ಸಾರಾಂಶ
ಆನ್‌ಲೈನ್ ತಾಣಗಳು ಡೀಪ್‌ಫೇಕ್ ಕುರಿತು ರೂಪಿಸಿದ್ದ ಸಲಹಾವಳಿ ಪಾಲಿಸದ ಕಾರಣ ಕೇಂದ್ರ ಸರ್ಕಾರ ಹೊಸ ಕ್ರಮ ಕೈಗೊಳ್ಳಲು ಯೋಹಿಸಿದೆ. ಹೀಗಾಗಿ ಸಲಹಾವಳಿ ಬದಲು ನಿಯಮ ರೂಪಿಸುವ ತಂತ್ರಕ್ಕೆ ಮೊರೆ ಹೋಗಿದೆ.
ನವದೆಹಲಿ: ಡೀಪ್‌ಫೇಕ್ ತಂತ್ರಜ್ಞಾನ ಬಳಸಿ ನಕಲಿ ಫೋಟೋ ಮತ್ತು ವಿಡಿಯೋ ರೂಪಿಸಿರುವುದರ ಕಠಿಣ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಜಾಲತಾಣಗಳಿಗೆ ನೀಡಲಾಗಿದ್ದ ಸಲಹಾವಳಿಗಳ ಕುರಿತು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಹೀಗಾಗಿ ಸಲಹಾವಳಿಗಳಿಗೆ ಕಾನೂನು ರೂಪ ನೀಡಿ ಇನ್ನೊಂದು ವಾರದಲ್ಲಿ ಕಠಿಣ ನಿಯಮ ಜಾರಿಗೊಳಿಸಲಾಗುವುದು ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.ಸೋಮವಾರವಷ್ಟೇ ಖ್ಯಾತ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಮತ್ತು ಅವರ ಪುತ್ರಿ ಸಾರಾ ಒಳಗೊಂಡ ಡೀಪ್‌ಫೇಕ್ ವಿಡಿಯೋವೊಂದು ವೈರಲ್ ಆಗಿತ್ತು.ಅದರ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಸಚಿವ ರಾಜೀವ್, ‘ಡೀಪ್‌ಫೇಕ್ ವಿಡಿಯೋಗಳ ಕುರಿತು ನಮ್ಮ ಸಲಹಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಎಂದು ಈ ಹಿಂದೆಯೇ ಆನ್‌ಲೈನ್ ತಾಣಗಳು ಮತ್ತು ಸಾಮಾಜಿಕ ಜಾಲತಾಣಗಳಿಗೆ ಸೂಚಿಸಿದ್ದೆವು.
ಆದರೆ ಸಲಹಾವಳಿ ಪಾಲನೆ ಸಂಬಂಧ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.ಹೀಗಾಗಿ ಸಲಹಾವಳಿ ಬಿಡುಗಡೆ ವೇಳೆಯೇ ನಾವು ಸ್ಪಷ್ಟಪಡಿಸಿದ್ದಂತೆ, ಇದೀಗ ಅದನ್ನೇ ಮಾಹಿತಿ ತಂತ್ರಜ್ಞಾನ ಕಾಯ್ದೆ ರೂಪದಲ್ಲಿ ಇನ್ನೊಂದು ವಾರದಲ್ಲಿ ಬಿಡುಗಡೆ ಮಾಡಲಿದ್ದೇವೆ’ ಎಂದು ತಿಳಿಸಿದ್ದಾರೆ.