ಕರ್ನಾಟಕ ಹೈಕೋರ್ಟ್‌ ಜಡ್ಜ್‌ ವರ್ಗಾವಣೆ ವಿರೋಧಿಸಿ ಕಲಾಪ ಬಹಿಷ್ಕಾರ

| N/A | Published : Apr 24 2025, 02:06 AM IST / Updated: Apr 24 2025, 04:10 AM IST

karnataka highcourt

ಸಾರಾಂಶ

ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿಗಳ   ಇತರೆ ಹೈಕೋರ್ಟ್‌ಗೆ ವರ್ಗಾಯಿಸಲು ಸುಪ್ರೀಂ ಕೋರ್ಟ್‌ ಕೊಲಿಜಿಯಂ ಕೈಗೊಂಡಿರುವ ಶಿಫಾರಸು ವಿರೋಧಿಸಿ ವಕೀಲರು ಬುಧವಾರ ಹೈಕೋರ್ಟ್‌ ಸೇರಿ ನಗರದ ಎಲ್ಲ ನ್ಯಾಯಾಲಯಗಳ ಕಲಾಪಗಳನ್ನು ಬಹಿಷ್ಕರಿಸಿದರು.

  ಬೆಂಗಳೂರು : ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್‌, ಹೇಮಂತ ಚಂದನಗೌಡರ್, ಎನ್‌.ಎಸ್‌. ಸಂಜಯಗೌಡ ಮತ್ತು ಕೆ.ನಟರಾಜನ್‌ ಅವರನ್ನು ಇತರೆ ಹೈಕೋರ್ಟ್‌ಗೆ ವರ್ಗಾಯಿಸಲು ಸುಪ್ರೀಂ ಕೋರ್ಟ್‌ ಕೊಲಿಜಿಯಂ ಕೈಗೊಂಡಿರುವ ಶಿಫಾರಸು ವಿರೋಧಿಸಿ ವಕೀಲರು ಬುಧವಾರ ಹೈಕೋರ್ಟ್‌ ಸೇರಿ ನಗರದ ಎಲ್ಲ ನ್ಯಾಯಾಲಯಗಳ ಕಲಾಪಗಳನ್ನು ಬಹಿಷ್ಕರಿಸಿದರು.

ಕೆಲ ವಕೀಲರು ಮಾತ್ರ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮೂಲಕ ಹಾಜರಾಗಿ ತಮ್ಮ ಅರ್ಜಿಗಳ ವಿಚಾರಣೆಗೆ ಮುಂದೂಡಲು ಕೋರಿದರು. ವಕೀಲರ ಅನುಪಸ್ಥಿತಿಯಿಂದ ಬಹುತೇಕ ಕೋರ್ಟ್‌ಗಳಲ್ಲಿ ಪ್ರಕರಣಗಳ ವಿಚಾರಣೆ ಮುಂದೂಡಲಾಯಿತು. ಕಲಾಪ ಬಹಿಷ್ಕಾರದಿಂದ ಬುಧವಾರ ಕೋರ್ಟ್‌ ಕಲಾಪಗಳಲ್ಲಿ ವ್ಯತ್ಯಯ ಉಂಟಾಯಿತು. ಸದಾ ವಕೀಲರು, ಕಕ್ಷಿದಾರರಿಂದ ತುಂಬಿರುತ್ತಿದ್ದ ಕೋರ್ಟ್‌ ಹಾಲ್‌ ಹಾಗೂ ಆವರಣ ಬುಧವಾರ ಬಣಗುಡುತ್ತಿದ್ದವು.

ಕಲಾಪದಿಂದ ಹೊರಗುಳಿದ ವಕೀಲರು ಹೈಕೋರ್ಟ್‌ನ ಗೋಲ್ಡನ್ ಗೇಟ್ ಮುಂಭಾಗದಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ರಾಜ್ಯ ವಕೀಲರ ಪರಿಷತ್‌ ಅಧ್ಯಕ್ಷ ಎಸ್‌.ಎಸ್‌.ಮಿಟ್ಟಲಕೋಡ್ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದು ವರ್ಗಾವಣೆ ಶಿಫಾರಸನ್ನು ಮರು ಪರಿಶೀಲಿಸುವಂತೆ ಕೋರಿದ್ದಾರೆ.

ಕಲಾಪ ನಡೆಸುವುದು ನಮ್ಮ ಕರ್ತವ್ಯ:

ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ಪೀಠ ಎಂದಿನಂತೆ ಬುಧವಾರ ಬೆಳಗ್ಗೆ ಕಲಾಪ ಆರಂಭಿಸಿತ್ತು. ಸುಮಾರು 20 ನಿಮಿಷ ಕಲಾಪ ನಡೆಸಿದ ಬಳಿಕ ಕೋರ್ಟ್‌ ಹಾಲ್‌ ಪ್ರವೇಶಿಸಿದ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್‌ ಸುಬ್ಬಾರೆಡ್ಡಿ ಹಾಗೂ ಸಂಘದ ಪದಾಧಿಕಾರಿಗಳು ಕೋರ್ಟ್‌ ಹಾಲ್‌ನಲ್ಲಿ ಹಾಜರಿದ್ದ ವಕೀಲರಲ್ಲಿ ಕಲಾಪದಿಂದ ಹೊರಗುಳಿಯುವಂತೆ ಕೋರಿದರು.

ಈ ವೇಳೆ ಅಧ್ಯಕ್ಷ ಸುಬ್ಬಾರೆಡ್ಡಿ ಅವರು ಮುಖ್ಯ ನ್ಯಾಯಮೂರ್ತಿಗಳಲ್ಲಿ ಕ್ಷಮೆ ಕೋರುತ್ತಾ, ನಮ್ಮ ಹೈಕೋರ್ಟ್‌ನ ನ್ಯಾಯಮೂರ್ತಿಗಳ ವರ್ಗಾವಣೆ ವಕೀಲರ ಭಾವನಾತ್ಮಕ ವಿಚಾರವಾಗಿದೆ. ಇಂದು ಒಂದು ದಿನ ವಕೀಲರು ಕಲಾಪದಿಂದ ಹೊರಗುಳಿಯುತ್ತಾರೆ. ಹಾಗಾಗಿ, ವಕೀಲರು ಹಾಜರಾಗದಕ್ಕೆ ಯಾವುದೇ ಪ್ರಕರಣಕ್ಕೆ ಹಾನಿ ಮಾಡದಂತೆ ಕಳಕಳಿಯಿಂದ ಕೋರುತ್ತಿದ್ದೇನೆ. ಈ ವಿಚಾರದಲ್ಲಿ ನಮ್ಮ ಯಾವುದೇ ವೈಯಕ್ತಿಕ ಹಿತಾಸಕ್ತಿ ಇಲ್ಲ. ನಮ್ಮ ಹೈಕೋರ್ಟ್‌ ನ್ಯಾಯಮೂರ್ತಿಗಳು ನಮ್ಮಲ್ಲೇ ಉಳಿಯಬೇಕಿದೆ ಎಂದರು.

ಅದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿಗಳು ಕಲಾಪ ನಡೆಸುವುದು ನಮ್ಮ ಕರ್ತವ್ಯ. ಅದಕ್ಕೆ ನಾವು ಬದ್ಧವಾಗಿದ್ದು, ಪೀಠಕ್ಕೆ ಬಂದಿದ್ದೇವೆ ಎಂದರು.