ಸಾರಾಂಶ
ವಕ್ಫ್ ತಿದ್ದುಪಡಿ ಮಸೂದೆಗೆ ಸಂಸತ್‌ನ ಅನುಮೋದನೆ ಸಿಕ್ಕಬೆನ್ನಲ್ಲೇ, ದೇಶವ್ಯಾಪಿ ಮುಸ್ಲಿಮರು ಬೀದಿಗಿಳಿದ ಪ್ರತಿಭಟನೆ ನಡೆಸಿದ್ದಾರೆ ಹಲವು ನಗರಗಳಲ್ಲಿ ಶುಕ್ರವಾರದ ಪ್ರಾರ್ಥನೆ ಬಳಿಕ ಪ್ರತಿಭಟನೆ ಮೂಲಕ ಶಕ್ತಿ ಪ್ರದರ್ಶನ ಮಾಡಿದ್ದಾರೆ.
ನವದೆಹಲಿ: ವಕ್ಫ್ ತಿದ್ದುಪಡಿ ಮಸೂದೆಗೆ ಸಂಸತ್‌ನ ಅನುಮೋದನೆ ಸಿಕ್ಕಬೆನ್ನಲ್ಲೇ, ದೇಶವ್ಯಾಪಿ ಮುಸ್ಲಿಮರು ಬೀದಿಗಿಳಿದ ಪ್ರತಿಭಟನೆ ನಡೆಸಿದ್ದಾರೆ. ಚೆನ್ನೈ, ಅಹಮದಾಬಾದ್, ಕೋಲ್ಕತಾ, ಹೈದ್ರಾಬಾದ್, ಲಾತೂರ್ ಸೇರಿದಂತೆ ಹಲವು ನಗರಗಳಲ್ಲಿ ಶುಕ್ರವಾರದ ಪ್ರಾರ್ಥನೆ ಬಳಿಕ ಪ್ರತಿಭಟನೆ ಮೂಲಕ ಶಕ್ತಿ ಪ್ರದರ್ಶನ ಮಾಡಿದ್ದಾರೆ.
ಕೋಲ್ಕತಾದಲ್ಲಿ ಶುಕ್ರವಾರದ ಪ್ರಾರ್ಥನೆ ಬಳಿಕ ಮುಸ್ಲಿಮರು ಕಪ್ಪು ಬಟ್ಟೆ ಧರಿಸಿ, ವಕ್ಫ್ ಮಸೂದೆ ವಿರುದ್ಧ ಭಿತ್ತಿ ಪತ್ರಗಳನ್ನು ಹಿಡಿದು, ಘೋಷಣೆಗಳನ್ನು ಕೂಗುತ್ತ ಪ್ರತಿಭಟಿಸಿದರು. ಹೈದರಾಬಾದ್‌ನಲ್ಲಿಯೂ ವಿರೋಧ ಜೋರಾಗಿಯೇ ಇತ್ತು. ಅಹಮದಾಬಾದ್‌ನಲ್ಲಿ ಪ್ರತಿಭಟನೆ ಮಾಡುತ್ತಿದ್ದ ಓವೈಸಿ ಅವರ ಎಂಐಎಂ ಪಕ್ಷದ ರಾಜ್ಯಾಧ್ಯಕ್ಷ ಸೇರಿ 40 ಜನರನ್ನು ಪೊಲೀಸರು ವಶಕ್ಕೆ ಪಡೆದರು.
ಇತ್ತ ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ನಟ, ತಮಿಳಗ ವೆಟ್ರಿ ಕಳಗಂ ಪಕ್ಷದ ನಾಯಕ ವಿಜಯ್ ಪ್ರತಿಭಟನೆಯನ್ನು ಮುನ್ನಡೆಸಿದರು. ಮಸೂದೆಯು ದೇಶದ ಜಾತ್ಯಾತೀತ ನಿಲುವಿಗೆ ವಿರುದ್ಧವಾಗಿದೆ. ಬಿಲ್ ಅಸಾಂವಿಧಾನಿಕ, ನಾವು ಇದನ್ನು ವಿರೋಧಿಸುತ್ತೇವೆ ಎಂದು ಘೋಷಣೆ ಕೂಗಿದರು. ಕೊಯಮತ್ತೂರು, ತಿರುಚಿರಾಪಲ್ಲಿಯಲ್ಲಿಯೂ ಪ್ರತಿಭಟನೆಗಳು ನಡೆದವು.
ಕಳೆದೆರಡು ವರ್ಷದಿಂದ ಹಿಂಸೆಗೆ ತುತ್ತಾಗಿರುವ ಮಣಿಪುರದಲ್ಲಿಯೂ ಪ್ರತಿಭಟನೆ ಹೆಚ್ಚಾಗಿತ್ತು. ರಾಜಧಾನಿ ಇಂಫಾಲ್‌ನಲ್ಲಿ ಸಂತೆಲ್ ಯುನೈಟೆಡ್ ಡೆವಲಪ್‌ಮೆಂಟ್ ಸಮಿತಿಯ 200ಕ್ಕೂ ಹೆಚ್ಚು ಸದಸ್ಯರು ಧರಣಿ ನಡೆಸುವ ಮೂಲಕ ವಿರೋಧವನ್ನು ವ್ಯಕ್ತಪಡಿಸಿ ವಾಪಾಸ್ ಪಡೆಯುವಂತೆ ಆಗ್ರಹಿಸಿದರು.