ನಟ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪ-2’ 6 ದಿನದಲ್ಲೇ ₹1000 ಕೋಟಿ ಗಳಿಕೆ: ದಾಖಲೆ

| Published : Dec 12 2024, 12:31 AM IST / Updated: Dec 12 2024, 04:53 AM IST

ಸಾರಾಂಶ

ನಟ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪ-2 ’ ಸಿನಿಮಾ, ರಿಲೀಸ್‌ ಆದ 6 ದಿನದಲ್ಲೇ ವಿಶ್ವದಾದ್ಯಂತ ₹1000 ಕೋಟಿ ಗಳಿಕೆ ಮಾಡಿದೆ. ಈ ಮೂಲಕ ಅತಿ ವೇಗದಲ್ಲಿ ಸಾವಿರ ಕೋಟಿ ಕ್ಲಬ್ ಸೇರಿದ ಭಾರತದ ಮೊದಲ ಸಿನಿಮಾಲೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ನವದೆಹಲಿ: ನಟ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪ-2 ’ ಸಿನಿಮಾ, ರಿಲೀಸ್‌ ಆದ 6 ದಿನದಲ್ಲೇ ವಿಶ್ವದಾದ್ಯಂತ ₹1000 ಕೋಟಿ ಗಳಿಕೆ ಮಾಡಿದೆ. ಈ ಮೂಲಕ ಅತಿ ವೇಗದಲ್ಲಿ ಸಾವಿರ ಕೋಟಿ ಕ್ಲಬ್ ಸೇರಿದ ಭಾರತದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಬಿಡುಗಡೆಯಾದ ಮೊದಲ ದಿನವೇ ‘ಪುಷ್ಪ-2’ 294 ಕೋಟಿ ರು. ಗಳಿಕೆ ಮಾಡಿತ್ತು. ಆ ಬಳಿಕವೂ ದಿನದಿಂದ ದಿನಕ್ಕೆ ಉತ್ತಮ ಕಲೆಕ್ಷನ್ ಮಾಡುತ್ತಲೇ ಬಂದಿದೆ. ಇದೀಗ 6 ದಿನದಲ್ಲಿ ₹ 1000 ಕೋಟಿ ಸಂಪಾದನೆ ಮಾಡಿದೆ ಎನ್ನಲಾಗಿದ್ದು, ಈ ಸಾಧನೆ ಮಾಡಿದ ದೇಶದ ಮೊದಲ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಪ್ರಭಾಸ್‌ ಅಭಿನಯದ ಬಾಹುಬಲಿ- 2 ಸಿನಿಮಾ ಬಿಡುಗಡೆಯಾದ 10 ದಿನಕ್ಕೆ ₹ 1000 ಕೋಟಿ ಗಳಿಸಿತ್ತು. ‘ಪುಷ್ಟ-2’ ಆ ದಾಖಲೆಯನ್ನು ಮುರಿದಿದೆ.

==

ಪುಷ್ಪ- 2 ಸಿನಿಮಾ ನೋಡಲು ಬಂದಿದ್ದ ವ್ಯಕ್ತಿ ಥೇಟರಲ್ಲೇ ನಿಗೂಢ ಸಾವು 

ಅನಂತಪುರ (ಆಂಧ್ರ ಪ್ರದೇಶ): ಪುಷ್ಪ- 2 ಸಿನಿಮಾ ವೀಕ್ಷಣೆಗೆ ಬಂದಿದ್ದ 35 ವರ್ಷದ ವ್ಯಕ್ತಿಯ ಮೃತದೇಹ ಚಿತ್ರಮಂದಿರದಲ್ಲಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ರಾಯದುರ್ಗಂನಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಹರಿಜನ ಮಾದಣ್ಣಪ್ಪ ಎಂದು ಗುರುತಿಸಲಾಗಿದೆ.

‘ಆತ ಯಾವಾಗ ಸತ್ತರು ಎನ್ನುವುದು ಸ್ಪಷ್ಟವಾಗಿಲ್ಲ. ಮಧ್ಯಾಹ್ನ 2.30ಕ್ಕೆ ಸಿನಿಮಾ ವೀಕ್ಷಣೆಗೆ ಬಂದಿದ್ದ. ಮ್ಯಾಟಿನಿ ಶೋ ಮುಗಿದ ಬಳಿಕ ಥಿಯೇಟರಿನ ಸ್ವಚ್ಛತಾ ಸಿಬ್ಬಂದಿ ಸ್ವಚ್ಛಗೊಳಿಸುವ ವೇಳೆ ಶವ ಪತ್ತೆಯಾಗಿದೆ’ ಎಂದು ಕಲ್ಯಾಣದುರ್ಗಂ ಡಿಎಸ್‌ಪಿ ರವಿಬಾಬು ತಿಳಿಸಿದ್ದಾರೆ. ಮಾದಣ್ಣಪ್ಪ ಕುಡಿತದ ಚಟ ಹೊಂದಿದ್ದ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆ ಕಾನೂನಿನಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.