ಸಾರಾಂಶ
ತಾಯಿಯ ಹೊಣೆಗಾರಿಕೆ ನನ್ನ ಹೆಗಲಿಗೆ ಬಂದಿದ್ದು ಖುಷಿ ನೀಡಿದೆ ಎಂದು ಸ್ಪರ್ಧೆಯ ಬಗ್ಗೆ ಕಾಂಗ್ರೆಸ್ ನಾಯಕನ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ರಾಯ್‌ಬರೇಲಿ (ಉ.ಪ್ರ.): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ರಾಯ್‌ಬರೇಲಿ ಸ್ಪರ್ಧೆಯ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ್ದು, ‘ರಾಯ್‌ಬರೇಲಿಯಿಂದ ನಾಮನಿರ್ದೇಶನವು ನನಗೆ ಭಾವನಾತ್ಮಕ ಕ್ಷಣವಾಗಿದೆ’ ಎಂದು ಹೇಳಿದ್ದಾರೆ. ಅಲ್ಲದೆ, ‘ನನಗೆ ರಾಯ್‌ಬರೇಲಿ ಬೇರೆ ಅಲ್ಲ, ಅಮೇಠಿ ಬೇರೆ ಅಲ್ಲ. ಎರಡೂ ಕ್ಷೇತ್ರಗಳು ನನ್ನ ಕುಟುಂಬ’ ಎಂದು ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ಸಂಜೆ ಟ್ವೀಟ್ ಮಾಡಿರುವ ರಾಹುಲ್, ‘ರಾಯಬರೇಲಿಯಿಂದ ನಾಮನಿರ್ದೇಶನವು ನನಗೆ ಭಾವನಾತ್ಮಕ ಕ್ಷಣವಾಗಿದೆ. ನನ್ನ ತಾಯಿ ನನಗೆ ಅತ್ಯಂತ ಆತ್ಮವಿಶ್ವಾಸದಿಂದ ಕುಟುಂಬದ ಕೆಲಸದ ಸ್ಥಳದ ಜವಾಬ್ದಾರಿಯನ್ನು ವಹಿಸಿಕೊಟ್ಟು ಸೇವೆ ಮಾಡುವ ಅವಕಾಶವನ್ನು ನೀಡಿದ್ದಾರೆ’ ಎಂದಿದ್ದಾರೆ.
ಇದೇ ವೇಳೆ ಅಮೇಠಿ ತೊರೆದ ಬಗ್ಗೆಯೂ ಪ್ರತಿಕ್ರಿಯೆ ನೀಡಿರುವ ಅವರು, ‘ಅಮೇಠಿ ಮತ್ತು ರಾಯ್‌ಬರೇಲಿ ನನಗೆ ಬೇರೆ ಬೇರೆಯಲ್ಲ, ಎರಡೂ ನನ್ನ ಕುಟುಂಬವಾಗಿವೆ. 40 ವರ್ಷಗಳಿಂದ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಕಿಶೋರಿ ಲಾಲ್ ಜಿ ಅವರು ಅಮೇಠಿಯಿಂದ ಪಕ್ಷವನ್ನು ಪ್ರತಿನಿಧಿಸುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ’ ಎಂದಿದ್ದಾರೆ.
‘ಅನ್ಯಾಯದ ವಿರುದ್ಧ ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟದಲ್ಲಿ, ನನ್ನ ಪ್ರೀತಿಪಾತ್ರರ ಪ್ರೀತಿ ಮತ್ತು ಆಶೀರ್ವಾದವನ್ನು ನಾನು ಬಯಸುತ್ತೇನೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸುವ ಈ ಹೋರಾಟದಲ್ಲಿ ನೀವೆಲ್ಲರೂ ನನ್ನೊಂದಿಗೆ ನಿಲ್ಲುತ್ತೀರಿ ಎಂದು ನನಗೆ ವಿಶ್ವಾಸವಿದೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.