ಸಾರಾಂಶ
ನವದೆಹಲಿ: ಸೋಮವಾರದಿಂದ ಆರಂಭವಾಗಿರುವ ಸಂಸತ್ ಅಧಿವೇಶನ 2ನೇ ದಿನವೂ ವಿಪಕ್ಷಗಳ ಗದ್ದಲಕ್ಕೆ ಬಲಿಯಾಯಿತು. ಬಿಹಾರದಲ್ಲಿ ನಡೆಯುತ್ತಿರುವ ಮತಪಟ್ಟಿ ಪರಿಷ್ಕರಣೆ ಉಭಯ ಸದನಗಳಲ್ಲಿ ಕಲಾಪವನ್ನು ಬಲಿ ಪಡೆದಿದ್ದರಿಂದ ಅದು ಬುಧವಾರಕ್ಕೆ ಮುಂದೂಡಿಕೆಯಾಯಿತು.
ಸೋಮವಾರ ಆಪರೇಷನ್ ಸಿಂದೂರಕ್ಕೆ ಬಲಿಯಾಗಿದ್ದ ಗದ್ದಲ, ಮಂಗಳವಾರ ಮತಪಟ್ಟಿ ಪರಿಷ್ಕರಣೆ ವಿಚಾರದಿಂದ ಮುಂದೂಡಿಕೆಯಾಯಿತು. ಸುಗಮ ಕಲಾಪಕ್ಕೆ ಅವಕಾಶ ಮಾಡಿಕೊಡದ ವಿಪಕ್ಷ ನಾಯಕರು, ಘೋಷಣಾ ಪತ್ರಗಳನ್ನು ಹಿಡಿದು, ಮತಪಟ್ಟಿ ಪರಿಷ್ಕರಣೆ ನಿಯಮವನ್ನು ವಾಪಸ್ ತೆಗೆದುಕೊಳ್ಳುವಂತೆ ಆಗ್ರಹಿಸಿ ಸದನದ ಬಾವಿಗಿಳಿದು ಪ್ರತಿಭಟಿಸಿದರು. ಬಳಿಕ ಸ್ಪೀಕರ್ ಓಂ ಬಿರ್ಲಾ ಕಲಾಪವನ್ನು ಮುಂದೂಡಿದರು.
ಮಧ್ಯಾಹ್ನ ಕಲಾಪ ಮತ್ತೆ ಆರಂಭವಾದಾಗಲೂ ವಿಪಕ್ಷಗಳು ಪಟ್ಟು ಬಿಡಲಿಲ್ಲ. ಈ ವೇಳೆ ಕೇಂದ್ರ ಸಚಿವ ಕಿರಣ್ ರಿಜಿಜು ಕಲಾಪ ನಡೆಸಲು ಅವಕಾಶ ಮಾಡಿಕೊಡದ ವಿಪಕ್ಷಗಳ ನಡೆಗೆ ಆಕ್ಷೇಪಿಸಿದರು. ಅಲ್ಲದೇ ಸರ್ಕಾರ ಆಪರೇಷನ್ ಸಿಂದೂರದ ಕುರಿತು ಚರ್ಚೆಗೆ ಸಮಯ ನಿಗದಿ ಮಾಡಲಿದೆ ಎಂದು ಭರವಸೆ ನೀಡಿದರು.
ಮೇಲ್ಮನೆಯಲ್ಲೂ ಗದ್ದಲ:
ಬಿಹಾರದಲ್ಲಿ ಮತದಾರ ಪಟ್ಟಿ ಪರಿಷ್ಕರಣೆಗೆ ವಿರೋಧಿಸಿ ರಾಜ್ಯಸಭೆಯಲ್ಲಿಯೂ ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳು ಗದ್ದಲ ಎಬ್ಬಿಸಿದ್ದವು. ಇದರಿಂದ ಯಾವ ಚರ್ಚೆಯೂ ಸಾಧ್ಯವಿಲ್ಲವೆಂಬುದನ್ನು ಮನಗಂಡ ಉಪ ಸ್ಪೀಕರ್ ಹರಿವಂಶ, ಕಲಾಪ ಮುಂದೂಡಿದರು.