ರಾಮಂದಿರ: 2ನೇ ದಿನವೂ 5 ಲಕ್ಷ ಮಂದಿಯಿಂದ ದರ್ಶನ

| Published : Jan 25 2024, 02:04 AM IST / Updated: Jan 25 2024, 05:18 AM IST

ಸಾರಾಂಶ

ರಾಮಮಂದಿರದಲ್ಲಿ ಭಕ್ತರಿಗಾಗಿ ಮಧ್ಯಾಹ್ನದ ವಿರಾಮ 1 ತಾಸಿಗೆ ಇಳಿಕೆ ಮಾಡಲಾಗಿದೆ. ಎರಡೇ ದಿನದಲ್ಲಿ 10 ಲಕ್ಷ ಜನರಿಂದ ಅಯೋಧ್ಯೆ ದೇಗುಲ ಭೇಟಿಯಾಗಿದೆ.

ಅಯೋಧ್ಯೆ: ಸೋಮವಾರ ಪ್ರತಿಷ್ಠಾಪಿಸಲಾದ ಅಯೋಧ್ಯೆ ಶ್ರೀರಾಮನ ವಿಗ್ರಹವನ್ನು ಸಾರ್ವಜನಿಕ ದರ್ಶನಕ್ಕೆ ಮುಕ್ತಗೊಳಿಸಿದ 2ನೇ ದಿನವೂ 5 ಲಕ್ಷ ಮಂದಿ ಬಾಲರಾಮನ ದರ್ಶನ ಪಡೆದಿದ್ದಾರೆ. 

ಮೊದಲ ದಿನ ಉಂಟಾಗಿದ್ದ ನೂಕುನುಗ್ಗಲು ಸಮಸ್ಯೆಯನ್ನು ಪರಿಹರಿಸಿರುವ ಸ್ಥಳೀಯ ಆಡಳಿತ ಉತ್ತಮ ಸರತಿ ಸಾಲು ವ್ಯವಸ್ಥೆಯನ್ನು ರೂಪಿಸಿದ್ದಾರೆ. 

2ನೇ ಮಧ್ಯಾಹ್ನದ ವೇಳೆಗೆ 3 ಲಕ್ಷ ಮಂದಿ ರಾಮನ ದರ್ಶನ ಪಡೆದಿದ್ದು, ರಾತ್ರಿಯ ವೇಳೆಗೆ ಅಂದಾಜು 5 ಲಕ್ಷ ಜನ ರಾಮನ ದರ್ಶನ ಪಡೆಯಲು ಸಫಲರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಸೋಮವಾರ ಪ್ರಾಣಪ್ರತಿಷ್ಠಾಪನೆ ಇದ್ದ ಕಾರಣ ಮಂದಿರಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿತ್ತು. ಮಂಗಳವಾರದಿಂದ ಭಕ್ತರಿಗೆ ರಾಮಮಂದಿರವನ್ನು ತೆರೆಯಲಾಗಿದೆ.

ಮಧ್ಯಾಹ್ನದ ವಿರಾಮ ಕಡಿತ: ರಾಮಮಂದಿರದಲ್ಲಿ ನೈವೇದ್ಯದ ಬಳಿಕ ಮಧ್ಯಾಹ್ನ 2 ಗಂಟೆಗಳ ಬಿಡುವನ್ನು ಘೋಷಿಸಲಾಗಿತ್ತು. ಆದರೆ ದೇವಸ್ಥಾನದ ಬಳಿ ನೆರೆದಿರುವ ಭಕ್ತರಿಗೆ ದರ್ಶನ ಒದಗಿಸುವ ನಿಟ್ಟಿನಲ್ಲಿ ಈ ವಿರಾಮದ ಸಮಯವನ್ನು 1 ಗಂಟೆಗೆ ಕಡಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಕಲ ವ್ಯವಸ್ಥೆಗೆ ಯೋಗಿ ಕರೆ:ರಾಮನ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಯಾವುದೇ ಸಮಸ್ಯೆಯಾಗದಂತೆ ಎಲ್ಲಾ ವ್ಯವಸ್ಥೆಗಳನ್ನು ಕೈಗೊಳ್ಳುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೂಚಿಸಿದ್ದಾರೆ. 

ಮುಖ್ಯವಾಗಿ ದೇವಸ್ಥಾನದ ಆವರಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಅವರು ಸೂಚನೆ ನೀಡಿದ್ದಾರೆ.