ಅಸ್ಸಾಂನಲ್ಲಿ ರಾಹುಲ್‌-ಬಿಜೆಪಿ ಸಂಘರ್ಷ

| Published : Jan 24 2024, 02:02 AM IST / Updated: Jan 24 2024, 08:53 AM IST

Rahul Gandhi

ಸಾರಾಂಶ

ಅಸ್ಸಾಂನಲ್ಲಿ ಭಾರತ್‌ ಜೋಡೋ ನ್ಯಾಯ ಯಾತ್ರೆ ನಡೆಸುತ್ತಿರುವ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿಗೆ ಮಂಗಳವಾರ ಮೇಘಾಲಯ ಖಾಸಗಿ ವಿವಿಯೊಂದರ ವಿದ್ಯಾರ್ಥಿಗಳ ಸಂವಾದಕ್ಕೆ ತಡೆ ಒಡ್ಡಲಾಗಿದೆ ಹಾಗೂ ಅವರ ಗುವಾಹಟಿ ಪ್ರವೇಶಕ್ಕೂ ನಿರಾಕರಿಸಲಾಗಿದೆ.

ಪಿಟಿಐ ಗುವಾಹಟಿ

ಅಸ್ಸಾಂನಲ್ಲಿ ಭಾರತ್‌ ಜೋಡೋ ನ್ಯಾಯ ಯಾತ್ರೆ ನಡೆಸುತ್ತಿರುವ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿಗೆ ಮಂಗಳವಾರ ಮೇಘಾಲಯ ಖಾಸಗಿ ವಿವಿಯೊಂದರ ವಿದ್ಯಾರ್ಥಿಗಳ ಸಂವಾದಕ್ಕೆ ತಡೆ ಒಡ್ಡಲಾಗಿದೆ ಹಾಗೂ ಅವರ ಗುವಾಹಟಿ ಪ್ರವೇಶಕ್ಕೂ ನಿರಾಕರಿಸಲಾಗಿದೆ. 

ಇದೇ ವೇಳೆ, ಕಾರ್ಯಕರ್ತರನ್ನು ಹಿಂಸೆಗೆ ಪ್ರಚೋದಿಸಿದ ಆರೋಪ ಹೊರಿಸಿ ರಾಹುಲ್‌ ವಿರುದ್ಧ ಕೇಸು ದಾಖಲಿಸಲು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಅವರು ಪೊಲೀಸರಿಗೆ ಸೂಚಿಸಿದ್ದಾರೆ.

ಇದರ ವಿರುದ್ಧ ಕಿಡಿಕಾರಿರುವ ರಾಹುಲ್‌, ‘ಸಂವಾದಕ್ಕೆ ಅನುಮತಿ ನಿರಾಕರಣೆ ಹಿಂದೆ ಕೇಂದ್ರ ಗೃಹ ಸಚಿವ (ಅಮಿತ್‌ ಶಾ) ಕೈವಾಡವಿದೆ. ಇನ್ನು ಪೊಲೀಸರು ನಮ್ಮ ವಿರುದ್ಧ ಲಾಠಿ ಬೀಸಲಿ. ಆದರೆ ನಮ್ಮ ಹೋರಾಟ ನಿಲ್ಲಲ್ಲ’ ಎಂದಿದ್ದಾರೆ.

ಆಗಿದ್ದೇನು?
ರಾಹುಲ್‌ ಮೇಘಾಲಯದ ರಿ-ಭೋಯಿ ಜಿಲ್ಲೆಯ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿ ವಿದ್ಯಾರ್ಥಿಗಳು ಹಾಗೂ ನಾಗರಿಕ ಸಮಾಜದ ಗಣ್ಯರ ಜತೆ ಮಂಗಳವಾರ ಸಂವಾದ ನಡೆಸಬೇಕಿತ್ತು. 

