ಸಾರಾಂಶ
ಅಯೋಧ್ಯೆ: ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಯಶಸ್ವಿಯಾಗಿ ಹಾಗೂ ಅದ್ಧೂರಿಯಾಗಿ ಸಂಪನ್ನಗೊಂಡ ಬೆನ್ನಲ್ಲೇ ಮಂಗಳವಾರದಿಂದ ಮಂದಿರ ದರ್ಶನಕ್ಕೆ ಶ್ರೀಸಾಮಾನ್ಯ ಭಕ್ತಾದಿಗಳಿಗೆ ಅವಕಾಶ ಸಿಗಲಿದೆ.
ಹೀಗಾಗಿ ಮೊದಲ ದಿನವೇ ಭಾರಿ ಸಂಖ್ಯೆಯಲ್ಲಿ ಜನರು ಬಾಲರಾಮನನ್ನು ಕಣ್ತುಂಬಿಕೊಳ್ಳಲು ಮುಗಿಬೀಳುವ ನಿರೀಕ್ಷೆ ಇದೆ.
ಅಯೋಧ್ಯೆ ರಾಮಮಂದಿರ ಬೆಳಗ್ಗೆ 7ರಿಂದ 11.30 ಹಾಗೂ ಮಧ್ಯಾಹ್ನ 2ರಿಂದ ಸಂಜೆ 7ರವರೆಗೆ ತೆರೆದಿರುತ್ತದೆ. ಬೆಳಗ್ಗೆ 6.30ಕ್ಕೆ ಶೃಂಗಾರ ಆರತಿ, ರಾತ್ರಿ 7.30ಕ್ಕೆ ಸಂಧ್ಯಾ ಆರತಿ ನಡೆಯುತ್ತದೆ.
ಈ ಆರತಿಯನ್ನು ನೋಡಲು ಬಯಸುವವರು ಪಾಸ್‌ಗಳನ್ನು ಪಡೆಯಬೇಕು. ಆನ್‌ಲೈನ್ ಹಾಗೂ ಆಫ್‌ಲೈನ್ ಎರಡೂ ವಿಧಾನದಲ್ಲಿ ಪಾಸ್ ಲಭ್ಯ ಇರುತ್ತದೆ.
ಶ್ರೀಕ್ಷೇತ್ರದ ವೆಬ್‌ಸೈಟ್ ಅಥವಾ ಗುರುತಿನ ಪುರಾವೆಯೊಂದಿಗೆ ಕ್ಯಾಂಪ್ ಆಫೀಸ್ ಅನ್ನು ಸಂಪರ್ಕಿಸಬಹುದು.
ಹೋಗೋದು ಹೇಗೆ?
ಅಯೋಧ್ಯೆಗೆ ವಿಮಾನ, ರೈಲುಗಳಲ್ಲಿ ಬಂದರೆ ಎಲ್ಲ ಬಗೆಯ ವಾಹನಗಳೂ ಲಭ್ಯ ಇರುತ್ತವೆ. ಟ್ಯಾಕ್ಸಿ, ಆಟೋ ಸಿಗಲಿದೆ. ರೈಲು ನಿಲ್ದಾಣದಿಂದ ಸೈಕಲ್ ರಿಕ್ಷಾ ಸೇವೆಯೂ ಇದೆ.
ಭಕ್ತಾದಿಗಳು ತಮ್ಮ ಅನುಕೂಲಕ್ಕೆ ತಕ್ಕ ಸಾರಿಗೆ ವಿಧಾನವನ್ನು ಬಳಸಿಕೊಂಡು, ಸರಯೂ ನದಿ ದಂಡೆಯಲ್ಲಿ ನಿರ್ಮಾಣವಾಗಿರುವ ರಾಮಮಂದಿರ ಹಾಗೂ ಬಾಲರಾಮನನ್ನು ಕಣ್ತುಂಬಿಕೊಳ್ಳಬಹುದು.