ಉಗ್ರರ ಕೇಂದ್ರ ಸ್ಥಾನ ಅಲ್‌ಫಲಾ ವಿವಿಯ ಮೇಲೆ ತನಿಖಾ ಸಂಸ್ಥೆಗಳ ಕಣ್ಣು

| N/A | Published : Nov 13 2025, 05:58 AM IST

Al Falah University
ಉಗ್ರರ ಕೇಂದ್ರ ಸ್ಥಾನ ಅಲ್‌ಫಲಾ ವಿವಿಯ ಮೇಲೆ ತನಿಖಾ ಸಂಸ್ಥೆಗಳ ಕಣ್ಣು
Share this Article
  • FB
  • TW
  • Linkdin
  • Email

ಸಾರಾಂಶ

ದೇಶದಲ್ಲಿ ಭಾರೀ ವಿಧ್ವಂಸಕ ಕೃತ್ಯದ ಸಂಚಿನ ಹಿನ್ನೆಲೆಯಲ್ಲಿ ಈಗಾಗಲೇ ಅಲ್‌ ಫಲಾ ವಿವಿಯ ನಾಲ್ವರು ವೈದ್ಯರು ಭಾಗಿಯಾಗಿರುವುದು ಖಚಿತವಾಗಿದೆ. ಇವರೆಲ್ಲ ವಿವಿಯನ್ನೇ ಕೇಂದ್ರಸ್ಥಾನ ಮಾಡಿಕೊಂಡು ಪಾಕಿಸ್ತಾನದ ಉಗ್ರಗಾಮಿ ಸಂಘಟನೆಗಳ ಅಣತಿಯಂತೆ ಅಮಾಯಕರ ಬಲಿ ಪಡೆಯಲು ಸಂಚು ರೂಪಿಸಿದ್ದು ಇದೀಗ ಬಯಲಾಗಿದೆ.

ಫರೀದಾಬಾದ್‌: ದೇಶವನ್ನೇ ಬೆಚ್ಚಿಬೀಳಿಸಿದ ದೆಹಲಿ ಕೆಂಪುಕೋಟೆ ಸ್ಫೋಟ ಬಳಿಕ ಹರ್ಯಾಣದ ಫರೀದಾಬಾದ್‌ನ ಅಲ್‌ ಫಲಾ ವಿವಿ ಇದೀಗ ರಾಷ್ಟ್ರಮಟ್ಟದಲ್ಲಿ ಕುಖ್ಯಾತಿಗಳಿಸಿದೆ.

ದೇಶದಲ್ಲಿ ಭಾರೀ ವಿಧ್ವಂಸಕ ಕೃತ್ಯದ ಸಂಚಿನ ಹಿನ್ನೆಲೆಯಲ್ಲಿ ಈಗಾಗಲೇ ಈ ವಿವಿಯ ನಾಲ್ವರು ವೈದ್ಯರು ಭಾಗಿಯಾಗಿರುವುದು ಖಚಿತವಾಗಿದೆ. ಇವರೆಲ್ಲ ವಿವಿಯನ್ನೇ ಕೇಂದ್ರಸ್ಥಾನ ಮಾಡಿಕೊಂಡು ಪಾಕಿಸ್ತಾನದ ಉಗ್ರಗಾಮಿ ಸಂಘಟನೆಗಳ ಅಣತಿಯಂತೆ ಅಮಾಯಕರ ಬಲಿ ಪಡೆಯಲು ಸಂಚು ರೂಪಿಸಿದ್ದು ಇದೀಗ ಬಯಲಾಗಿದೆ. ಹೀಗಾಗಿ ಎನ್‌ಐಎ ಸೇರಿ ವಿವಿಧ ತನಿಖಾ ಸಂಸ್ಥೆಗಳ ಕಣ್ಣು ಇದೀಗ ಈ ವಿವಿಯ ಮೇಲೆ ನೆಟ್ಟಿದೆ.

ಮುಸ್ಲಿಂ ಬಹುಸಂಖ್ಯಾತರಿರುವ ದೌಜ್‌ ಗ್ರಾಮದ 76 ಎಕ್ರೆ ಜಾಗದಲ್ಲಿ 1997ರಲ್ಲಿ ಎಂಜಿನಿಯರಿಂಗ್‌ ಕಾಲೇಜು ಮೂಲಕ ಅಲ್‌ ಫಲಾ ಶಿಕ್ಷಣ ಸಂಸ್ಥೆ ಸ್ಥಾಪನೆಯಾಯಿತು. ಆ ಬಳಿಕ 2014ರಲ್ಲಿ ಹರ್ಯಾಣ ಸರ್ಕಾರ ಈ ಕಾಲೇಜಿಗೆ ವಿವಿಯ ಮಾನ್ಯತೆ ನೀಡಿತ್ತು. ಅಲ್‌ ಫಲಾ ಮೆಡಿಕಲ್‌ ಕಾಲೇಜು ಈ ವಿವಿ ಅಡಿಯಲ್ಲೇ ಸ್ಥಾಪನೆಯಾಗಿದ್ದು, ಅಲ್‌ ಫಲಾ ಚಾರಿಟೇಬಲ್‌ ಟ್ರಸ್ಟ್‌ ಈ ಕಾಲೇಜನ್ನು ಮುನ್ನಡೆಸುತ್ತಿದೆ. ಈ ವಿವಿ ಕ್ಯಾಂಪಸ್‌ನಲ್ಲಿ ಮಸೀದಿಯೂ ಇದೆ.

