ಸಾರಾಂಶ
ಸೆಲ್ಜಾ, ಗೌರವ್, ಮನೀಶ್ ಪೈಕಿ ಒಬ್ಬರು ವಿಪಕ್ಷ ನಾಯಕನ ಸ್ಥಾನಕ್ಕೆ ಆಯ್ಕೆಯಾಗುವ ಸಾಧ್ಯತೆಯಿದೆ.
ನವದೆಹಲಿ: ದೇಶಾದ್ಯಂತ ಅಬ್ಬರದ ಪ್ರಚಾರ ಮಾಡುವ ಮೂಲಕ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಗಳಿಕೆಯನ್ನು 52ರಿಂದ 99ಕ್ಕೆ ಏರಿಸುವಲ್ಲಿ ಯಶಸ್ವಿಯಾಗಿದ್ದರೂ ರಾಹುಲ್ ಗಾಂಧಿ ಲೋಕಸಭೆ ಪ್ರತಿಪಕ್ಷ ನಾಯಕ ಹುದ್ದೆ ಅಲಂಕರಿಸಲು ನಿರಾಕರಿಸಿದ್ದಾರೆ ಎನ್ನಲಾಗಿದೆ.
ಎರಡು ಅವಧಿಯ ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಪ್ರತಿಪಕ್ಷ ನಾಯಕನ ಹುದ್ದೆ ಅಲಂಕರಿಸುವ ಅವಕಾಶ ಈಗ ಲಭಿಸಿದೆ. ಆದರೆ ರಾಹುಲ್ ನಿರಾಕರಿಸಿರುವ ಕಾರಣ ಪಕ್ಷದ ಹಿರಿಯ ಸಂಸದರಾದ ಗೌರವ್ ಗೊಗೊಯ್, ಮನೀಶ್ ತಿವಾರಿ ಹಾಗೂ ಕುಮಾರಿ ಸೆಲ್ಜಾ ಪೈಕಿ ಒಬ್ಬರನ್ನು ಅರಿಸುವ ಸಾಧ್ಯತೆಗಳಿವೆ. ಈ ಮೂಲಕ ಸಂಸತ್ತಿನ ಒಳಗೆ ಮತ್ತು ಹೊರಗೆ ಬಿಜೆಪಿಯ ರೀತಿ-ನೀತಿಗಳನ್ನು ತೀಕ್ಷ್ಣವಾಗಿ ಪ್ರಶ್ನಿಸುವ ನಾಯಕರನ್ನು ಹುದ್ದೆಯಲ್ಲಿ ಕೂರಿಸಲು ಚಿಂತನೆ ನಡೆಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.