’ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ಮುಕ್ತಾಯ 3 ತಿಂಗಳು ವಿಳಂಬ : ದೇಗುಲ ನಿರ್ಮಾಣ ಸಮಿತಿ

| Published : Nov 10 2024, 01:38 AM IST / Updated: Nov 10 2024, 05:04 AM IST

ಸಾರಾಂಶ

’ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಕಿ ಉಳಿದಿರುವ ಕೆಲಸಗಳು 2025ರ ಜೂನ್‌ನಲ್ಲಿ ಮುಕ್ತಾಯವಾಗಬೇಕಿತ್ತು.

ಅಯೋಧ್ಯೆ: ’ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಕಿ ಉಳಿದಿರುವ ಕೆಲಸಗಳು 2025ರ ಜೂನ್‌ನಲ್ಲಿ ಮುಕ್ತಾಯವಾಗಬೇಕಿತ್ತು. ಆದರೆ ಕಾರ್ಮಿಕರ ಕೊರತೆ ಸೇರಿದಂತೆ ನಾನಾ ಕಾರಣಗಳಿಂದ ರಾಮ ಮಂದಿರದ ನಿರ್ಮಾಣ ಮುಕ್ತಾಯವು 3 ತಿಂಗಳು ವಿಳಂಬವಾಗಲಿದೆ’ ಎಂದು ದೇಗುಲ ನಿರ್ಮಾಣ ಸಮಿತಿ ಹೇಳಿದೆ.

ಶನಿವಾರ ಈ ಬಗ್ಗೆ ಮಾಹಿತಿ ನೀಡಿರುವ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರಾ ಮಿಶ್ರಾ, ‘ಕಾಮಗಾರಿ ಪೂರ್ಣಗೊಳ್ಳಲು ಸುಮಾರು 200 ಕಾರ್ಮಿಕರ ಕೊರತೆಯಿದೆ. ಮಂದಿರದ ಮೊದಲನೇ ಮಹಡಿಯಲ್ಲಿ ಕಲ್ಲುಗಳನ್ನು ಬದಲಿಸುವುದು ಕೂಡ ಕಾಮಗಾರಿ ವಿಳಂಬಕ್ಕೆ ಪ್ರಾಥಮಿಕ ಕಾರಣ. 2025ರ ಜೂನ್ ಬದಲು ಸೆಪ್ಟೆಂಬರ್‌ ತಿಂಗಳಲ್ಲಿ ಮುಕ್ತಾಯಗೊಳ್ಳಲಿದೆ’ ಎಂದರು.

ಇನ್ನು ಮಿಶ್ರಾ ಕಾಮಗಾರಿಗಳ ಬಗ್ಗೆಯೂ ಮಾಹಿತಿ ನೀಡಿದ್ದು, ‘ದೇವಾಲಯದ ಗಡಿಗಾಗಿ 8.5 ಲಕ್ಷ ಘನ ಅಡಿ ಕೆಂಪು ‘ಬನ್ಸಿ ಪಹಾರಪುರ’ ಕಲ್ಲುಗಳನ್ನು ಈಗಾಗಲೇ ಅಯೋಧ್ಯೆಗೆ ತರಲಾಗಿದೆ. ಮೊದಲ ಮಹಡಿಗೆ ಬಳಸಲಾಗಿದ್ದ ಕಲ್ಲುಗಳು ತೆಳು ಎನ್ನುವ ಕಾರಣಕ್ಕೆ ಅವುಗಳನ್ನು ಬದಲಿಸಿ ಮಕ್ರಾನ್‌ ಕಲ್ಲುಗಳನ್ನು ಅಳವಡಿಸಲು ನಿರ್ಧಾರ ಕೈಗೊಳ್ಳಲಾಗಿದೆ. 

ಇದರ ಜೊತೆಗೆ ರಾಮನ ಆಸ್ಥಾನ ಸೇರಿದಂತೆ ಮಂದಿರದ ಸುತ್ತಲಿನ ದೇವಾಲಯಗಳ 6 ಪ್ರತಿಮೆಗಳ ನಿರ್ಮಾಣ ಕಾರ್ಯ ಜೈಪುರದಲ್ಲಿ ನಡೆಯುತ್ತಿದ್ದು, ಡಿಸೆಂಬರ್‌ ವೇಳೆಗೆ ಅಂತ್ಯಗೊಳ್ಳಲಿದೆ’ ಎಂದರು.ರಾಮಮಂದಿರದಲ್ಲಿ ಸಭಾಂಗಣ, ಗಡಿ, ಪ್ರದಕ್ಷಿಣೆ ಮಾರ್ಗ ಸೇರಿದಂತೆ ಹಲವು ಕಾಮಗಾರಿಗಳು ಬಾಕಿಯುಳಿದಿತ್ತು. ಉಳಿದಿರುವ ಕಾಮಗಾರಿ ಪೂರ್ಣಗೊಳಿಸಲು ನಿರ್ಮಾಣ ಸಮಿತಿಯು ಇತ್ತೀಚೆಗಷ್ಟೇ 2 ದಿನಗಳ ಸಭೆ ನಡೆಸಿ, ಪರಿಶೀಲನೆ ನಡೆಸಿತ್ತು.