ಸಾರಾಂಶ
ಟೆಕ್ಸಾಸ್: ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ನಿರಾಕರಿಸಿದ್ದು ಬಹುದೊಡ್ಡ ಸಾಧನೆ ಎಂದು ಬಣ್ಣಿಸಿರುವ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ, ‘ಚುನಾವಣೆಯ ಬಳಿಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಬಗ್ಗೆ ಇದ್ದ ಭಯ ನಿವಾರಣೆ ಆಗಿದೆ’ ಎಂದಿದ್ದಾರೆ.
ಹಾಲಿ ಅಮೆರಿಕದ ಪ್ರವಾಸದಲ್ಲಿರುವ ರಾಹುಲ್, ಭಾನುವಾರ ಟೆಕ್ಸಾಸ್ ವಿವಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು ಮತ್ತು ಇಲ್ಲಿನ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದರು.ಭಾರತೀಯ ಸಮುದಾಯ ಉದ್ದೇಶಿಸಿ ಮಾತನಾಡಿದ ರಾಹುಲ್, ‘ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ಮರುಕ್ಷಣವೇ ಬಿಜೆಪಿ ಮತ್ತು ಭಾರತೀಯ ಪ್ರಧಾನಿ ಕುರಿತ ಇದ್ದ ಭೀತಿ ದೂರವಾಯಿತು. ಇದು ರಾಹುಲ್ ಅಥವಾ ಕಾಂಗ್ರೆಸ್‌ನ ಸಾಧನೆಯಲ್ಲ. ಇದು ಸಂವಿಧಾನದ ಮೇಲಿನ ದಾಳಿಯನ್ನು ಒಪ್ಪಲಾಗದು ಎಂದು ಅರ್ಥೈಸಿಕೊಂಡ ಭಾರತೀಯರ ಸಾಧನೆ. ಬಿಜೆಪಿ ಮತ್ತು ಆರ್‌ಎಸ್‌ಎಸ್, ಭಾರತವನ್ನು ಏಕ ಚಿಂತನೆಯಿಂದ ನೋಡಿದರೆ, ಕಾಂಗ್ರೆಸ್ ಬಹುತ್ವದ ದೃಷ್ಟಿಕೋನದಿಂದ ನೋಡುತ್ತದೆ’ ಎಂದರು.
ಮಹಿಳೆ ಮನೆಯಲ್ಲೇ ಇರಬೇಕೆಂದು ಆರೆಸ್ಸೆಸ್ ಬಯಕೆ: ರಾಹುಲ್ವಿದ್ಯಾರ್ಥಿಗಳೊಂದಿಗಿನ ಸಂವಾದದ ವೇಳೆ ಭಾರತದಲ್ಲಿ ಮಹಿಳೆಯರು ಉದ್ಯೋಗದಲ್ಲಿ ಭಾಗವಹಿಸುವಿಕೆ ಕಡಿಮೆ ಇರುವ ಬಗ್ಗೆ ಪ್ರತಿಕ್ರಿಯಿಸಿದ ರಾಹುಲ್, ‘ಮಹಿಳೆ ಬಗ್ಗೆ ಬಿಜೆಪಿ, ಆರೆಸ್ಸೆಸ್ ತಾತ್ಸಾರ ಹೊಂದಿದ್ದೇ ಇದಕ್ಕೆ ಕಾರಣ. ಮಹಿಳೆಯರು ಮನೆಯಲ್ಲೇ ಇರಬೇಕೆಂಬುದು ಆರೆಸ್ಸೆಸ್ ಬಯಕೆ’ ಎಂದರು.
