ಅಯೋಧ್ಯೆಯಲ್ಲಿ ಜ.14ರಿಂದ ಮಹಾ ಯಜ್ಞ

| Published : Jan 11 2024, 01:30 AM IST / Updated: Jan 11 2024, 11:10 AM IST

ಸಾರಾಂಶ

ಅಯೋಧ್ಯೆಯಲ್ಲಿ ನೇಪಾಳಿ ಬಾಬಾ ನೇತೃತ್ವದಲ್ಲಿ ಶ್ರೀರಾಮನಾಮ ಮಹಾಯಜ್ಞ ನಡೆಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ 1008 ಶಿವಲಿಂಗ ಪ್ರತಿಷ್ಠಾಪನೆ ಮಾಡುವ ಕಾರ್ಯ ಅಂತಿಮ ಹಂತದಲ್ಲಿ ನಡೆಯುತ್ತಿದೆ. ಇದರಲ್ಲಿ 21 ಸಾವಿರ ನೇಪಾಳಿ ಯತಿಗಳು ಭಾಗವಹಿಸಲಿದ್ದಾರೆ.

ಅಯೋಧ್ಯೆ: ನಗರದಲ್ಲಿ ರಾಮಮಂದಿರವನ್ನು ಲೋಕಾರ್ಪಣೆಗೊಳಿಸಲು ಅಂತಿಮ ಸಿದ್ಧತೆಗಳು ನಡೆಯುತ್ತಿದೆ. ಈ ನಡುವೆ ನೇಪಾಳಿ ಬಾಬಾ ಎಂದೇ ಖ್ಯಾತರಾದ ಆತ್ಮಾನಂದ ದಾಸ್‌ ಮಹಾತ್ಯಾಗಿ ನೇತೃತ್ವದಲ್ಲಿ ಜ.14ರಿಂದ 25ರವರೆಗೆ ರಾಮನಾಮ ಮಹಾಯಜ್ಞ ನಡೆಯಲಿದೆ.

ರಾಮನಾಮ ಮಹಾಯಜ್ಞದಲ್ಲಿ ನೇಪಾಳದಿಂದ 21 ಸಾವಿರ ಯತಿಗಳು ಭಾಗವಹಿಸಲಿದ್ದು, 1008 ಶಿವಲಿಂಗಗಳನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಜ.14ರಂದು ಎಲ್ಲ ಯತಿಗಳ ಕೇಶ ಮುಂಡನದೊಂದಿಗೆ ಪ್ರಕ್ರಿಯೆ ಆರಂಭವಾಗುತ್ತದೆ. 

ಜ.17ರಿಂದ ಹವನ ಪ್ರಕ್ರಿಯೆಗಳು ನಡೆಯಲಿದ್ದು, ಈ ವೇಳೆ ಎಲ್ಲ ಯತಿಗಳು ರಾಮಾಯಣದ 24 ಸಾವಿರ ಶ್ಲೋಕಗಳನ್ನು ಪಠಣ ಮಾಡಲಿದ್ದಾರೆ. ಹವನ ಪ್ರಕ್ರಿಯೆ ಪೂರ್ಣವಾದ ನಂತರ ಎಲ್ಲ ಶಿವಲಿಂಗಗಳನ್ನು ಸರಯೂ ನದಿಯಲ್ಲಿ ಮುಳುಗಿಸಲಾಗುತ್ತದೆ. 

ಈ ಕುರಿತು ಮಾಹಿತಿ ನೀಡಿದ ನೇಪಾಳಿ ಬಾಬಾ, ‘ಯಜ್ಞಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಸರಯೂ ನದಿಯ ಘಾಟ್‌ ಪ್ರದೇಶದಲ್ಲಿ 100 ಎಕರೆ ವಿಶಾಲ ಜಾಗದಲ್ಲಿ ಟೆಂಟ್‌ ಸಿಟಿ ನಿರ್ಮಾಣ ಮಾಡಲಾಗಿದೆ. ಇಲ್ಲಿ ಪ್ರತಿದಿನ 50 ಸಾವಿರ ಮಂದಿ ಉಳಿದುಕೊಳ್ಳುವ ವ್ಯವಸ್ಥೆಯಿದ್ದು, ಯಜ್ಞದಲ್ಲಿ ಪ್ರತಿನಿತ್ಯ 1 ಲಕ್ಷ ಪಾಲ್ಗೊಳ್ಳುವ ನಿರೀಕ್ಷೆಯಿದೆ’ ಎಂದು ತಿಳಿಸಿದ್ದಾರೆ.