ಅಯೋಧ್ಯೆಯಲ್ಲಿ ಭಾರತದ ಪ್ರಾಣ ಪ್ರತಿಷ್ಠೆ

| Published : Jan 23 2024, 01:47 AM IST / Updated: Jan 23 2024, 07:13 AM IST

AyodhyaRam
ಅಯೋಧ್ಯೆಯಲ್ಲಿ ಭಾರತದ ಪ್ರಾಣ ಪ್ರತಿಷ್ಠೆ
Share this Article
  • FB
  • TW
  • Linkdin
  • Email

ಸಾರಾಂಶ

500 ವರ್ಷಗಳ ಭಾರತೀಯರ ಕನಸು ಈಡೇರಿದ್ದು, ಮಂದಿರ ಉದ್ಘಾಟನೆಯ ಜತೆಗೆ 5 ವರ್ಷದ ಹಸನ್ಮುಖಿ ಬಾಲರಾಮನ ಪ್ರತಿಷ್ಠಾಪನೆ ಪ್ರಧಾನಿ ನರೇಂದ್ರ ಮೋದಿ ಅವರ ಅಮೃತ ಹಸ್ತದಿಂದ ಸೋಮವಾರ ಮಧ್ಯಾಹ್ನ 12.30ರ ಶುಭ ಮುಹೂರ್ತದಲ್ಲಿ ನಿರ್ವಿಘ್ನವಾಗಿ ನೆರವೇರಿದೆ.

ಅಯೋಧ್ಯೆ: ‘ಮಂದಿರ್‌ ವಹೀ ಬನಾಯೇಂಗೇ’ ಎಂಬ ಉದ್ಘೋಷ ಸಾಕಾರಗೊಂಡಿದೆ. ಅಯೋಧ್ಯೆಯಲ್ಲಿ ರಾಮ ಹುಟ್ಟಿದ ಸ್ಥಳದಲ್ಲೇ, ಆತನಿಗೆ ಮನೆ ಲಭಿಸಿದೆ. 

500 ವರ್ಷಗಳ ಭಾರತೀಯರ ಕನಸು ಈಡೇರಿದ್ದು, ಮಂದಿರ ಉದ್ಘಾಟನೆಯ ಜತೆಗೆ 5 ವರ್ಷದ ಹಸನ್ಮುಖಿ ಬಾಲರಾಮನ ಪ್ರತಿಷ್ಠಾಪನೆ ಪ್ರಧಾನಿ ನರೇಂದ್ರ ಮೋದಿ ಅವರ ಅಮೃತ ಹಸ್ತದಿಂದ ಸೋಮವಾರ ಮಧ್ಯಾಹ್ನ 12.30ರ ಶುಭ ಮುಹೂರ್ತದಲ್ಲಿ ನಿರ್ವಿಘ್ನವಾಗಿ ನೆರವೇರಿದೆ.

ಸುಮಾರು 1 ತಾಸು ಅವಧಿಯ ಪ್ರಾಣಪ್ರತಿಷ್ಠಾಪನೆಯ ವೇಳೆ ರಾಮ ಪ್ರತಿಷ್ಠಾಪಿತನಾಗುತ್ತಿದ್ದಂತೆಯೇ ವೇದ ಘೋಷಗಳು ಮುಗಿಲು ಮುಟ್ಟಿದವು. 

ಈ ವೇಳೆ ಶಂಖನಾದ ಮೊಳಗಿತು ಮತ್ತು ಹೆಲಿಕಾಪ್ಟರ್ ಮೂಲಕ ದೇವಸ್ಥಾನದ ಮೇಲೆ ಪುಷ್ಪವೃಷ್ಟಿ ಮಾಡಲಾಯಿತು. ಪ್ರತಿಷ್ಠಾಪಿತ ವಿಗ್ರಹವನ್ನು ಕೆತ್ತಿದ್ದು ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ ಎಂಬುದು ಗಮನಾರ್ಹ. 

ಈ ವೇಳೆ ಕಳೆದ 70 ವರ್ಷದಿಂದ ಟೆಂಟ್‌ನಲ್ಲಿದ್ದ ಚಿಕ್ಕ ಬಾಲರಾಮನ ಉತ್ಸವ ಮೂರ್ತಿಯನ್ನೂ ಹೊಸ ರಾಮನ ವಿಗ್ರಹದ ಪದತಲದಲ್ಲೇ ಪ್ರತಿಷ್ಠಾಪಿಸಲಾಗಿದೆ ಎಂಬುದು ವಿಶೇಷ. 

ಮೋದಿ ನಡೆಸಿದ ಧಾರ್ಮಿಕ ವಿಧಿ ವಿಧಾನಗಳ ವೇಳೆ ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳು, ಸಾಧು-ಸಂತರು ಗರ್ಭಗುಡಿಯೊಳಗೆ ಉಪಸ್ಥಿತರಿದ್ದರು. 

