ಮೋದಿಗೆ ಸರ್ಕಾರ 5 ವರ್ಷ ಉಳಿವುದು ಅನುಮಾನ: ರಾಹುಲ್‌

| Published : Jun 19 2024, 01:02 AM IST

ಸಾರಾಂಶ

ಎನ್‌ಡಿಎ ಬಣದ ಸಂಸದರು ಪಕ್ಷಾಂತರ ಆಗಲಿದ್ದಾರೆ. ಕೋಮುದ್ವೇಷದ ಅಜೆಂಡಾ ತಿರುಗುಬಾಣವಾಗಿದೆ. ಒಡೆದು ಆಳುವ ನೀತಿಗೆ ಜನ ತಿರಸ್ಕಾರ ಮಾಡಿದ್ದಾರೆ ಎಂದು ರಾಹುಲ್‌ ಗಾಂಧಿ ವಿದೇಶಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

ನವದೆಹಲಿ: 18ನೇ ಲೋಕಸಭಾ ಚುನಾವಣೆಯಲ್ಲಿ ಬಹುಮತ ಸಾಧಿಸಿ ಸರ್ಕಾರ ರಚಿಸಿರುವ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ತನ್ನನ್ನು ರಕ್ಷಿಸಿಕೊಳ್ಳಲು ಮುಂದಿನ ದಿನಗಳಲ್ಲಿ ಭಾರೀ ಕಷ್ಟಪಡುವ ಸನ್ನಿವೇಶ ಎದುರಾಗಲಿದೆ ಎಂಬುದಾಗಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.

ಲಂಡನ್‌ ಮೂಲದ ಸುದ್ದಿಮಾಧ್ಯಮ ಫಿನಾನ್ಶಿಯಲ್‌ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಾಹುಲ್‌, ‘ಭಾರತದ ರಾಜಕಾರಣದಲ್ಲಿ ಬದಲಾವಣೆಯ ಗಾಳಿ ಬೀಸಿದೆ. ಎನ್‌ಡಿಎ ಮೈತ್ರಿಕೂಟ ಸರ್ಕಾರ ರಚಿಸಿದ್ದರೂ ಅದಕ್ಕೆ ಸರಳ ಬಹುಮತವಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಸರ್ಕಾರ ಬೀಳುವ ಸಂಭವವಿರುತ್ತದೆ. ಹಾಗಾಗಿ ಮುಂದಿನ ದಿನಗಳಲ್ಲಿ ತಮ್ಮ ಸರ್ಕಾರ ಉಳಿಸಿಕೊಳ್ಳಲು ಬಿಜೆಪಿ ಶ್ರಮ ಹಾಕುವ ಕಾಲ ಬರುತ್ತದೆ’ ಎಂದು ತಿಳಿಸಿದ್ದಾರೆ.

ಪಕ್ಷಾಂತರ ಪರ್ವ:

‘ಎನ್‌ಡಿಎ ಮೈತ್ರಿಕೂಟದ ಹಲವು ಸಂಸದರು ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆ. ಹಲವೆಡೆ ಒಡೆದಾಳುವ ನೀತಿಯ ಮೂಲಕ ಸರ್ಕಾರ ರಚಿಸಿದ್ದ ಬಿಜೆಪಿಗೆ ಕೇಂದ್ರದಲ್ಲಿ ತಿರುಗುಬಾಣವಾಗಲಿದೆ. ಪ್ರಮುಖವಾಗಿ ಒಂದು ಪ್ರಬಲ ಮಿತ್ರಪಕ್ಷವೇ ತನ್ನ ಬೆಂಬಲ ಹಿಂಪಡೆದರೂ ಕೇಂದ್ರ ಸರ್ಕಾರ ಬಿದ್ದು ಹೋಗಲಿದೆ’ ಎಂದು ಎಚ್ಚರಿಕೆ ನೀಡಿದರು.

ಕೋಮುದ್ವೇಷ ತಿರುಗುಬಾಣ:

ಚುನಾವಣಾ ಪ್ರಚಾರದ ಕುರಿತು ಮಾತನಾಡಿದ ಕಾಂಗ್ರೆಸ್‌ ನಾಯಕ ‘ಬಿಜೆಪಿಯು ಮುಸ್ಲಿಮರನ್ನು ಒಳನುಸುಳುಕೋರರು ಎನ್ನುವ ಮೂಲಕ ಕೋಮುದ್ವೇಷವನ್ನು ಬಿತ್ತಲು ಪ್ರಯತ್ನಿಸಿತು. ಈ ಚುನಾವಣೆಯಲ್ಲಿ ಜನತೆ ಬಿಜೆಪಿಯ ಒಡೆದಾಳುವ ನೀತಿ ಹಾಗೂ ಕೋಮುದ್ವೇಷವನ್ನು ತಿರಸ್ಕರಿಸಿ ತಮ್ಮ ತೀರ್ಪನ್ನು ನೀಡಿದ್ದಾರೆ’ ಎಂದು ತಿಳಿಸಿದರು.