ತೀವ್ರ ಬರಗಾಲದಿಂದ ಕುಡಿಯುವ ನೀರಿಗೂ ಸಮಸ್ಯೆಯಾಗಿರುವ ತುಮಕೂರು ಗ್ರಾಮಾಂತರ ಕ್ಷೇತ್ರದ ಕೆರೆಗಳಿಗೆ ಹೇಮಾವತಿ ನೀರನ್ನು ಹರಿಸದೆ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪ ಮಾಡಿದ ಶಾಸಕ ಬಿ. ಸುರೇಶ್‌ಗೌಡರು, ನೀರು ಹರಿಸಲು ಜಿಲ್ಲಾಡಳಿತ, ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಕನ್ನಡಪ್ರಭ ವಾರ್ತೆ ತುಮಕೂರು
ತೀವ್ರ ಬರಗಾಲದಿಂದ ಕುಡಿಯುವ ನೀರಿಗೂ ಸಮಸ್ಯೆಯಾಗಿರುವ ತುಮಕೂರು ಗ್ರಾಮಾಂತರ ಕ್ಷೇತ್ರದ ಕೆರೆಗಳಿಗೆ ಹೇಮಾವತಿ ನೀರನ್ನು ಹರಿಸದೆ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪ ಮಾಡಿದ ಶಾಸಕ ಬಿ. ಸುರೇಶ್‌ಗೌಡರು, ನೀರು ಹರಿಸಲು ಜಿಲ್ಲಾಡಳಿತ, ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.ಶುಕ್ರವಾರ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಗಳಿಗೇನಹಳ್ಳಿ ಗ್ರಾಮ ಪಂಚಾಯ್ತಿಯ ಚಿಕ್ಕಸಾರಂಗಿಯಿಂದ ತೋಪಿರಂಗನಾಥ ಸ್ವಾಮಿದೇವಾಲಯದ ರಸ್ತೆ, ದೊಮ್ಮನಕುಪ್ಪೆ, ಅರಿಯೂರು ಗ್ರಾಮ ಪಂಚಾಯ್ತಿಯ ಗುಲಗಂಜಿಹಳ್ಳಿ ಹಾಗೂ ಸಿದ್ದಪ್ಪನಪಾಳ್ಯ ಭೋವಿ ಕಾಲೋನಿಗಳಲ್ಲಿ ಸುಮಾರು 2 ಕೋಟಿ ರು.ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಸಿ.ಸಿ ರಸ್ತೆ ಹಾಗೂ ಚರಂಡಿ ಮತ್ತು ಸಿರಿವಾರ ಗ್ರಾಮ ಪಂಚಾಯ್ತಿಯ ರಾಗಿಮುದ್ದನಹಳ್ಳಿಯಲ್ಲಿ 10 ಲಕ್ಷ ರು.ಅನುದಾನದಲ್ಲಿ ಸಿಸಿ ರಸ್ತೆ, ಚರಂಡಿ ಕಾಮಗಾರಿಗೆ ಶಾಸಕ ಸುರೇಶ್‌ಗೌಡ ಭೂಮಿಪೂಜೆ ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಬೊಮ್ಮನಹಳ್ಳಿ ಗ್ರಾಮದಲ್ಲಿ ಸುಮಾರು 65 ಲಕ್ಷ ರು.ಅನುದಾನದಲ್ಲಿ ಆಯುಷ್ಮಾನ್ ಆರೋಗ್ಯ ಕೇಂದ್ರ ಕಟ್ಟಡ ಕಾಮಗಾರಿ ಗುದ್ದಲಿ ಪೂಜೆ ಮಾಡಿದರು.ಈ ವೇಳೆ ಜಿಲ್ಲಾಧಿಕಾರಿ ಶುಭಕಲ್ಯಾಣ್ ಹಾಗೂ ಡಿಸಿಎಂ ಜಿ.ಪರಮೇಶ್ವರ ವಿರುದ್ಧ ಕಿಡಿಕಾರಿದ ಶಾಸಕರು, ಜನರಿಗೆ ಕುಡಿಯುವ ನೀರು ಪೂರೈಸುವ ಉದ್ದೇಶಕ್ಕಾಗಿಯೇ ಹೇಮಾವತಿಯಿಂದ ಜಿಲ್ಲೆಗೆ 5.50 ಟಿಎಂಸಿ ಅಡಿ ನೀರು ಹರಿಸಲಾಗಿದೆ. ಆದರೆ, ತುಮಕೂರು ಗ್ರಾಮಾಂತರ ಕ್ಷೇತ್ರದ ಕಣ್ಣಕುಪ್ಪೆಕೆರೆ, ಅರಿಯೂರುಕೆರೆ, ನಾಗವಲ್ಲಿ ಕೆರೆ, ಹೊನ್ನುಡಿಕೆ, ಹೆಬ್ಬಾಕಕೆರೆ, ಸಿರಿವರ ಕೆರೆಗೆ ನೀರು ಬಿಟ್ಟಿಲ್ಲ. ನಾಲೆಯ ಮೇಲ್ಭಾಗದಲ್ಲಿ ಗುಬ್ಬಿ, ಚಿಕ್ಕನಾಯಕನಹಳ್ಳಿ, ತಿಪಟೂರು ಭಾಗದವರು ಅನಧಿಕೃತವಾಗಿ ನೀರು ತೆಗೆದುಕೊಂಡಿದ್ದಾರೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದರಿಂದಲೇ ಅವರು ಆ ರೀತಿ ಮಾಡಿದ್ದಾರೆ ಎಂದು ದೂರಿದರು.
ಜಿಲ್ಲೆಯಲ್ಲಿ ತೀವ್ರ ಬರಗಾಲ ಇದ್ದರೂ ಉಪ ಮುಖ್ಯಮಂತ್ರಿ ಅದ್ಧೂರಿ ದಸರಾ ಆಚರಣೆಗೆ ಮುಂದಾಗಿದ್ದಾರೆ. ಬರಗಾಲದ ಈ ಸಂದರ್ಭದಲ್ಲಿ ದಸರಾ ರದ್ದು ಮಾಡಬೇಕು. ಬರ ಪರಿಹಾರ ಕೆಲಸಗಳಿಗೆ ಗಮನ ಕೊಡಬೇಕು ಎಂದು ಸುರೇಶ್‌ಗೌಡರು ಒತ್ತಾಯಿಸಿದರು.ಜಿಲ್ಲಾ ಪಂಚಾಯ್ತಿ ಸದಸ್ಯ ಗೂಳೂರು ಶಿವಕುಮಾರ್, ಮುಖಂಡರಾದ ದೊಡ್ಡಸಾರಂಗಿ ಶಂಕರಣ್ಣ, ಉಮೇಶ್‌ಗೌಡ್ರು, ನರಸಿಂಹಮೂರ್ತಿ, ಶಿವಗಂಗಯ್ಯ, ರಾಜಣ್ಣ, ನವೀನ್, ಅಣ್ಣೀಶ್, ಬೆಟ್ಟೇಗೌಡ ಮುಂತಾದವರು ಇದ್ದರು.