ಮಂದಿರದ ಹೊರಗೆ ಸುಮಾರು 8 ಸಾವಿರ ಗಣ್ಯರು ಕುರ್ಚಿಗಳಲ್ಲಿ ಆಸೀನರಾಗಿ ಎಲ್‌ಇಡಿ ಪರದೆಯಲ್ಲಿ ಪ್ರತಿಷ್ಠಾಪನೆ ವೀಕ್ಷಿಸಿದರು. ದೇಶಾದ್ಯಂತ ಜನರು ಟೀವಿಗಳಲ್ಲಿ ಇದರ ನೇರಪ್ರಸಾರ ವೀಕ್ಷಿಸಿ ಧನ್ಯತಾ ಭಾವನೆ ವ್ಯಕ್ತಪಡಿಸಿದರು.

ಪ್ರತಿಷ್ಠಾಪನೆ ಬಳಿಕ ಮಾತನಾಡಿದ ಮೋದಿ, ‘ಇದು ಒಂದು ದಿವ್ಯ ಕಾರ್ಯಕ್ರಮ. ಜೀವನದ ಅತ್ಯಂತ ಸಂತೋಷದ ಕ್ಷಣ. ಅಯೋಧ್ಯಾ ಧಾಮದಲ್ಲಿ ಶ್ರೀ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಯ ಈ ಘಳಿಗೆಯು ಜೀವನದ ಅಸಾಧಾರಣ ಕ್ಷಣವಾಗಿದೆ. ಪ್ರತಿಯೊಬ್ಬರನ್ನೂ ಭಾವುಕರನ್ನಾಗಿ ಮಾಡುವ ಕ್ಷಣ ಇದು. 

ರಾಮನಿಗೆ ಮನೆ ಸಿಕ್ಕಿದೆ, ಆತನ ಟೆಂಟ್‌ ವಾಸ ಮುಕ್ತಾಯವಾಗಿದೆ’ ಎಂದು ನುಡಿದರು.

ಪ್ರಾಣಪ್ರತಿಷ್ಠಾಪನೆ ನಡೆದಿದ್ದು ಹೀಗೆ: ಚಿನ್ನದ ಬಣ್ಣದ ಕುರ್ತಾ ಹಾಗೂ ಕೆನೆ ಬಣ್ಣದ ಧೋತಿ ಧರಿಸಿದ್ದ ಮೋದಿ ಕೈಯಲ್ಲಿ, ಛತ್ರ ಹಾಗೂ ಕೆಂಪುವಸ್ತ್ರ ಹಿಡಿದುಹಿಡಿದು ಮಧ್ಯಾಹ್ನ 12 ಗಂಟೆ ಸುಮಾರಿಗೆ ರಾಮಮಂದಿರ ಪ್ರವೇಶಿಸಿದರು.

ನಂತರ ಕಾಶಿಯ ಗಣೇಶ್ವರ ಶಾಸ್ತ್ರಿಗಳು, ರಾಮಮಂದಿರ ಟ್ರಸ್ಟಿ ಆದ ಕರ್ನಾಟಕದ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥರು, ವಿವಿಧ ಸಾಧು-ಸಂತರು, ಪುರೋಹಿತರ ಸಮ್ಮುಖದಲ್ಲಿ 12.20ರ ಸುಮಾರಿಗೆ ಪ್ರತಿಷ್ಠಾಪನಾ ವಿಧಿಗಳು ಆರಂಭವಾದವು. 

ಮೋದಿ ಅವರು ಪ್ರತಿಷ್ಠಾಪನೆಯ ಯಜಮಾನತ್ವ ವಹಿಸಿದ್ದರಿಂದ ಮಣೆಯ ಮೇಲೆ ಅವರನ್ನು ಕೂರಿಸಿ ಪ್ರತಿಷ್ಠಾಪನೆಯ ಸಕಲ್ಪ ನೆರವೇರಿಸಲಾಯಿತು.ನಂತರ 12.30ಕ್ಕೆ ಸರಿಯಾಗಿ 84 ಸೆಕೆಂಡಿನ ಪ್ರಾಣಪ್ರತಿಷ್ಠಾಪನೆಯ ಮುಹೂರ್ತ ಆರಂಭವಾಯಿತು. 

ರಾಮನ ಕಣ್ಣಿಗೆ ಕಟ್ಟಿದ್ದ ಪಟ್ಟಿಯನ್ನು ತೆರೆದು ಮಂತ್ರಘೋಷಗಳ ನಡುವೆ ಪ್ರತಿಷ್ಠಾಪನೆಯನ್ನು ನೆರವೇರಿಸಲಾಯಿತು. ಆಗ ವೇದಘೋಷಗಳು ಹಾಗೂ ಶಂಖನಾದ ಮೊಳಗಿದವು. ಆಗಸದಲ್ಲಿ ಹೆಲಿಕಾಪ್ಟರ್‌ ಮೂಲಕ ರಾಮಮಂದಿರದ ಮೇಲೆ ಪುಷ್ಪವೃಷ್ಟಿಗರೆಯಲಾಯಿತು. 

