ಚುನಾವಣಾ ಆಯೋಗ, ಎಸ್‌ಐಆರ್‌ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ವಿರುದ್ಧ ಸಮರ ಸಾರಿರುವ ವಿಪಕ್ಷ ನಾಯಕ ರಾಹುಲ್ ಗಾಂಧಿ ಬಗ್ಗೆ ಮೌನ ಮುರಿದು ತೀವ್ರ ವಾಗ್ದಾಳಿ ನಡೆಸಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ‘ಕಾಂಗ್ರೆಸ್‌ನ ಚುನಾವಣಾ ಸೋಲಿಗೆ ಸ್ವತಃ ರಾಹುಲ್‌ ಗಾಂಧಿ ಕಾರಣರೇ ಹೊರತು ಎಸ್‌ಐಆರ್‌ ಅಲ್ಲ’ ಎಂದು ತಿರುಗೇಟು ನೀಡಿದ್ದಾರೆ.

ನವದೆಹಲಿ : ಚುನಾವಣಾ ಆಯೋಗ, ಎಸ್‌ಐಆರ್‌ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ವಿರುದ್ಧ ಸಮರ ಸಾರಿರುವ ವಿಪಕ್ಷ ನಾಯಕ ರಾಹುಲ್ ಗಾಂಧಿ ಬಗ್ಗೆ ಮೌನ ಮುರಿದು ತೀವ್ರ ವಾಗ್ದಾಳಿ ನಡೆಸಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ‘ಕಾಂಗ್ರೆಸ್‌ನ ಚುನಾವಣಾ ಸೋಲಿಗೆ ಸ್ವತಃ ರಾಹುಲ್‌ ಗಾಂಧಿ ಕಾರಣರೇ ಹೊರತು ಎಸ್‌ಐಆರ್‌ ಅಲ್ಲ’ ಎಂದು ತಿರುಗೇಟು ನೀಡಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅಮಿತ್‌ ಶಾ, ‘ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್‌ ಅನುಭವಿಸಿದ ಸೋಲಿಗೆ ಮತಪಟ್ಟಿಯ ವಿಶೇಷ ಪರಿಷ್ಕರಣೆ ಕಾರಣ ಅಲ್ಲ, ಬದಲಾಗಿ ಅದಕ್ಕೆ ರಾಹುಲ್ ಗಾಂಧಿ ಅವರೇ ಕಾರಣ. ಕಾಂಗ್ರೆಸ್‌ ಅನುಸರಿಸುತ್ತಿರುವ ನಕಾರಾತ್ಮಕ ರಾಜಕೀಯ ಎಂದಿಗೂ ಲಾಭ ಮಾಡಿಕೊಡುವುದಿಲ್ಲ. ಅದರ ಬದಲಾಗಿ ಜನರನ್ನು ಅರ್ಥ ಮಾಡಿಕೊಳ್ಳುವ ಮತ್ತು ಸಾರ್ವಜನಿಕರೊಂದಿಗೆ ಬೆರೆಯುವ ಕೆಲಸ ಮಾಡಬೇಕು. ಈ ಬಗ್ಗೆ ಕಾಂಗ್ರೆಸ್‌ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ’ ಎಂದು ಹೇಳಿದರು.

ಎಸ್‌ಐಆರ್‌ ಆರಂಭವಾಗಿದ್ದೇ 2024ರ ಲೋಕಸಭಾ ಚುನಾವಣೆ ಬಳಿಕ

ಜೊತೆಗೆ, ‘ನೀವು ಸೋಲಿಗೆ ಎಸ್‌ಐಆರ್‌ ಅನ್ನು ದೂಷಿಸುತ್ತೀರಿ. ಆದರೆ ಎಸ್‌ಐಆರ್‌ ಆರಂಭವಾಗಿದ್ದೇ 2024ರ ಲೋಕಸಭಾ ಚುನಾವಣೆ ಬಳಿಕ. 1985ರ ಬಳಿಕ ನೀವು ಗುಜರಾತ್‌ನಲ್ಲಿ ಗೆದ್ದಿದ್ದೇ ಇಲ್ಲ. 41 ವರ್ಷಗಳಿಂದ ನಿರಂತರವಾಗಿ ಸೋಲುತ್ತಲೇ ಇದ್ದೀರಿ. ಇದಕ್ಕೂ ಎಸ್‌ಐಆರ್‌ ಕಾರಣವೇ? ನೀವು ಪಕ್ಷದ ಪ್ರಮುಖ ನಾಯಕನಾದ ಬಳಿಕ, ಬಳಿಕ ಅಧ್ಯಕ್ಷರಾದ ಬಳಿಕ ಹಾಗೂ ಇದೀಗ ಲೋಕಸಭೆಯ ವಿಪಕ್ಷ ನಾಯಕನಾದ ಬಳಿಕ ಕಾಂಗ್ರೆಸ್‌ ಪಕ್ಷ ಸತತವಾಗಿ ಸೋಲು ಕಾಣುತ್ತಲೇ ಇದೆ. ಈ ಬಗ್ಗೆ ನೀವು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ತಿರುಚಿದ ಮಾದ್ಯಮ ಕಾರ್ಯಕ್ರಮಗಳ ಮೂಲಕ ನೀವು ಜನರ ವಿಶ್ವಾಸ ಪಡೆಯುವುದು ಸಾಧ್ಯವಿಲ್ಲ’ ಎಂದು ರಾಹುಲ್‌ಗೆ ಅಮಿತ್‌ ಶಾ ಕುಟುಕಿದರು.

2029ರಲ್ಲೂ ಸೋಲು:

‘ದೇಶದ ಜನರು ಬಿಜೆಪಿ, ಎನ್‌ಡಿಎ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿದ್ದಾರೆ’ ಎಂಬ ಭರವಸೆ ವ್ಯಕ್ತಪಡಿಸಿದ ಗೃಹ ಸಚಿವರು, ‘2029ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲೂ ನಿರಂತರ 4ನೇ ಬಾರಿ ಹೀನಾಯವಾಗಿ ಪರಾಜಿತರಾಗಲು ತಯಾರಾಗಿರಿ’ ಎಂದು ಸವಾಲು ಹಾಕಿದರು.