ಆರಂಭದ ವರ್ಷಗಳಲ್ಲಿ ಅಲ್‌ ಫಲಾ ವಿವಿಯು ಆಲಿಗಢ ಮುಸ್ಲಿ ವಿವಿ ಮತ್ತು ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿವಿಗೆ ಪರ್ಯಾಯವಾಗಿ ಬೆಳೆದಿತ್ತು. ಈ ವಿವಿಯಲ್ಲಿ 650 ಬೆಡ್‌ಗಳ ಸಣ್ಣ ಆಸ್ಪತ್ರೆಯೂ ಇದೆ.

ಕೆಂಪುಕೋಟೆ ಬಳಿಯ ಸ್ಫೋಟದಲ್ಲಿ ವಿವಿಯ ಅಸಿಸ್ಟೆಂಟ್‌ ಪ್ರೊಫೆಸರ್‌ ಡಾ.ಮೊಹಮ್ಮದ್‌ ಉಮರ್‌ ನಬಿ ಪಾತ್ರ ಸ್ಪಷ್ಟವಾಗಿತ್ತು. ಇದಕ್ಕೂ ಮುನ್ನ ಫರೀದಾಬಾದ್‌ನ ಮನೆಯಲ್ಲಿ 2900 ಕೆ.ಜಿ. ಸ್ಫೋಟಕಗಳನ್ನು ಪೊಲೀಸರು ಪತ್ತೆ ಹಚ್ಚಿದ್ದು, ಆ ವೇಳೆ ಅಲ್‌ಫಲಾ ವಿವಿಯ ಡಾ.ಮುಜಾಮ್ಮಿಲ್‌, ಡಾ.ಶಾಹೀನ್‌ ಸೇರಿ ಮೂವರು ವೈದ್ಯರ ಜಾಡು ಸಿಕ್ಕಿದೆ. ಇದೀಗ ಈ ವೈದ್ಯಕೀಯ ಕಾಲೇಜಿನ ಮತ್ತೊಬ್ಬ ವೈದ್ಯ ಡಾ.ನಿಸಾರ್‌ ಘಟನೆ ಬಳಿಕ ನಾಪತ್ತೆಯಾಗಿದ್ದು, ಹುಡುಕಾಟ ಮುಂದುವರಿದಿದೆ.

ಈತ ಈ ಹಿಂದೆ ಕಾಶ್ಮೀರದ ಎಸ್‌ಎಂಎಚ್‌ಎಸ್‌ ಆಸ್ಪತ್ರೆಯಲ್ಲಿ ಕರ್ತವ್ಯ ಸಲ್ಲಿಸಿದ್ದು, ಉಗ್ರರ ಜತೆಗಿನ ಸಂಪರ್ಕದ ಹಿನ್ನೆಲೆಯಲ್ಲಿ ವಜಾ ಮಾಡಲಾಗಿತ್ತು. 2023ರಲ್ಲಿ ಆತನ ವಿರುದ್ಧ ಕೇಸ್‌ ಕೂಡ ದಾಖಲಾಗಿತ್ತು.

ವಿಶೇಷವೆಂದರೆ ಶಂಕಿತ ಉಗ್ರ ಉಮರ್‌ ನಬಿ, ಡಾ. ಶಾಹೀನ್‌ ಪದೇ ಪದೆ ರಜೆ ಹಾಕುತ್ತಿದ್ದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿರಲಿಲ್ಲ ಎಂಬುದೂ ಸಹೋದ್ಯೋಗಿಗಳು ಆರೋಪಿಸಿದ್ದಾರೆ.

ಕಾರು ಸ್ಫೋಟಕ್ಕೂ ಮುನ್ನ ಮಸೀದಿಗೆ ತೆರಳಿ ನಮಾಜ್‌ ಮಾಡಿದ್ದ ಚಾಲಕ ಉಮರ್‌!