ಭಾರತದ ಬಹುಪಾಲು ಜನರು 500 ವರ್ಷದಿಂದ ರಾಮಜನ್ಮಭೂಮಿಯಲ್ಲಿ ರಾಮಲಲ್ಲಾನನ್ನು ಕಾಣಬೇಕು ಎಂದು ಕಂಡಿದ್ದ ಕನಸು ನನಸಾಯಿತು.

ರಾಮನು ಚಿನ್ನದ ಕಿರೀಟ, ಚಿನ್ನದ ಸರ, ಚಿನ್ನದ ಬಿಲ್ಲು-ಬಾಣ ಹಿಡಿದು ಸರ್ವಾಲಂಕೃತನಾಗಿದ್ದ. ಇದು ಭಕ್ತರನ್ನು ಭಕ್ತಸಾಗರದಲ್ಲಿ ತೇಲುವಂತೆ ಮಾಡಿತು.ಇದೇ ವೇಳೆ, 70 ವರ್ಷಗಳಿಂದ ಸಣ್ಣ ಟೆಂಟ್‌ನಲ್ಲಿದ್ದ ಬಾಲ ರಾಮನ ಪುಟ್ಟ ಮೂರ್ತಿಯನ್ನು ರಾಮನ ದೊಡ್ಡ ವಿಗ್ರಹದ ಮುಂಭಾಗದಲ್ಲಿ ಇಡಲಾಗಿದೆ. 

ಅದಕ್ಕೂ ಮೋದಿ ಪೂಜೆ ನೆರವೇರಿಸಿದರು.ಬಳಿಕ ತಮ್ಮ ಸ್ಥಾನದಿಂದ ಎದ್ದ ಮೋದಿ, ಭಾಗವತ್‌, ಯೋಗಿ, ಆನಂದಿಬೆನ್‌ ಅವರು ರಾಮಲಲ್ಲಾನ ಚರಣಗಳ ಬಳಿ ಆಗಮಿಸಿ ನಿಂತರು. ಮೋದಿ ಅವರ ಹಸ್ತದಿಂದ ರಾಮನ ಚರಣಗಳಿಗೆ ಪುಷ್ಪಗಳನ್ನು ಸಮರ್ಪಿಸಲಾಯಿತು ಹಾಗೂ ವಿವಿಧ ಪ್ರೋಕ್ಷಣಾ ವಿಧಿಗಳನ್ನು ಅವರು ನೆರವೇರಿಸಿದರು. 

12.50ರ ಸುಮಾರಿಗೆ ಮೋದಿ ಮುಖ್ಯ ಮಂಗಳಾರತಿಯನ್ನು ರಾಮಲಲ್ಲಾಗೆ ನೆರವೇರಿಸಿದರು. ಬಳಿಕ ಎಲ್ಲರೂ ಮಂಗಳಾರತಿ ತೆಗೆದುಕೊಂಡರು. ಅದು ಅತ್ಯಂತ ಭಕ್ತಿಮಯ ಭಾವುಕ ಸಂದರ್ಭವಾಗಿತ್ತು.

ಅಲ್ಲಿಗೆ ಪ್ರತಿಷ್ಠಾಪನಾ ವಿಧಿಗಳು ಸಂಪನ್ನಗೊಂಡವು. ಮೋದಿ ಅವರು ರಾಮನ ಮೂರ್ತಿ ಎದುರು ಮಲಗಿ ದಂಡವತ್ ಪ್ರಣಾಮ ಮಾಡಿದರು. ನಮಸ್ಕರಿಸಿ ಹೊರಟ ಮೋದಿ ಅವರಿಗೆ ಗರ್ಭಗುಡಿಯಲ್ಲಿ ನೆರೆದಿದ್ದ ವಿವಿಧ ಅರ್ಚಕರು, ಸ್ವಾಮೀಜಿಗಳು ಹಾಗೂ ಇತರರು ಶಾಲು ಹೊದಿಸಿ ಸನ್ಮಾನಿಸಿದರು.

ಮೋದಿ ಮಂದಿರದಿಂದ ನಿರ್ಗಮಿಸಿದ ನಂತರ 8000 ವಿಐಪಿಗಳಿಗೆ ರಾಮದರ್ಶನಕ್ಕೆ ಅವಕಾಶ ನೀಡಲಾಯಿತು. ಈ ವೇಳೆ ದೇಗುಲದೊಳಗೆ ನೂಕುನುಗ್ಗಲಿನ ವಾತಾವರಣ ನಿರ್ಮಾಣವಾಗಿತ್ತು.

ಮೈಸೂರು ಮೂಲದ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತಿದ 51 ಇಂಚಿನ ರಾಮ ಲಲ್ಲಾನ ಹೊಸ ವಿಗ್ರಹ ಜನವರಿ 17 ರಂದು ಮಂದಿರ ಆವರಣವನ್ನು ಪ್ರವೇಶಿಸಿತ್ತು ಮತ್ತು ಜನವರಿ 18 ರಂದು ರಾಮ ಜನ್ಮಭೂಮಿ ದೇವಸ್ಥಾನದ ಗರ್ಭಗುಡಿಯಲ್ಲಿ ಇರಿಸಲಾಗಿತ್ತು