ಬಗೆಬಗೆ ಆಭರಣ, ಹಳದಿ ಪಂಚೆಯಲ್ಲಿ ಮಿಂಚಿದ ರಾಮ

| Published : Jan 23 2024, 01:46 AM IST / Updated: Jan 23 2024, 07:31 AM IST

PM Modi
ಬಗೆಬಗೆ ಆಭರಣ, ಹಳದಿ ಪಂಚೆಯಲ್ಲಿ ಮಿಂಚಿದ ರಾಮ
Share this Article
  • FB
  • TW
  • Linkdin
  • Email

ಸಾರಾಂಶ

ಅಯೋಧ್ಯೆಯಲ್ಲಿ ವಿರಾಜಮಾನನಾದ ಶ್ರೀರಾಮನ ಚಿನ್ನಾಭರಣಗಳನ್ನು ಲಖನೌ ಜ್ಯುವೆಲ್ಲರಿಯಿಂದ ತಯಾರಿಸಲಾಗಿದೆ. ರಾಮನ ಉಡುಪು ದಿಲ್ಲಿ ವಿನ್ಯಾಸಕನಿಂದ ನಿರ್ಮಿತವಾಗಿದೆ.

ಅಯೋಧ್ಯೆ: ಹಣೆಗೆ ಬೆಳ್ಳಿ ಹಾಗೂ ಕೆಂಪು ತಿಲಕ. ಕೈಯಲ್ಲಿ ಚಿನ್ನದ ಬಿಲ್ಲು ಹಾಗೂ ಬಾಣ. ಇಡೀ ದೇಹವನ್ನು ಅಲಂಕರಿಸಿದ ಬಗೆಬಗೆಯ ಬಂಗಾರದ ಆಭರಣ. ಅದರ ಮೇಲೆ ಹೂವುಗಳ ಅಲಂಕಾರ. ಹಳದಿ ಧೋತಿ. ಅಸಂಖ್ಯಾತ ಜನರು ಬಹುನಿರೀಕ್ಷೆಯಿಂದ ಕಾಯುತ್ತಿದ್ದ ಬಾಲರಾಮನ ಮೊದಲ ದೃಶ್ಯ ಪ್ರಾಣ ಪ್ರತಿಷ್ಠಾಪನೆಯಾದ ಬಳಿಕ ಕಂಡದ್ದು ಹೀಗೆ.

ರಾಮನ ಆಭರಣಗಳನ್ನು ಲಖನೌನ ಅಂಕುರ್‌ ಆನಂದ್‌ ಸಂಸ್ಥೆ ಹಾಗೂ ಲಖನೌನ ಹರ್‌ಸಹಾಯಮಲ್‌ ಶ್ಯಾಮಲಾಲ್‌ ಜ್ಯುವೆಲ್ಲರ್ಸ್‌ ಸಿದ್ಧಪಡಿಸಿವೆ. ಯತೀಂದ್ರ ಮಿಶ್ರಾ ನಡೆಸಿದ ಅಧ್ಯಯನದ ಪ್ರಕಾರ ಆಭರಣ ಸಿದ್ಧಪಡಿಸಲಾಗಿದೆ.

ಇನ್ನು ರಾಮನ ಬನಾರಸಿ ಹಳದಿ ಧೋತಿ, ಕೆಂಪು ಪಟಗ/ಅಂಗವಸ್ತ್ರವನ್ನು ದಿಲ್ಲಿಯ ಉಡುಪು ವಿನ್ಯಾಸಕಾರ ಮನೀಶ್‌ ತ್ರಿಪಾಠಿ ಸಿದ್ಧಪಡಿಸಿ ನೀಡಿದ್ದಾರೆ. ಗಮನ ಸೆಳೆದ ರಾಮ:

ದಕ್ಷಿಣ ಭಾರತದ ಶ್ರೀರಾಮ ಐತಿಹ್ಯ ಕ್ಷೇತ್ರಗಳಲ್ಲಿ ಕಳೆದ ಹಲವು ದಿನಗಳಿಂದ ಸುತ್ತಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಬೆಳಗ್ಗೆ ಅಯೋಧ್ಯೆಯಲ್ಲಿ ಇಳಿದು ಮಧ್ಯಾಹ್ನ 12.05ರ ಸುಮಾರಿಗೆ ದೇವಸ್ಥಾನದ ಪ್ರಾಂಗಣ ಪ್ರವೇಶಿಸಿದರು. 

ರೇಷ್ಮೆ ವಸ್ತ್ರ ಧರಿಸಿದ್ದ ಅವರು ಶ್ರೀರಾಮನಿಗೆ ಛತ್ರ ಹಾಗೂ ವಸ್ತ್ರವನ್ನು ಕೈಯಲ್ಲಿ ಹಿಡಿಯುತ್ತಾ ದೇಗುಲದೊಳಕ್ಕೆ ಕಾಲಿಟ್ಟರು.ಮುಖ್ಯ ಯಜಮಾನತ್ವ ವಹಿಸಿದ್ದ ಕಾರಣ ಮೋದಿ ಅವರಿಂದ ಪುರೋಹಿತರು ಗರ್ಭಗುಡಿಯ ಹೊರಭಾಗದಲ್ಲಿ ಧಾರ್ಮಿಕ ವಿಧಿ-ವಿಧಾನ ನೆರವೇರಿಸಿ ಪ್ರಾಣ ಪ್ರತಿಷ್ಠಾಪನೆಗೆ ಸಂಕಲ್ಪ ಮಾಡಿಸಿದರು. 

