ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದ ಬಂಧಿತ ಬಾಂಗ್ಲಾದ ನೀಲಿ ಚಿತ್ರ ನಟಿಗೂ ನನಗೂ ನಂಟಿಲ್ಲ : ರಾಜ್‌ ಕುಂದ್ರಾ

| Published : Sep 30 2024, 01:24 AM IST / Updated: Sep 30 2024, 05:45 AM IST

ಸಾರಾಂಶ

  ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದಕ್ಕಾಗಿ ಬಂಧನಕ್ಕೊಳಗಾಗಿರುವ ಬಾಂಗ್ಲಾದೇಶದ ನೀಲಿ ಚಿತ್ರಗಳ ತಾರೆ ರಿಯಾ ಬಾರ್ಡೆಗೂ ನನಗೂ ಯಾವುದೇ ನಂಟಿಲ್ಲವೆಂದು ಉದ್ಯಮಿ ಹಾಗೂ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರಾ ತಿಳಿಸಿದ್ದಾರೆ.

ಮುಂಬೈ: ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದಕ್ಕಾಗಿ ಬಂಧನಕ್ಕೊಳಗಾಗಿರುವ ಬಾಂಗ್ಲಾದೇಶದ ನೀಲಿ ಚಿತ್ರಗಳ ತಾರೆ ರಿಯಾ ಬಾರ್ಡೆಗೂ ನನಗೂ ಯಾವುದೇ ನಂಟಿಲ್ಲವೆಂದು ಉದ್ಯಮಿ ಹಾಗೂ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರಾ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಕುಂದ್ರಾ, ‘ನನ್ನ ಕಂಪನಿಯೊಂದಿಗೆ ಸಂಬಂಧ ಹೊಂದಿದ್ದೇನೆ ಎಂದು ರಿಯಾ ಹೇಳುತ್ತಿದ್ದಾರೆ. ಇದು ಸಂಪೂರ್ಣ ಸುಳ್ಳು. ನಾನು ಇದುವರೆಗೂ ಅವರನ್ನು ಭೇಟಿಯೇ ಮಾಡಿಲ್ಲ. ಅವರ ಜತೆಗೆ ಯಾವುದೇ ಕಂಪನಿಯನ್ನು ಆರಂಭಿಸಿಲ್ಲ. ಅವರು ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.

ಪ್ರವಾಹ, ಭೂಕುಸಿತಕ್ಕೆ ನೇಪಾಳ ತತ್ತರ: 148 ಜನ ಸಾವು, 70 ನಾಪತ್ತೆ ನಾಗರಿಕರ ಸಾವು

ಕಾಠ್ಮಂಡು: ನೇಪಾಳದಲ್ಲಿ ಕಳೆದ ಶುಕ್ರವಾರದಿಂದ ಭಾರೀ ಮಳೆಯಾಗುತ್ತಿದ್ದು ಹಲವೆಡೆ ಪ್ರವಾಹ ಮತ್ತು ಭೂಕುಸಿತ ಸಂಭವಿಸಿದೆ. ಪರಿಣಾಮ ನೇಪಾಳದಲ್ಲಿ ಇದುವರೆಗೆ 125 ಮಂದಿ ಸಾವನ್ನಪ್ಪಿದ್ದು, 70ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ವಿಪತ್ತಿನ ಹಿನ್ನೆಲೆ ಮೂರು ದಿನ ಶಾಲಾ- ಕಾಲೇಜುಗಳನ್ನು ಬಂದ್‌ ಮಾಡಲಾಗಿದೆ. 

ಕಾಠ್ಮಂಡು ಸಮೀಪದ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿದ್ದು, ಮಣ್ಣಿನಡಿ ಸಿಲುಕಿದ್ದ 2 ಬಸ್‌ಗಳಿಂದ ರಕ್ಷಣಾ ಸಿಬ್ಬಂದಿಗಳು 14 ಶವವನ್ನು ಹೊರ ತೆಗೆದಿದ್ದಾರೆ. ಇನ್ನೂ ಕೆಲ ವಾಹನಗಳು ಭೂಕುಸಿತ ಸಂಭವಿಸಿದ ಸ್ಥಳದಲ್ಲಿ ಸಿಲುಕಿರುವ ಶಂಕೆಯಿದೆ. ದೇಶದ ಹಲವು ಕಡೆಗಳಲ್ಲಿ ಮಳೆಯಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ, ರಾತ್ರಿ ಹೊತ್ತು ಸಂಚಾರ ಹಾಗೂ ಕಾರುಗಳಲ್ಲಿ ಪ್ರಯಾಣಿಸದಂತೆ ಸರ್ಕಾರ ಜನರಿಗೆ ಸೂಚನೆ ನೀಡಿದೆ.

