ಸಾರಾಂಶ
-6ನೇ ದಿನವೂ ಸಂಘರ್ಷ ಮುಂದುವರಿಕೆ-ಟೆಕ್ಸಾಸ್ನಲ್ಲಿ ಅನಿರ್ದಿಷ್ಟ ಸಂಖ್ಯೆಯ ಭದ್ರತಾ ಸಿಬ್ಬಂದಿ ನಿಯೋಜನೆ
ಲಾಸ್ ಏಂಜಲೀಸ್: ಟ್ರಂಪ್ ವಲಸೆ ನೀತಿ ವಿರೋಧಿಸಿ ಲಾಸ್ ಏಂಜಲೀಸ್ನಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆ ದೇಶಾದ್ಯಂತ ವ್ಯಾಪಿಸಿದ್ದು, ಮತ್ತಷ್ಟು ತೀವ್ರಗೊಳ್ಳುವ ಆತಂಕ ವ್ಯಕ್ತವಾಗಿದೆ.
ಸಿಯಾಟೆಲ್, ನ್ಯೂಯಾರ್ಕ್, ಸ್ಯಾನ್ ಆ್ಯಂಟೋನಿಯೋ, ಫಿಲಡೆಲ್ಫಿಯಾ, ಸ್ಯಾನ್ ಫ್ರಾನ್ಸಿಸ್ಕೊ, ಚಿಕಾಗೊ, ಡೆನ್ವರ್, ಸ್ಪೋಕೇನ್ ಮೊದಲಾದ ಪ್ರಮುಖ ನಗರಗಳಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ನೂರಾರು ಪ್ರತಿಭಟನಕಾರರನ್ನು ಬಂಧಿಸಲಾಗಿದೆ.ಕೆಲವೆಡೆ ಪ್ರತಿಭಟನೆ ಶಾಂತಿಯುತವಾಗಿ ನಡೆಯುತ್ತಿದೆ. ಆದರೆ ಇನ್ನು ಕೆಲವೆಡೆ ಹಿಂಸಾತ್ಮಕ ರೂಪಕ್ಕೆ ತಿರುಗಿದ್ದು, ಪೊಲೀಸರು ರಾಸಾಯನಿಕ ಬಳಸಿ ಪ್ರತಿಭಟನಕಾರರನ್ನು ಚದುರಿಸಲು ಯತ್ನಿಸಿದ್ದಾರೆ. ಟೆಕ್ಸಾಸ್ನಲ್ಲಿ ಉದ್ವಿಗ್ನ ಪರಿಸ್ಥಿತಿಯಿರುವ ಕಾರಣ, ಶಾಂತಿ ಮತ್ತು ಸುವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯಾದ್ಯಂತ ಅನಿರ್ದಿಷ್ಟ ಸಂಖ್ಯೆಯ ರಾಷ್ಟ್ರೀಯ ಭದ್ರತಾ ಪಡೆಗಳನ್ನು ನಿಯೋಜಿಸಲಾಗುವುದು ಎಂದು ರಿಪಬ್ಲಿಕನ್ ಗವರ್ನರ್ ಗ್ರೆಗ್ ಅಬಾಟ್ ತಿಳಿಸಿದ್ದಾರೆ. ಟ್ರಂಪ್ ಮಿಲಿಟರಿ ಪರೇಡ್ ದಿನವೇ ‘ನೋ ಕಿಂಗ್ಸ್’ ಕಾರ್ಯಕ್ರಮ: ಮುಂಬರುವ ದಿನಗಳಲ್ಲಿ ಇನ್ನೂ ದೊಡ್ಡ ಪ್ರತಿಭಟನೆಗಳನ್ನು ನಡೆಸಲಾಗುವುದು. ಶನಿವಾರ ದೇಶಾದ್ಯಂತ ‘ನೋ ಕಿಂಗ್ಸ್’ (ರಾಜನಿಲ್ಲ) ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಪ್ರತಿಭಟನಕಾರರು ತಿಳಿಸಿದ್ದಾರೆ. ಶನಿವಾರವೇ ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿ ಮಿಲಿಟರಿ ಪರೇಡ್ ನಡೆಸುವುದಾಗಿ ಟ್ರಂಪ್ ಘೋಷಿಸಿದ್ದರು. ಅದೇ ದಿನ ಪ್ರತಿಭಟನಕಾರರು ‘ನೋ ಕಿಂಗ್ಸ್’ ಕಾರ್ಯಕ್ರಮ ನಡೆಸುತ್ತಿರುವುದು ಸರ್ಕಾರ ಹಾಗೂ ಪ್ರತಿಭಟನಕಾರರ ನಡುವಿನ ಸಂಘರ್ಷ ಇನ್ನೊಂದು ಹಂತ ತಲುಪುವ ಸೂಚನೆ ನೀಡಿದೆ.ವಲಸಿಗರ ವಿರುದ್ಧ ಕಠಿಣ ನೀತಿ ಮತ್ತು ಗಡೀಪಾರು ಮುಂದುವರಿಯುತ್ತದೆ ಎಂದು ಟ್ರಂಪ್ ಆಡಳಿತ ತಿಳಿಸಿದೆ.