ಈ ವೇಳೆ ಅವರಿಗೆ ಆರೆಸ್ಸೆಸ್‌ ಮುಖ್ಯಸ್ಥ ಮೋಹನ ಭಾಗವತ್‌ ಅವರು ಸಾಥ್‌ ನೀಡಿದರು. ಇದಾದ ತರವಾಯ ಮೋದಿ ಅವರನ್ನು ಪುರೋಹಿತರು ಗರ್ಭಗುಡಿಗೆ ಕರೆದೊಯ್ದರು.

 ಅಲ್ಲಿ ಸುದೀರ್ಘ ಧಾರ್ಮಿಕ ಕಾರ್ಯಕ್ರಮ ನಡೆಯಿತು.ಪೂಜೆ ಮುಕ್ತಾಯ ಘಟ್ಟ ತಲುಪಿದಾಗ ಕ್ಯಾಮೆರಾ ನಿಧಾನವಾಗಿ ಮೇಲಕ್ಕೆ ಹೋಯಿತು. 

ಆಗ ಆಭರಣಗಳಿಂದ ಕಂಗೊಳಿಸುತ್ತಿರುವ ಶ್ರೀರಾಮ. ಟೀವಿಗಳಲ್ಲಿ ಈ ದೃಶ್ಯವನ್ನು ನೋಡಿದ ರಾಮಭಕ್ತರು ಮಂತ್ರಮುಗ್ಧಗೊಂಡರು. ಸ್ವಸ್ಥಾನದಲ್ಲಿ ರಾಮನನ್ನು ಕಂಡು ಪುಳಕಿತಗೊಂಡರು.

ಬಳಿಕ ಒಂದಷ್ಟು ಸಮಯ ಶ್ರೀರಾಮನನ್ನು ಮೋದಿ ಅವರು ಪೂಜಿಸಿದರು. ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಈ ವೇಳೆ ಪ್ರಧಾನಿ ಅವರ ಪಕ್ಕದಲ್ಲೇ ಇದ್ದದ್ದು ಗಮನಸೆಳೆಯಿತು.

ಇದು ಅದ್ಭುತ ದಿನ: ಸಚಿವ ರಾಜೀವ್‌ ಹರ್ಷ
ರಾಮಮಂದಿರ ಪ್ರಾಣಪ್ರತಿಷ್ಠಾಪನೆಯ ಈ ದಿನವನ್ನು ಅದ್ಭುತ ದಿನ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ಬಣ್ಣಿಸಿದ್ದಾರೆ.

ಟ್ವೀಟ್‌ ಮಾಡಿರುವ ಅವರು, ‘ಭಾರತದ ನಾಗರಿಕ ಇತಿಹಾಸದಲ್ಲಿಯೇ, ಈ ದಿನ ಪ್ರತಿಯೊಬ್ಬ ಭಾರತೀಯರಿಗೂ ಅತ್ಯಂತ ವಿಶೇಷವಾದ ದಿನ. 

ಕೋಟ್ಯಂತರ ಭಾರತೀಯರೊಂದಿಗೆ ಈ ಪ್ರಾಣಪ್ರತಿಷ್ಠಾಪನೆಯನ್ನು ವೀಕ್ಷಿಸುತ್ತಿರುವುದು ನನ್ನ ಅದೃಷ್ಟ ಹಾಗೂ ಪೂರ್ವ ಜನ್ಮದ ಪುಣ್ಯ ಎಂದು ಭಾವಿಸುತ್ತೇನೆ’ ಎಂದಿದ್ದಾರೆ.‘

ಇಂತಹ ಅದ್ಭುತ ದಿನವನ್ನು ಸಾಧ್ಯವಾಗಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ಅಸಾಧಾರಣ ಹಾಗೂ ಸ್ಫೂರ್ತಿದಾಯಕ ಭಕ್ತಿ ಮತ್ತು ಶ್ರದ್ಧೆಯನ್ನು ನಾವು ನೋಡುತ್ತಿರುವುದು ನಮ್ಮ ಸೌಭಾಗ್ಯ. 

ಸದಾಚಾರ ಮತ್ತು ನೈತಿಕತೆಯ ಪ್ರತಿಪಾದಕ ಶ್ರೀರಾಮನ ಮಾರ್ಗದರ್ಶನ ಸದಾ ನಮ್ಮ ಪ್ರಧಾನಮಂತ್ರಿಗಳ ಮೇಲಿರಲಿ ಎಂದು ಆಶಿಸುತ್ತೇನೆ’ ಎಂದಿದ್ದಾರೆ.