ಸಾರಾಂಶ
ನವದೆಹಲಿ: ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರಪತಿ ಭವನ, ಮದುವೆ ಸಮಾರಂಭವೊಂದಕ್ಕೆ ಸಜ್ಜಾಗುತ್ತಿದೆ. ರಾಷ್ಟ್ರಪತಿ ಭವನದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಅಧಿಕಾರಿಯ ಮದುವೆಯನ್ನು ರಾಷ್ಟ್ರಪತಿ ಭವನದ ವ್ಯಾಪ್ತಿಯಲ್ಲೇ ನಡೆಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅನುಮತಿ ನೀಡಿದ್ದಾರೆ.
ಫೆ.12ರಂದು ರಾಷ್ಟ್ರಪತಿ ಭವನದ ಆವರಣದಲ್ಲಿ ವಿವಾಹ ಸಮಾರಂಭ ನಡೆಯಲಿದೆ. ರಾಷ್ಟ್ರಪತಿ ಭವನದಲ್ಲಿ ಪಿಎಸ್ಒ ಆಗಿ ನೇಮಕಗೊಂಡಿರುವ ಸಿಆರ್‌ಪಿಎಫ್ ಅಧಿಕಾರಿ ಪೂನಂ ಗುಪ್ತಾ ಅವರ ವಿವಾಹವನ್ನು ಇಲ್ಲಿನ ಮದರ್ ಥೆರೆಸಾ ಕ್ರೌನ್ ಕಾಂಪ್ಲೆಕ್ಸ್‌ನಲ್ಲಿ ನಡೆಸಲು ರಾಷ್ಟ್ರಪತಿ ಅನುಮತಿ ನೀಡಿದ್ದಾರೆ. ಆದರೆ ಈ ಬಗ್ಗೆ ರಾಷ್ಟ್ರಪತಿ ಭವನದಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.
ದಕ್ಷ ಅಧಿಕಾರಿ ಎಂದೇ ಹೆಸರು ಪಡೆದಿರುವ ಪೂನಂ ಈ ಬಾರಿಯ ಗಣರಾಜ್ಯೋತ್ಸವ ಸಂದರ್ಭದ ಪರೇಡ್‌ನಲ್ಲಿ ಸಂಪೂರ್ಣ ಮಹಿಳಾ ತುಕಡಿಯನ್ನು ಮುನ್ನಡೆಸಿದ್ದರು. ಪೂನಂ ಗುಪ್ತಾ, ಜಮ್ಮು ಕಾಶ್ಮೀರದಲ್ಲಿ ಸಿಆರ್‌ಪಿಎಫ್ ಅಸಿಸ್ಟೆಂಟ್ ಕಮಾಂಡೆಂಟ್ ಅವನೀಶ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದು, ಕೆಲವೇ ಕೆಲ ಸ್ನೇಹಿತರು, ಸಂಬಂಧಿಗಳು ಭಾಗಿಯಾಗುವ ನಿರೀಕ್ಷೆಯಿದೆ.