್ಲ ಎಂದು ವರದಿ ತಿಳಿಸಿದೆ.