ವಯನಾಡಿಗೆ ರಾಹುಲ್ ಗುಡ್‌ಬೈ, ಸೋದರಿ ಪ್ರಿಯಾಂಕಾ ಸ್ಪರ್ಧೆ

| Published : Jun 18 2024, 12:52 AM IST / Updated: Jun 18 2024, 05:27 AM IST

Priyanka Gandhi Wayanad By Election
ವಯನಾಡಿಗೆ ರಾಹುಲ್ ಗುಡ್‌ಬೈ, ಸೋದರಿ ಪ್ರಿಯಾಂಕಾ ಸ್ಪರ್ಧೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಯ್‌ಬರೇಲಿ ಉಳಿಸಿಕೊಳ್ಳಲು ರಾಗಾ ನಿರ್ಧಾರ ಮಾಡಿದ್ದು, ವಯನಾಡಿನಿಂದ ಮೊದಲ ಬಾರಿ ಪ್ರಿಯಾಂಕಾ ಚುನಾವಣಾ ಅಖಾಡಕ್ಕೆ ಇಳಿಯುತ್ತಿದ್ದಾರೆ.

 ನವದೆಹಲಿ :  ಅತ್ಯಂತ ಮಹತ್ವದ ನಿರ್ಧಾರವೊಂದರಲ್ಲಿ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಕೇರಳದ ವಯನಾಡ್‌ ಕ್ಷೇತ್ರವನ್ನು ಬಿಟ್ಟಿಕೊಟ್ಟು, ಉತ್ತರ ಪ್ರದೇಶದ ರಾಯ್‌ಬರೇಲಿ ಕ್ಷೇತ್ರವನ್ನು ಉಳಿಸಿಕೊಂಡಿದ್ದಾರೆ, ಇದೇ ವೇಳೆ, ಸೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ರಾಹುಲ್ ರಾಜೀನಾಮೆಯಿಂದ ತೆರವಾಗಲಿರುವ ಕೇರಳದ ವಯನಾಡ್‌ನಿಂದ ಸಂಸತ್ತಿನ ಉಪಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ಕಾಂಗ್ರೆಸ್‌ ಘೋಷಿಸಿದೆ. ಪ್ರಿಯಾಂಕಾ ಈ ಮೂಲಕ ಮೊದಲ ಬಾರಿ ಚುನಾವಣಾ ಅಖಾಡಕ್ಕೆ ಇಳಿಯಲಿದ್ದಾರೆ.

ಸೋಮವಾರ ಸಂಜೆ ನಡೆದ ಕಾಂಗ್ರೆಸ್‌ ಸಭೆ ಬಳಿಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಹುಲ್‌ ಹಾಗೂ ಪ್ರಿಯಾಂಕಾ ಸಮ್ಮುಖದಲ್ಲಿ ಈ ಮಹತ್ವದ ವಿಷಯಗಳನ್ನು ಪ್ರಕಟಿಸಿದರು.

ಇದೇ ವೇಳೆ ಮಾತನಾಡಿದ ರಾಹುಲ್‌, ‘ವಯನಾಡ್‌ ಬಿಡುವುದು ಅಷ್ಟು ಸುಲಭದ ನಿರ್ಧಾರ ಆಗಿರಲಿಲ್ಲ. ಏಕೆಂದರೆ ಅದು ಕಳೆದ 5 ವರ್ಷದಿಂದ ನನ್ನ ಕೈಹಿಡಿದ ಕ್ಷೇತ್ರವಾಗಿತ್ತು. ಆದರೆ ಈ ಕ್ಷೇತ್ರದಿಂದ ಈಗ ಸೋದರಿ ಪ್ರಿಯಾಂಕಾ ಸ್ಪರ್ಧಿಸಲಿದ್ದಾರೆ. ಅವರು ನಾನು ನೀಡಿದ ಭರವಸೆಗಳನ್ನು ಈಡೇರಿಸಲಿದ್ದಾರೆ. ನಾನು ಕೂಡ ಆಗಾಗ ವಯನಾಡ್‌ಗೆ ಭೇಟಿ ಮುಂದುವರಿಸುವೆ’ ಎಂದರು. ಅಲ್ಲದೆ, ‘ರಾಯ್ ಬರೇಲಿ ಹಾಗೂ ವಯನಾಡ್‌ಗೆ ಇನ್ನು ಇಬ್ಬರು ಸಂಸದರು ಇರಲಿದ್ದಾರೆ’ ಎಂದು ರಾಹುಲ್‌ ತಮಾಷೆಯಾಗಿ ನುಡಿದರು.

