ಜಾಮೀನು ಮೇಲೆ ಬಿಡುಗಡೆಯಾಗುವ ಕುಖ್ಯಾತ ಮಾದಕವಸ್ತು ಕಳ್ಳ ಸಾಗಣೆದಾರರ ಮೇಲೆ ನಿಗಾ ಇಡಲು ಜಿಪಿಎಸ್ ಆಧಾರಿತ ಕಾಲುಂಗರಗಳ ಬಳಕೆಗೆ ಪಂಜಾಬ್ ಪೊಲೀಸ್ ಇಲಾಖೆ ಚಿಂತನೆ ನಡೆಸುತ್ತಿದೆ.
ಚಂಡೀಗಢ: ಜಾಮೀನು ಮೇಲೆ ಬಿಡುಗಡೆಯಾಗುವ ಕುಖ್ಯಾತ ಮಾದಕವಸ್ತು ಕಳ್ಳ ಸಾಗಣೆದಾರರ ಮೇಲೆ ನಿಗಾ ಇಡಲು ಜಿಪಿಎಸ್ ಆಧಾರಿತ ಕಾಲುಂಗರಗಳ ಬಳಕೆಗೆ ಪಂಜಾಬ್ ಪೊಲೀಸ್ ಇಲಾಖೆ ಚಿಂತನೆ ನಡೆಸುತ್ತಿದೆ.
ಕಾನೂನು ವಿರೋಧಿ ಚಟುವಟಿಕೆ ತಡೆ ಕಾಯ್ದೆಯಡಿ ಬಂಧಿತ ಆರೋಪಿಗಳ ಮೇಲೆ ನಿಗಾ ಇಡಲು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಈಗಾಗಲೇ ಈ ರೀತಿಯ ಜಿಪಿಎಸ್ ಆಧರಿತ ಕಾಲುಂಗುರ ಬಳಸುತ್ತಿದ್ದಾರೆ. ಇದೇ ಮಾದರಿಯ ಪ್ರಯೋಗ ಪಂಜಾಬ್‌ನಲ್ಲಿ ಡ್ರಗ್ಸ್ ಕಳ್ಳಸಾಗಣೆದಾರರ ಮೇಲೆ ಮಾಡುವ ಕುರಿತು ಪರಿಶೀಲನೆ ನಡೆಯುತ್ತಿದೆ ಎಂದು ಪಂಜಾಬ್ ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ರೀತಿಯ ಜಿಪಿಎಸ್ ಆಧರಿತ ಕಾಲುಂಗರ ಬಳಕೆ ಪ್ರಸ್ತಾಪ ನಮ್ಮ ಮುಂದಿದೆ. ಈ ಕುರಿತು ಕಾನೂನು ರೀತಿಯಲ್ಲಿ ಪರಿಶೀಲಿಸುತ್ತಿದ್ದೇವೆ. ಸಂಬಂಧಿಸಿದ ನ್ಯಾಯಾಲಯಗಳ ಅನುಮತಿ ಪಡೆದು ಇಂಥ ಕಾಲುಂಗುರಗಳನ್ನು ನಟೋರಿಯಸ್ ಕಳ್ಳಸಾಗಣೆದಾರರ ಮೇಲೆ ನಿಗಾ ಇಡಲು ಬಳಸಲಾಗುವುದು. ಈ ಮೂಲಕ ಅವರ ಓಡಾಟದ ಮೇಲೆ ಕಣ್ಣಿಡಲಾಗುವುದೆಂದು ಪೊಲೀಸ್ ಮುಖ್ಯಸ್ಥ ತಿಳಿಸಿದ್ದಾರೆ.
ಖಾಸಗಿತನದ ಹಕ್ಕನ್ನು ಗಮನದಲ್ಲಿಟ್ಟುಕೊಂಡು ಆಯ್ದ ಆರೋಪಿಗಳ ಮೇಲಷ್ಟೇ ಈ ರೀತಿಯ ಜಿಪಿಎಸ್ ಟ್ರ್ಯಾಕರ್ ಹಾಕಲು ಪೊಲೀಸ್ ಇಲಾಖೆ ಚಿಂತನೆ ನಡೆಸುತ್ತಿದೆ. ಸಣ್ಣ ಪ್ರಮಾಣದ ಮಾದಕ ವಸ್ತು ಬಳಕೆದಾರರನ್ನು ಇದರಿಂದ ಹೊರಗಿಡಲಾಗುವುದು. ಅವರನ್ನು ಮಾದಕವಸ್ತು ವ್ಯಸನ ಮುಕ್ತ ಕೇಂದ್ರಗಳಿಗೆ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ.