ಪ್ರಧಾನಿ ನರೇಂದ್ರ ಮೋದಿಯವರ 76ನೇ ಜನ್ಮದಿನದ ಹಿನ್ನೆಲೆಯಲ್ಲಿ, ದೇಶಾದ್ಯಂತ ಅವರ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ‘ಆಶೀರ್ವಾದದ ದೀಪ’ ಹೆಸರಿನಲ್ಲಿ ದೀಪ ಬೆಳಗಿಸುವ ಮೂಲಕ ಪ್ರಧಾನಿಗೆ ವಿಶೇಷ ರೀತಿಯಲ್ಲಿ ಶುಭಹಾರೈಸಿದ್ದಾರೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ 76ನೇ ಜನ್ಮದಿನದ ಹಿನ್ನೆಲೆಯಲ್ಲಿ, ದೇಶಾದ್ಯಂತ ಅವರ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ‘ಆಶೀರ್ವಾದದ ದೀಪ’ ಹೆಸರಿನಲ್ಲಿ ದೀಪ ಬೆಳಗಿಸುವ ಮೂಲಕ ಪ್ರಧಾನಿಗೆ ವಿಶೇಷ ರೀತಿಯಲ್ಲಿ ಶುಭಹಾರೈಸಿದ್ದಾರೆ. ಇದೇ ವೇಳೆ, ಬಿಜೆಪಿ ಒಂದು ತಿಂಗಳ ಸೇವಾ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿದ್ದು, ಮೆರವಣಿಗೆ, ರ್‍ಯಾಲಿ, ವಿಶೇಷ ಪೂಜೆಗಳ ಮೂಲಕ ವಿವಿಧೆಡೆ ಶುಭಾಶಯ ಕೋರಲಾಗಿದೆ.

ಮನೆಗಳಲ್ಲಿ ಹಾಗೂ ಸಾರ್ವಜನಿಕವಾಗಿ ದೀಪ ಬೆಳಗಿಸಿ ಪ್ರಾರ್ಥಿಸಿದ್ದಾರೆ

ಬಿಜೆಪಿ ಕಾರ್ಯಕರ್ತರು ಹಾಗೂ ಮೋದಿ ಅಭಿಮಾನಿಗಳು ತಮ್ಮ ಮನೆಗಳಲ್ಲಿ ಹಾಗೂ ಸಾರ್ವಜನಿಕವಾಗಿ ದೀಪ ಬೆಳಗಿಸಿ ಮೋದಿಯವರ ದೀರ್ಘಾಯುಷ್ಯ ಹಾಗೂ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ದಾರೆ. ಬಿಜೆಪಿಯು 1 ತಿಂಗಳ ಅವಧಿಯ ಸೇವಾ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿದ್ದು, ಈ ವೇಳೆ ವಿವಿಧ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ದೀರ್ಘಾಯಸ್ಸು ಹಾಗೂ ದೇಶದ ಪ್ರಗತಿಗಾಗಿ ಪ್ರಾರ್ಥಿಸಿದರು

ರಕ್ಷಣಾ ಸಚಿವ ರಾಜನಾಥ್ ಸಿಂಗ್, ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್, ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಮತ್ತು ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಐತಿಹಾಸಿಕ ಕಾಶಿ ವಿಶ್ವನಾಥ ದೇವಾಲಯಕ್ಕೆ ಭೇಟಿ ನೀಡಿ, ಪೂಜೆ ಹಾಗೂ ಜಲಾಭಿಷೇಕ ನೆರವೇರಿಸಿದರು. ಮೋದಿಯವರ ದೀರ್ಘಾಯಸ್ಸು ಹಾಗೂ ದೇಶದ ಪ್ರಗತಿಗಾಗಿ ಪ್ರಾರ್ಥಿಸಿದರು.

ದೇಶಾದ್ಯಂತ ಬೃಹತ್ ರಕ್ತದಾನ ಶಿಬಿರಗಳು ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಯಿತು. ದೆಹಲಿಯಲ್ಲಿ ಸ್ವಚ್ಛತಾ ಅಭಿಯಾನಗಳು ಮತ್ತು ಸಸಿ ನೆಡುವ ಕಾರ್ಯಕ್ರಮಗಳು ನಡೆದವು. ದೆಹಲಿ, ಮಧ್ಯ ಪ್ರದೇಶ ರಾಜ್ಯಗಳಲ್ಲಿ, ಬೃಹತ್ ಯೋಜನೆಗಳಿಗೆ ಶಂಕುಸ್ಥಾಪನೆ, ವಿದ್ಯುತ್ ಮೂಲಸೌಕರ್ಯಗಳ ಘೋಷಣೆ, ಸಾವಿರಾರು ಕೋಟಿ ರು. ಮೌಲ್ಯದ ಯಮುನಾ ನದಿ ಸ್ವಚ್ಛತಾ ಕಾರ್ಯಕ್ರಮಗಳಂತಹ ಪ್ರಮುಖ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.