ಸಾರಾಂಶ
ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ಹಾಗೂ ಹೂಡಿಕೆಗೆ ಪೂರಕವಾದ ನೀತಿಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿರುವ ರಷ್ಯಾ ಪ್ರಧಾನಿ ವ್ಲಾದಿಮಿರ್ ಪುಟಿನ್, ‘ಭಾರತದಲ್ಲಿ ಉತ್ಪಾದನಾ ಕ್ಷೇತ್ರದಲ್ಲಿ ಇನ್ನಷ್ಟು ಹೂಡಿಕೆಗೆ ನಾವು ಸಿದ್ಧ’ ಎಂದು ಹೇಳಿದ್ದಾರೆ.
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ಹಾಗೂ ಹೂಡಿಕೆಗೆ ಪೂರಕವಾದ ನೀತಿಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿರುವ ರಷ್ಯಾ ಪ್ರಧಾನಿ ವ್ಲಾದಿಮಿರ್ ಪುಟಿನ್, ‘ಭಾರತದಲ್ಲಿ ಉತ್ಪಾದನಾ ಕ್ಷೇತ್ರದಲ್ಲಿ ಇನ್ನಷ್ಟು ಹೂಡಿಕೆಗೆ ನಾವು ಸಿದ್ಧ’ ಎಂದು ಹೇಳಿದ್ದಾರೆ. ಈ ಮೂಲಕ ಮೇಕ್ ಇನ್ ಇಂಡಿಯಾ ನೀತಿಯಡಿ ಭಾರತದಲ್ಲಿ ಉತ್ಪಾದನಾ ಚಟುವಟಿಕೆ ಹೆಚ್ಚಿಸುವ ಸುಳಿವನ್ನು ಅವರು ನೀಡಿದ್ದಾರೆ.
ಮಾಸ್ಕೋದಲ್ಲಿ ನಡೆಯುತ್ತಿರುವ ರಷ್ಯಾ ಇನ್‌ವೆಸ್ಟ್‌ಮೆಂಟ್ ಫೋರಂನಲ್ಲಿ ಗುರುವಾರ ಮಾತನಾಡಿದ ಅವರು, ‘ಭಾರತವು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಪೂರಕವಾದ ವಾತಾವರಣ ನಿರ್ಮಿಸಿದೆ. ಉತ್ಪಾದನೆಗೆ ಪ್ರೋತ್ಸಾಹ ಮತ್ತು ವಿದೇಶಿ ಹೂಡಿಕೆಯನ್ನು ಆಕರ್ಷಿಸುವ ಗುರಿ ಇಟ್ಟುಕೊಂಡು ಜಾರಿತಂದ ಮೇಕ್ ಇನ್ ಇಂಡಿಯಾ ಉಪಕ್ರಮವು ವಿಶ್ವ ಆರ್ಥಿಕ ಭೂಪಟದಲ್ಲಿ ಭಾರತದ ಸ್ಥಾನವನ್ನು ಗಟ್ಟಿಗೊಳಿಸಿದೆ. ಭಾರತದಲ್ಲಿ ಹೂಡಿಕೆಯು ಲಾಭದಾಯಕವಾಗಿದೆ. ಹೀಗಾಗಿ ನಾವು ಭಾರತದಲ್ಲಿ ಉತ್ಪಾದನಾ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆಗೆ ಆಸಕ್ತಿ ಹೊಂದಿದ್ದೇವೆ’ ಎಂದು ಹೇಳಿದರು.
‘ನಾವು ಭಾರತದಲ್ಲಿ ಉತ್ಪಾದನಾ ಚಟುವಟಿಕೆ ಆರಂಭಿಸಲು ಸಿದ್ಧವಾಗಿದ್ದೇವೆ. ಮೋದಿ ಅವರ ನಾಯಕತ್ವದಲ್ಲಿ ಭಾರತ ಸರ್ಕಾರವು ಇಂಡಿಯಾ ಫಸ್ಟ್ ನೀತಿ ಮೂಲಕ ಹೂಡಿಕೆಗೆ ಉತ್ತಮ ವಾತವರಣ ಸೃಷ್ಟಿಸಿದೆ. ರಷ್ಯಾದ ರೋಸ್‌ನೆಫ್ಟ್ ಕಂಪನಿ ಇತ್ತೀಚೆಗಷ್ಟೇ ಭಾರತದಲ್ಲಿ 20 ಬಿಲಿಯನ್ ಡಾಲರ್ ಹೂಡಿಕೆಯನ್ನೂ ಮಾಡಿದೆ’ ಎಂದರು.ಇದೇ ವೇಳೆ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಕ್ಷೇತ್ರಗಳ ಬೆಳವಣಿಗೆಗೆ ಪ್ರೋತ್ಸಾಹಿಸುವ ಸಲುವಾಗಿ ಬ್ರಿಕ್ಸ್ ದೇಶಗಳ ನಡುವೆ ಹೆಚ್ಚಿನ ಸಹಕಾರದ ಅಗತ್ಯವನ್ನು ಒತ್ತಿ ಹೇಳಿದ ಅವರು, ‘ಮುಂದಿನ ವರ್ಷ ಬ್ರೆಜಿಲ್‌ನಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗದಲ್ಲಿ ಸದಸ್ಯ ರಾಷ್ಟ್ರಗಳು ಪರಸ್ಪರ ಸಹಯೋಗಕ್ಕೆ ಪೂರಕವಾದ ಕ್ಷೇತ್ರಗಳನ್ನು ಗುರುತಿಸಬೇಕು’ ಎಂದು ಸಲಹೆ ನೀಡಿದರು.