ಸಾರಾಂಶ
ನವದೆಹಲಿ : ‘ಹಿಂದುಗಳೆಂದು ತಮ್ಮನ್ನು ಕರೆದುಕೊಳ್ಳುವವರು ನಿರಂತರವಾಗಿ ಹಿಂಸಾಚಾರದಲ್ಲಿ ತೊಡಗಿದ್ದಾರೆ. ಇಂಥವರು ಹಿಂದೂಗಳೇ ಅಲ್ಲ’ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸದನದಲ್ಲಿ ಸೋಮವಾರ ನೀಡಿದ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದೆ.
ಬಳಿಕ ತಮ್ಮ ಮಾತಿಗೆ ಸ್ಪಷ್ಟನೆ ನೀಡಿರುವ ರಾಹುಲ್, ‘ನಾನು ಬಿಜೆಪಿ, ಆರ್‌ಎಸ್‌ಎಸ್ ಮತ್ತು ಮೋದಿ ಬಗ್ಗೆ ಮಾತನಾಡಿದ್ದೇನೆ. ಬಿಜೆಪಿ, ಆರ್‌ಎಸ್‌ಎಸ್ ಮತ್ತು ಮೋದಿ ಅಂದರೆ ಇಡೀ ಹಿಂದೂ ಸಮಾಜ ಅಲ್ಲ’ ಎಂದು ಹೇಳಿದ್ದಾರೆ.
ದೇವರ ಚಿತ್ರ ಹಿಡಿದು ವಾಗ್ದಾಳಿ:ವಿಪಕ್ಷ ನಾಯಕರಾದ ನಂತರ ಮೊದಲ ಬಾರಿ ಲೋಕಸಭೆಯಲ್ಲಿ ಸೋಮವಾರ ಅಬ್ಬರದ ಭಾಷಣ ಮಾಡಿದ ರಾಹುಲ್ ಗಾಂಧಿ ಅವರು ಈಶ್ವರ, ಮೊಹಮ್ಮದ್ ಪೈಗಂಬರ, ಗುರುನಾನಕ್ ಅವರ ಚಿತ್ರ ಮತ್ತು ನಿರ್ಭಯತೆ ಹಾಗೂ ಅಹಿಂಸೆಯ ಕುರಿತು ಇವರ ಸಂದೇಶವಿರುವ ಚಿತ್ರಗಳನ್ನು ಪ್ರದರ್ಶಿಸಿ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.‘ಇಸ್ಲಾಂ, ಕ್ರಿಶ್ಚಿಯನ್, ಬುದ್ಧಿಸಂ, ಜೈನಿಸಂ, ಸಿಖ್ ಹೀಗೆ ಎಲ್ಲಾ ಧರ್ಮಗಳೂ ನಿರ್ಭಯತ್ವದ ಬಗ್ಗೆ ಮಾತನಾಡುತ್ತವೆ. ಎಲ್ಲಾ ಧರ್ಮಗಳು ಹಾಗೂ ನಮ್ಮೆಲ್ಲಾ ಐತಿಹಾಸಿಕ ಪುರುಷರು ಅಹಿಂಸೆಯ ಬಗ್ಗೆ ಮಾತನಾಡುತ್ತಾರೆ. ಆದರೆ, ತಮ್ಮನ್ನು ತಾವು ಹಿಂದೂಗಳು ಎಂದು ಕರೆದುಕೊಳ್ಳುವವರು ಕೇವಲ ಹಿಂಸಾಚಾರ, ದ್ವೇಷ ಹಾಗೂ ಸುಳ್ಳಿನ ಬಗ್ಗೆ ಮಾತನಾಡುತ್ತಾರೆ. ನೀವು ಹಿಂದೂಗಳೇ ಅಲ್ಲ’ ಎಂದು ಕಿಡಿಕಾರಿದರು.