ಸಾರಾಂಶ
ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಭವ್ಯವಾದ ರಾಮಮಂದಿರ ಗರ್ಭಗುಡಿಯ ಪೀಠದ ಮೇಲೆ ಬಾಲರಾಮನ ನೂತನ ವಿಗ್ರಹವನ್ನು ಗುರುವಾರ ಕೂರಿಸಲಾಗಿದೆ.
ಅಯೋಧ್ಯೆ: ನೂತನವಾಗಿ ನಿರ್ಮಿಸಲಾಗಿರುವ ಭವ್ಯವಾದ ರಾಮಮಂದಿರ ಗರ್ಭಗುಡಿಯ ಪೀಠದ ಮೇಲೆ ಬಾಲರಾಮನ ನೂತನ ವಿಗ್ರಹವನ್ನು ಗುರುವಾರ ಕೂರಿಸಲಾಗಿದೆ.
ಇದರೊಂದಿಗೆ ಕೋಟ್ಯಂತರ ಭಕ್ತರು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ ವಿಗ್ರಹವನ್ನು ಜ.22ರಂದು ಕಣ್ತುಂಬಿಕೊಳ್ಳುವ ಸಮಯ ಮತ್ತಷ್ಟು ಸನ್ನಿಹಿತವಾದಂತಾಗಿದೆ.
ಬುಧವಾರ ರಾತ್ರಿಯೇ ವಿಗ್ರಹವನ್ನು ದೇಗುಲದ ಆವರಣಕ್ಕೆ ತಂದು ಗರ್ಭಗೃಹದೊಳಗೆ ಕೂರಿಸಲಾಗಿತ್ತು.
ಗುರುವಾರ ಹಿರಿಯ ಅರ್ಚಕರ ಸಮ್ಮುಖದಲ್ಲಿ ಜಲಧಿವಾಸ್, ಗಣೇಶ ಪೂಜೆ, ವರುಣ ಪೂಜೆ ಮೊದಲಾದ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿ ಮಧ್ಯಾಹ್ನ 12.30ರ ಬಳಿಕ ವಿಗ್ರಹವನ್ನು ಪೀಠದ ಮೇಲೆ ಕೂರಿಸಲಾಯಿತು.
ಪೀಠದ ಮೇಲೆ ಬಾಲರಾಮನ ವಿಗ್ರಹ ಕೂರಿಸುವ ಪ್ರಕ್ರಿಯೆ ಪೂರ್ಣವಾಗಿದ್ದು, ಗರ್ಭಗುಡಿಗೆ ವಿಶೇಷ ಪೊಲೀಸ್ ಪಡೆ ಬಿಗಿಭದ್ರತೆ ಒದಗಿಸಲಾಗಿದೆ.
ಸದ್ಯ ವಿಗ್ರಹ ಕಣ್ಣುಗಳನ್ನು ಬಟ್ಟೆಯಿಂದ ಮುಚ್ಚಲಾಗಿದೆ.ಮುಂದಿನ 3 ದಿನಗಳ ಕಾಲ ವಿವಿಧ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿ, ಅಂತಿಮವಾಗಿ ಜ.22ರಂದು ಮಧ್ಯಾಹ್ನ 12.20ಕ್ಕೆ ಪ್ರಾಣಪ್ರತಿಷ್ಠಾಪನೆ ನೆರವೇರಿಸಲಾಗುವುದು ಎಂದು ಪೂಜಾವಿಧಿಗಳ ಉಸ್ತುವಾರಿ ಹೊತ್ತಿರುವ ಅರುಣ್ ದೀಕ್ಷಿತ್ ಮಾಹಿತಿ ನೀಡಿದ್ದಾರೆ.
ಗರ್ಭಗುಡಿಯಲ್ಲಿ ವಿಗ್ರಹ ಕೂರಿಸಿದ ಬಳಿಕ ಇಡೀ ಪ್ರದೇಶಕ್ಕೆ ಪ್ರವೇಶವನ್ನು ಆಯ್ದ ವ್ಯಕ್ತಿಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಸ್ಥಳದಲ್ಲಿ ಉತ್ತರಪ್ರದೇಶ ವಿಶೇಷ ಭದ್ರತಾ ಪಡೆಯ ಯೋಧರನ್ನು ನಿಯೋಜಿಸಲಾಗಿದೆ. ಗರ್ಭಗುಡಿಯ ಆಸುಪಾಸು ಮೊಬೈಲ್ ಬಳಕೆ ನಿಷೇಧಿಸಲಾಗಿದೆ.
ಇಂದು ಏನೇನು ಕಾರ್ಯಕ್ರಮ?
ರಾಮಮಂದಿರದಲ್ಲಿ ಈ ದಿನದಂದು ಯಾಗದ ಅಗ್ನಿಕುಂಡವನ್ನು ಸಿದ್ಧಪಡಿಸಲಾಗುತ್ತದೆ ಮತ್ತು ಅರ್ಚಕರು ವೇದ ಮಂತ್ರಗಳನ್ನು ಅನುಸರಿಸುವ ಮೂಲಕ ಮತ್ತು ಇತರ ವಿಶೇಷ ವಿಧಾನಗಳ ಮೂಲಕ ಅಗ್ನಿಯನ್ನು ಬೆಳಗಿಸುತ್ತಾರೆ. ಅಗ್ನಿ ಸ್ಥಾಪನೆ, ನವಗ್ರಹ ಸ್ಥಾಪನೆ ಮತ್ತು ಹವನಗಳು ನಡೆಯಲಿವೆ.