ಛತ್ತೀಸಗಢದಲ್ಲಿ ಐಇಡಿ ಸ್ಫೋಟ: ಐವರು ಭದ್ರತಾ ಸಿಬ್ಬಂದಿಗಳಿಗೆ ಗಾಯ

ಬಿಜಾಪುರ: ಛತ್ತೀಸಗಢದ ಬಿಜಾಪುರದಲ್ಲಿ ನಕ್ಸಲರು ಅಳವಡಿಸಿದ್ದ ಸುಧಾರಿತ ಸ್ಫೋಟಕ (ಐಇಡಿ)ದ ಪತ್ತೆ ಕಾರ್ಯಾಚರಣೆ ವೇಳೆ ಐಇಡಿ ಸ್ಫೋಟಗೊಂಡು ಐವರು ಭದ್ರತಾ ಸಿಬ್ಬಂದಿಗಳು ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ. 

ಇಲ್ಲಿನ ತಾರೆಮ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸಿಆರ್‌ಪಿಎಫ್‌ ಸಿಬ್ಬಂದಿಗಳು ನಕ್ಸಲರು ಅಳವಡಿಸಿದ್ದ ಐಇಡಿ ತಂತಿ ಪತ್ತೆಯಾದ ಬೆನ್ನಲ್ಲೇ ಐಇಡಿಯನ್ನು ಪತ್ತೆ ಹಚ್ಚಿ, ವಿಲೇವಾರಿ ಮಾಡುವ ಸಂದರ್ಭದಲ್ಲಿ ಸ್ಫೋಟವಾಗಿದೆ. ಘಟನೆಯಲ್ಲಿ 5 ಭದ್ರತಾ ಸಿಬ್ಬಂದಿಗಳಿಗೆ ಕಣ್ಣು, ಮುಖಕ್ಕೆ ಸಣ್ಣಪುಟ್ಟ ಗಾಯಗಳಾಗಿವೆ.

ಲಿಂಗಪರಿವರ್ತನೆ ವೇಳೆ ತೃತೀಯ ಲಿಂಗಿಗಳಿಗೆ ಮನೋವೈದ್ಯರ ಪ್ರಮಾಣಪತ್ರ ಕಡ್ಡಾಯ

ನವದೆಹಲಿ: ಲಿಂಗ ಬದಲಾವಣೆಗೆ ಇಚ್ಛಿಸುವ ತೃತೀಯಲಿಂಗಿಗಳು ವ್ಯಕ್ತಿಗಳು, ಶಸ್ತ್ರಚಿಕಿತ್ಸೆಗೂ ಮುನ್ನ ಮನೋವೈದ್ಯರಿಂದ ಪ್ರಮಾಣಪತ್ರ ಪಡೆಯಬೇಕು ಎಂದು ಕೇಂದ್ರ ಸರ್ಕಾರ ಪ್ರಮಾಣಿತ ಕಾರ್ಯವಿಧಾನ ಬಿಡುಗಡೆ ಮಾಡಿದೆ. ತೃತೀಯಲಿಂಗಿಗಳು ಎಂಡೋ ಕ್ರೈನಾಲಜಿ ಚಿಕಿತ್ಸೆಯ ಮೊದಲು, ಒಬ್ಬ ಮನೋ ವೈದ್ಯರಿಂದ ಪ್ರಮಾಣಪತ್ರದ ಪಡೆಯಬೇಕು.

 ಲಿಂಗ ದೃಢೀಕರಣ ಶಸ್ತ್ರಚಿಕಿತ್ಸೆಯ ಮೊದಲು 2 ಪ್ರಮಾಣಪತ್ರಗಳನ್ನು ಪಡೆಯಬೇಕು. ಒಂದು ಮನೋ ವೈದ್ಯರಿಂದ ಮತ್ತು ಒಂದು ಕ್ಲಿನಿಕಲ್ ಮನಶ್ಶಾಸ್ತ್ರಜ್ಞರಿಂದ/ಮನೋ ವೈದ್ಯರಿಂದ. ಅದರ ಹೊರತಾಗಿ, ಮಾನಸಿಕ ಆರೋಗ್ಯ ವೃತ್ತಿಪರರು ತೃತೀಯಲಿಂಗಿಗಳ ಮಾನಸಿಕ ಅಸ್ವಾಸ್ಥ್ಯ ಹಾಗೂ ಪೂರ್ವರೋಗಗಳ ಬಗ್ಗೆ ಅಧ್ಯಯನ ನಡೆಸಬೇಕು’ ಎಂದು ತಿಳಿಸಲಾಗಿದೆ.