ಆದರೆ ಇದಕ್ಕೆ ವಿವಿ ಅನುಮತಿ ನಿರಾಕರಿಸಿದೆ.ಇನ್ನು ಗುವಾಹಟಿ ಪ್ರವೇಶಕ್ಕೂ ರಾಹುಲ್‌ ಯಾತ್ರೆಗೆ ಅವಕಾಶ ನಿರಾಕರಿಸಲಾಗಿದೆ ಹಾಗೂ ಗುವಾಹಟಿ ಗಡಿಯ ಹೊರಗೆ ಬ್ಯಾರಿಕೇಡ್‌ ಹಾಕಲಾಗಿದೆ. ಇದರಿಂದ ಸಿಟ್ಟಿಗೆದ್ದ ಕಾಂಗ್ರೆಸ್‌ ಕಾರ್ಯಕರ್ತರು ಬ್ಯಾರಿಕೇಡ್‌ ಪುಡಿಗಟ್ಟಿದ್ದಾರೆ.

ಕೇಸಿಗೆ ಸಿಎಂ ಸೂಚನೆ: ಇನ್ನು ಕಾಂಗ್ರೆಸ್‌ ಕಾರ್ಯಕರ್ತರಿಗೆ ಬ್ಯಾರಿಕೇಡ್‌ ಮುರಿಯುವಂತೆ ಪ್ರಚೋಸಿದಿದ್ದೇ ರಾಹುಲ್‌ ಗಾಂಧಿ. ಹೀಗಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಪೊಲೀಸರಿಗೆ ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ ಸೂಚಿಸಿದ್ದಾರೆ. 

ಅಲ್ಲದೆ ರಾಹುಲ್‌ ನಕ್ಸಲೀಯರ ರೀತಿ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್‌, ‘ನಮ್ಮ ಕಾರ್ಯಕರ್ತರು ಬ್ಯಾರಿಕೇಡ್‌ ಹಾಳು ಮಾಡಬಹುದೇ ವಿನಾ, ಕಾನೂನು ಸುವ್ಯವಸ್ಥೆ ಹಾಳು ಮಾಡಲ್ಲ’ ಎಂದು ತಿರುಗೇಟು ನೀಡಿದ್ದಾರೆ.

ಪ್ರಾಣಪ್ರತಿಷ್ಠೆ ಬಿಜೆಪಿಯ ರಾಜಕೀಯ ಯೋಜನೆ: ರಾಹುಲ್ ಗಾಂಧಿ ಟೀಕೆ
ಡೊಂಡೋಮ: ಅಯೋಧ್ಯೆ ರಾಮಮಂದಿರದಲ್ಲಿ ನಡೆದ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಬಿಜೆಪಿ ರಾಜಕೀಯಮಯವಾಗಿಸಿದೆ. ಹಾಗಾಗಿ ಜನರ ಮನಸ್ಸಿನಲ್ಲಿ ರಾಮಮಂದಿರ ಉದ್ಘಾಟನೆ ವಿಷಯ ಯಾವುದೇ ಪ್ರಭಾವ ಬೀರಿಲ್ಲ ಎಂದು ರಾಹುಲ್‌ ಗಾಂಧಿ ತಿಳಿಸಿದರು. 

ಅಸ್ಸಾಂನಲ್ಲಿ ನಡೆಯುತ್ತಿರುವ ಭಾರತ್‌ ಜೊಡೊ ನ್ಯಾಯ ಯಾತ್ರೆಯ ವೇಳೆ ಮಾತನಾಡುತ್ತಾ, ‘ಪ್ರಾಣಪ್ರತಿಷ್ಠಾಪನೆಯನ್ನು ಬಿಜೆಪಿ ರಾಜಕೀಯಗೊಳಿಸಿದೆ. ಅದು ದೇಶಾದ್ಯಂತ ಅಲೆಯನ್ನೇನೂ ಎಬ್ಬಿಸಿಲ್ಲ ಎಂದರು.