ಸಾರಾಂಶ
ನವದೆಹಲಿ : ಉದ್ಯಮಿ ಗೌತಮ್ ಅದಾನಿಯವರ ಅದಾನಿ ಗ್ರೀನ್ ಎನರ್ಜಿ ಕಂಪನಿಯು ಭಾರತದ ಅಧಿಕಾರಿಗಳಿಗೆ ಸಾವಿರಾರು ಕೋಟಿ ರು. ಲಂಚ ನೀಡಿದೆ ಎಂದು ಅಮೆರಿಕದ ಕಾನೂನು ಇಲಾಖೆ ವರದಿ ನೀಡಿರುವುದರಿಂದ ಕೂಡಲೇ ಅದಾನಿಯನ್ನು ಬಂಧಿಸಿ ತನಿಖೆಗೆ ಒಳಪಡಿಸಬೇಕು ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅದಾನಿ ಭಾರತದ ಹಾಗೂ ಅಮೆರಿಕದ ಕಾಯ್ದೆಗಳನ್ನು ಉಲ್ಲಂಘಿಸಿದ್ದಾರೆ. ಆದರೆ ಮೋದಿ ಮತ್ತು ಅದಾನಿ ಒಗ್ಗಟ್ಟಾಗಿರುವುದರಿಂದ ಅದಾನಿ ಭಾರತದಲ್ಲಿ ಸುರಕ್ಷಿತವಾಗಿದ್ದಾರೆ. ‘ಒಗ್ಗಟ್ಟಾಗಿದ್ದರೆ ಸುರಕ್ಷಿತವಾಗಿರುತ್ತೇವೆ’ ಎಂದು ಮೋದಿ ಹೇಳುತ್ತಾರೆ. ಮೋದಿ-ಅದಾನಿ ವಿಷಯದಲ್ಲಿ ಇದು ನಿಜ. ಮೋದಿ ಇರುವತನಕ ಅದಾನಿಯನ್ನು ಬಂಧಿಸುವುದಿಲ್ಲವೆಂದು ನಮಗೆ ಗೊತ್ತಿದೆ. ಆದರೂ ಅವರನ್ನು ಕೂಡಲೇ ಬಂಧಿಸಿ ಜೈಲಿಗಟ್ಟಬೇಕು ಎಂದು ನಾವು ಆಗ್ರಹಿಸುತ್ತೇವೆ ಎಂದರು.
ಅಲ್ಲದೆ, ಅದಾನಿಯ ಜೊತೆಗೆ ಕೈಜೋಡಿಸಿ ಭ್ರಷ್ಟಾಚಾರಕ್ಕೆ ಸಹಕರಿಸಿದ ಸೆಬಿ ಮುಖ್ಯಸ್ಥೆ ಮಾಧವಿ ಬುಚ್ ಅವರನ್ನೂ ತನಿಖೆಗೆ ಒಳಪಡಿಸಬೇಕು. ಅದಾನಿ ಎನರ್ಜಿ ಭ್ರಷ್ಟಾಚಾರದ ಬಗ್ಗೆ ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಸಬೇಕು. ಈ ವಿಷಯವನ್ನು ನಾವು ಸಂಸತ್ ಅಧಿವೇಶನದಲ್ಲೂ ಪ್ರಸ್ತಾಪಿಸುತ್ತೇವೆ ಎಂದು ತಿಳಿಸಿದರು.