‘ಇದಕ್ಕೆ ಮಹಿಳೆಯರ ಕುರಿತ ಭಾರತೀಯ ಪುರುಷರ ಮನಸ್ಥಿತಿ ಕಾರಣ. ಮಹಿಳೆಯರು ಕೂಡಾ ನಮ್ಮಂತೆಯೇ ಚಿಂತಿಸುತ್ತಾರೆ ಎಂಬ ಭಾವನೆ ಪುರುಷರಲ್ಲೂ ಬರಬೇಕಿದೆ. ಈ ವಿಷಯದಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಪಾತ್ರ ಕೂಡಾ ಇದೆ. ಅವರು ಮಹಿಳೆಯನ್ನು ಕೆಲವೊಂದು ಕೆಲಸಕ್ಕಷ್ಟೇ ಸೀಮಿತ ಮಾಡಿಟ್ಟಿದ್ದಾರೆ. ಅವರು ಮನೆಯಲ್ಲೇ ಇರಬೇಕು, ಅಡುಗೆ ಮಾತ್ರ ಮಾಡಬೇಕು. ಹೆಚ್ಚು ಮಾತನಾಡಬಾರದು ಎಂಬ ಮನಸ್ಥಿತಿಯಲ್ಲಿದ್ದಾರೆ. ಆದರೆ ನಾವು, ಮಹಿಳೆಯರು ಮುಕ್ತವಾಗಿ ಇರಲಿ ಎಂದು ಬಯಸುತ್ತೇವೆ’ ಎಂದು ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ಹರಿಹಾಯ್ದರು.==
ಭಾರತದ ಪ್ರತಿಭೆಗಳಿಗೆ ಏಕಲವ್ಯನ ಸ್ಥಿತಿ: ರಾಗಾವಾಷಿಂಗ್ಟನ್: ‘ವಿವಿಧ ರೀತಿಯ ಕೌಶಲ್ಯ ಹೊಂದಿರುವ ಲಕ್ಷಾಂತರ ಪ್ರತಿಭೆಗಳು ಭಾರತದಲ್ಲಿವೆ. ನಮ್ಮಲ್ಲಿ ಕೌಲಶ್ಯಕ್ಕೆ ಕೊರತೆ ಇಲ್ಲ. ಆದರೆ ಅವರನ್ನು ಗುರುತಿಸಿ ಹಾಗೂ ದಿಕ್ಕು ತೋರಿಸಿ ಪ್ರೋತ್ಸಾಹಿಸುವವರಿಲ್ಲ. ಇಂದು ದೇಶದಲ್ಲಿ ಅವರ ಸ್ಥಿತಿ ಏಕಲವ್ಯನ ಥರ ಆಗಿದೆ’ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಅಮೆರಿಕದಲ್ಲಿ ಟೆಕ್ಸಾಸ್ ವಿವಿ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದ ರಾಹುಲ್, ‘ನಿಮಗೆಲ್ಲ ಏಕಲವ್ಯನ ಕಥೆ ಗೊತ್ತಿರಬಹುದು. ಭಾರತದಲ್ಲಿ ನಿತ್ಯವೂ ಲಕ್ಷಾಂತರ ಏಕಲವ್ಯರು, ಮಹಾಭಾರತದ ಏಕಲವ್ಯನಂತೆ ಅವಕಾಶ ವಂಚಿತರಾಗುತ್ತಿದ್ದಾರೆ. ಎಲ್ಲಾ ರೀತಿಯ ಕೌಶಲ್ಯ ಹೊಂದಿದವರನ್ನು ಕಡೆಗಣಿಸಲಾಗುತ್ತಿದೆ. ಅವರು ಕೆಲಸ ಮಾಡಲಾಗಲೀ ಅಥವಾ ತಮ್ಮ ಪ್ರತಿಭೆಯನ್ನು ತೋರಿಸಲಾಗಲೀ ಅವಕಾಶ ನೀಡುತ್ತಿಲ್ಲ. ಎಲ್ಲಾ ಕಡೆಯೂ ಇಂಥ ಬೆಳವಣಿಗೆ ನಡೆಯುತ್ತಿದೆ’ ಎಂದು ಟೀಕಿಸಿದರು.