ಸಾರಾಂಶ
ನವದೆಹಲಿ : ಜನಾಂಗೀಯ ಗಲಭೆಪೀಡಿತ ಮಣಿಪುರದಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲು ಇನ್ನೂ 5000 ಯೋಧರನ್ನು ಕಳುಹಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ತಕ್ಷಣದಿಂದಲೇ ಹೆಚ್ಚುವರಿ ಪಡೆಗಳ ನಿಯೋಜನೆ ಆರಂಭವಾಗಲಿದೆ.
ಈಗಾಗಲೇ ಮಣಿಪುರದಲ್ಲಿ ಕೇಂದ್ರೀಯ ಭದ್ರತಾ ಪಡೆಗಳ ಸುಮಾರು 21000 ಯೋಧರು ಇದ್ದಾರೆ. ಆದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಇನ್ನೂ 50 ಸಿಎಪಿಎಫ್ ಕಂಪನಿಗಳನ್ನು (ಸುಮಾರು 5000 ಯೋಧರು) ಕಳುಹಿಸಲು ಗೃಹ ಸಚಿವಾಲಯ ನಿರ್ಧರಿಸಿದೆ.
ಮಣಿಪುರದ ಪರಿಸ್ಥಿತಿ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸತತ 2ನೇ ದಿನವಾದ ಸೋಮವಾರ ಕೂಡ ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳ ಜತೆ ಸಭೆ ನಡೆಸಿದರು ಹಾಗೂ ಮಣಿಪುರಕ್ಕೆ ಹೆಚ್ಚು ಪಡೆಗಳನ್ನು ಕಳಿಸಿ ಪರಿಸ್ಥಿತಿಯನ್ನು ಆದಷ್ಟು ಬೇಗ ನಿಯಂತ್ರಣಕ್ಕೆ ತರಬೇಕು ಎಂದು ಸೂಚಿಸಿದರು ಎಂದು ಮೂಲಗಳು ಹೇಳಿವೆ. ಅವರ ಸಭೆಯ ಫಲಶೃತಿ ಎಂಬಂತೆ 5000 ಯೋಧರನ್ನು ಮಣಿಪುರಕ್ಕೆ ಕಳಿಸುವ ನಿರ್ಧಾರ ಹೊರಬಿದ್ದಿದೆ.
ಕಳೆದ ವರ್ಷದ ಮೇ ತಿಂಗಳಿನಿಂದ ಮಣಿಪುರದಲ್ಲಿ ಹಿಂಸಾಚಾರ ನಡೆಯುತ್ತಿದ್ದು, ಈವರೆಗೆ ಸುಮಾರು 300 ಜನರು ಸಾವನ್ನಪ್ಪಿದ್ದಾರೆ. ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ. ಕೆಲ ದಿನ ತಣ್ಣಗಾಗಿದ್ದ ಪರಿಸ್ಥಿತಿ ಇತ್ತೀಚೆಗೆ 10 ಕುಕಿ/ಮಿಜೋ ಉಗ್ರರ ಹತ್ಯೆ ಹಾಗೂ ಉಗ್ರರಿಂದ ಅಪಹರಣಗೊಂಡಿದ್ದ 6 ಮೈತೇಯಿಗಳ ಹತ್ಯೆ ಬಳಿಕ ಮತ್ತೆ ಉಲ್ಬಣಿಸಿದೆ. ಸಿಎಂ, ಸಚಿವರು ಸೇರಿ 13 ಶಾಸಕರ ಮನೆಗಳು ಉದ್ರಿಕ್ತರ ದಾಳಿಗೆ ತುತ್ತಾಗಿವೆ.
;Resize=(128,128))
;Resize=(128,128))