ಪ್ರಿಯಾಂಕಾ ಗಾಂಧಿ ಮಾತನಾಡಿ, ‘ರಾಹುಲ್ ಇಲ್ಲದ ಅನಾಥಪ್ರಜ್ಞೆಯನ್ನು ಕಾಡಲು ಕೇರಳದ ವಯನಾಡ್‌ ಜನರಿಗೆ ನಾನು ಬಿಡುವುದಿಲ್ಲ. ನಾನು ಆ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ಚುನಾವಣಾ ರಾಜಕೀಯವೆಂದರೆ ನನಗೆ ಹಿಂಜರಿಕೆ ಇಲ್ಲ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವೆ’ ಎಂದರು. ವಯನಾಡ್‌ನಲ್ಲಿ ಇನ್ನು 6 ತಿಂಗಳಲ್ಲಿ ಉಪಚುನಾವಣೆ ನಡೆಯಲಿದೆ.

ಎರಡೂ ಕಡೆ ಗೆದ್ದಿದ್ದ ರಾಗಾ:

ಮೊನ್ನೆಯ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ರಾಯ್‌ಬರೇಲಿ ಹಾಗೂ ವಯನಾಡ್‌- ಎರಡೂ ಕಡೆ ಗೆದ್ದಿದ್ದರು. ರಾಯ್‌ಬರೇಲಿಯಲ್ಲಿ ಅವರು ಅವರು ಬಿಜೆಪಿಯ ದಿನೇಶ್ ಪ್ರತಾಪ್ ಸಿಂಗ್ ಅವರನ್ನು 3,90,030 ಮತಗಳ ಅಂತರದಿಂದ ಸೋಲಿಸಿದ್ದರು. ವಯನಾಡ್‌ನಲ್ಲಿ ತಮ್ಮ ಸಮೀಪದ ಪ್ರತಿಸ್ಪರ್ಧಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾರ್ಕ್ಸ್‌ವಾದಿ ಅಭ್ಯರ್ಥಿ ಅನ್ನಿ ರಾಜಾ ಅವರನ್ನು 3,64,422 ಮತಗಳ ಪರಾಜಿತಗೊಳಿಸಿದ್ದರು.

2 ಕ್ಷೇತ್ರದಲ್ಲಿ ಆಯ್ಕೆ ಆದವರಿಗೆ 1 ಕ್ಷೇತ್ರ ಆಯ್ಕೆ ಮಾಡಿಕೊಳ್ಳಲು, ಆಯ್ಕೆ ಆದ ದಿನದಿಂದ 14 ದಿನಗಳ ಸಮಯಾವಕಾಶ ಇರುತ್ತದೆ. ಈ ಸಮಯಾವಕಾಶ ಸೋಮವಾರ ಕೊನೆಗೊಂಡಿದ್ದು, ಒಂದನ್ನು ರಾಹುಲ್‌ ಆಯ್ಕೆ ಮಾಡಿಕೊಂಡಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ, ರಾಹುಲ್ ಗಾಂಧಿ ಅವರು ಅಮೇಠಿ ಮತ್ತು ವಯನಾಡ್‌ನಿಂದ ಸ್ಪರ್ಧಿಸಿದ್ದರು ಮತ್ತು ಅಮೇಠಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ವಿರುದ್ಧ ಸೋತಿದ್ದರು. ಹೀಗಾಗಿ ಅವರಿಗೆ 5 ವರ್ಷ ವಯನಾಡ್‌ ಆಸರೆ ಆಗಿತ್ತು.

ಮೊದಲ ಬಾರಿ ಚುನಾವಣಾ ಅಖಾಡಕ್ಕೆ ಪ್ರಿಯಾಂಕಾ:

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಆಗಿ 52ರ ಹರೆಯದ ಪ್ರಿಯಾಂಕಾ ಗಾಂಧಿ 2020ರಲ್ಲೇ ನೇಮಕ ಆಗಿದ್ದರು. ಆದರೆ ಚುನಾವಣಾ ಅಖಾಡಕ್ಕೆ ಇಳಿಯುತ್ತಿರುವುದು ಇದೇ ಮೊದಲು. ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ಅವರು ಅಮೇಠಿ ಅಥವಾ ರಾಯ್‌ಬರೇಲಿ ಕ್ಷೇತ್ರದಿಂದ ಕಣಕ್ಕೆ ಇಳಿಯಬಹುದು ಎನ್ನಲಾಗಿತ್ತು. ಆದರೆ ಕೊನೇ ಕ್ಷಣದಲ್ಲಿ ಅದು ಹುಸಿಯಾಗಿತ್ತು.

ಇದಕ್ಕೂ ಮುನ್ನ ಅವರು ಉತ್ತರ ಪ್ರದೇಶದ ವಾರಾಣಸಿ, ಕರ್ನಾಟಕ ಅಥವಾ ತೆಲಂಗಾಣದ ಯಾವುದಾದರೂ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಬಹುದು ಎಂಬ ಊಹಾಪೋಹ ಇದ್ದವು.