ಮಹಾಭಾರತದಲ್ಲಿ ಆದಿವಾಸಿ ಜನಾಂಗದ ಏಕಲವ್ಯ ಬಿಲ್ವಿದ್ಯೆ ಕಲಿಸಲು ದ್ರೋಣಾಚಾರ್ಯರಿಗೆ ಕೇಳುತ್ತಾನೆ. ಆದರೆ ಕಲಿಸಲು ದ್ರೋಣರಿಗೆ ಮನಸ್ಸಿರುವುದಿಲ್ಲ. ಹೀಗಾಗಿ ಗುರುದಕ್ಷಿಣೆಗಾಗಿ ಆತನಿಗೆ ಬೆರಳು ಕತ್ತರಿಸಿ ಕೊಡು ಎನ್ನುತ್ತಾರೆ. ಏಕಲವ್ಯ ಈ ಆಜ್ಞೆ ಪಾಲಿಸಿದಾಗ, ಆತನ ಬಿಲ್ವಿದ್ಯೆ ಕನಸು ಕಮರಿ ಹೋಗುತ್ತದೆ. ‘ಭಾರತದಲ್ಲೂ ಈಗ ಪ್ರತಿಭೆಗಳ ಸ್ಥಿತಿ ಹೀಗಾಗಿದೆ’ ಎಂದು ರಾಹುಲ್ ನುಡಿದರು.==
ರಾಹುಲ್ ಪಪ್ಪು ಅಲ್ಲ, ಸುಶಿಕ್ಷಿತ, ತಂತ್ರಗಾರ: ಪಿತ್ರೋಡಾವಾಷಿಂಗ್ಟನ್: ಬಿಜೆಪಿ ನಾಯಕರು ದೂಷಿಸುವ ರೀತಿಯಲ್ಲಿ ರಾಹುಲ್ ಗಾಂಧಿ ‘ಪಪ್ಪು’ ಅಲ್ಲ. ಅವರೊಬ್ಬ ಸುಶಿಕ್ಷಿತ, ಜ್ಞಾನವಂತ ಮತ್ತು ಉತ್ತಮ ರಣತಂತ್ರಗಾರ ಎಂದು ಗಾಂಧೀ ಕುಟುಂಬ ಆಪ್ತ ಸ್ಯಾಮ್ ಪಿತ್ರೋಡಾ ಹೇಳಿದ್ದಾರೆ.
ಭಾನುವಾರ ಟೆಕ್ಸಾಸ್ ವಿವಿಯ ವಿದ್ಯಾರ್ಥಿಗಳಿಗೆ, ರಾಹುಲ್ ಗಾಂಧಿ ಪರಿಚಯ ಮಾಡಿದ ಸ್ಯಾಮ್ ಪಿತ್ರೋಡಾ, ‘ರಾಹುಲ್ ಅವರನ್ನು ಪಪ್ಪು ಎಂದು ಬಿಂಬಿಸಲು ಬಿಜೆಪಿ ಕೋಟ್ಯಂತರ ರು. ಹಣ ವ್ಯಯ ಮಾಡುತ್ತಿದೆ. ಆದರೆ ನಾನು ನಿಮಗೆ ಹೇಳಬಯಸುತ್ತೇನೆ, ಅವರು ಪಪ್ಪು ಅಲ್ಲ. ಅವರೊಬ್ಬ ಸುಶಿಕ್ಷಿತ, ಜ್ಞಾನವಂತ ಮತ್ತು ದೂರದೃಷ್ಟಿ ಹೊಂದಿದ ನಾಯಕ. ಯಾವುದೇ ವಿಷಯದ ಬಗ್ಗೆ ಅವರು ಆಳವಾಗಿ ಚಿಂತಿಸಿ ಕಾರ್ಯತಂತ್ರ ರೂಪಿಸುವಂಥ ಶಕ್ತಿ ಹೊಂದಿದ್ದಾರೆ’ ಎಂದರು.