ನವದೆಹಲಿ: ಕೆಂಪುಕೋಟೆ ಬಳಿ ಸ್ಫೋಟಗೊಂಡ ಕಾರಿನಲ್ಲಿದ್ದ ಶಂಕಿತ ಉಗ್ರ ಡಾ. ಉಮರ್‌ ನಬಿ ಸ್ಫೋಟಕ್ಕೂ ಮುನ್ನ ಮಸೀದಿಯೊಂದಕ್ಕೆ ತೆರಳಿ ನಮಾಜ್‌ ಪೂರೈಸಿ, ಅಲ್ಲಿಯೇ ಸುಮಾರು 3 ಗಂಟೆ ಕಳೆದಿದ್ದ ಎಂಬ ಆತಂಕಕಾರಿ ಸಂಗತಿಯನ್ನು ಅಧಿಕಾರಿಗಳು ಬುಧವಾರ ಬಹಿರಂಗಪಡಿಸಿದ್ದಾರೆ.

ಉಮರ್‌ ನಬಿ ಘಟನಾ ದಿನ ಮಧ್ಯಾಹ್ನ 3.19ರ ಸುಮಾರಿಗೆ ರಾಮಲೀಲಾ ಮೈದಾನದ ಬಳಿಯ ಸುನೇರಿ ಮಸೀದಿಯ ಪಾರ್ಕಿಂಗ್‌ ಸ್ಥಳದಲ್ಲಿ ಕಾರು ನಿಲ್ಲಿಸಿದ್ದ. ಅದಕ್ಕೂ ಮೊದಲು ಅಸಫ್‌ ಅಲಿ ರಸ್ತೆಯಲ್ಲಿರುವ ಮಸೀದಿಗೆ ತೆರಳಿ ಸುಮಾರು 3 ಗಂಟೆ ಕಳೆದು, ನಮಾಜ್‌ ಅನ್ನೂ ಪೂರೈಸಿದ್ದ. ಹಿಂದಿನ ದಿನ ಫರೀದಾಬಾದ್‌ನಲ್ಲಿ ಬಂಧಿತರಾಗಿದ್ದ ಶಂಕಿತ ಉಗ್ರರ ಕುರಿತು ಒಂದೇ ಸಮನೆ ಮಾಹಿತಿಗಳನ್ನು ಹುಡುಕುತ್ತಿದ್ದ. ಇದು ಆತ್ಮಾಹುತಿ ದಾಳಿಯಿರಬಹುದೇ ಎಂಬ ಶಂಕೆಯಿದೆ. ಎಲ್ಲಾ ದಿಕ್ಕುಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮದುವೆಗೆ ಬಿಟ್ಟರೆ ಮತ್ತೆಂದೂ ಬುರ್ಖಾ ಧರಿಸದ ಡಾ.ಶಹೀನ್

ಲಖನೌ/ಕಾನ್ಪುರ: ದೆಹಲಿಯ ಕಾರು ಸ್ಫೋಟ ಪ್ರಕರಣದಲ್ಲಿ ವೈದ್ಯೆ ಶಹೀನ್‌ ಮದುವೆ ಹೊರತು ಮತ್ಯಾವುದೇ ದಿನದಲ್ಲಿಯೂ ಬುರ್ಖಾ ಧರಿಸಿರಲಿಲ್ಲ ಎಂದು ಆಕೆಯ ಮಾಜಿ ಪತಿ ಡಾ.ಝಫರ್ ಹಯಾತ್‌ ಹೇಳಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಝಫರ್‌, ‘ಶಹೀನ್‌ ಮತ್ತು ನಾನು 2003ರಲ್ಲಿಯೇ ವಿವಾಹವಾಗಿದ್ದೆವು. ನಮಗೆ ಮಕ್ಕಳಿದ್ದು, ಶಹೀನ್‌ ಎಲ್ಲರೊಂದಿಗೆ ಸಹಬಾಳ್ವೆ ನಡೆಸುತ್ತಿದ್ದಳು.ಮದುವೆ ದಿನ ಮಾತ್ರವೇ ಆಕೆ ಬುರ್ಖಾ ಧರಿಸಿದ್ದಳು. ಬಳಿಕ ಎಂದೂ ಧರಿಸಿರಿಲ್ಲ. ನಾವು ಆಸ್ಟ್ರೇಲಿಯಾ ಅಥವಾ ಯುರೋಪ್‌ಗೆ ಹೋಗಬೇಕು ಎಂದು ಆಸೆ ಹೊಂದಿದ್ದಳು. ಆದರೆ 2012ರಲ್ಲಿಯೇ ಯಾವುದೇ ವೈಮನಸ್ಯವಿಲ್ಲದೇ ವಿಚ್ಛೇಧನ ಪಡೆದಳು. ಆಕೆಗೆ ಉಗ್ರರೊಂದಿಗೆ ನಂಟಿದೆ ಎಂಬುದನ್ನು ಈಗಲೂ ನಂಬುವುದಕ್ಕಾಗುತ್ತಿಲ್ಲ.’ ಎಂದು ಹೇಳಿದರು.

Read more Articles on