ಸಾರಾಂಶ
ಪುರಿ : ಒಡಿಶಾದ ಜಗತ್ಪ್ರಸಿದ್ಧ ಪುರಿ ಜಗನ್ನಾಥ ದೇಗುಲದಲ್ಲಿ 46 ವರ್ಷಗಳ ಬಳಿಕ ಇತ್ತೀಚೆಗಷ್ಟೇ ತೆರೆಯಲಾದ ರಹಸ್ಯ ರತ್ನ ಭಂಡಾರದಲ್ಲಿದ್ದ ಎಲ್ಲಾ ಆಭರಣ ಹಾಗೂ ಅಮೂಲ್ಯ ವಸ್ತುಗಳನ್ನು ಸುರಕ್ಷಿತ ಕೋಣೆಗೆ ಸ್ಥಳಾಂತರ ಮಾಡುವ ಪ್ರಕ್ರಿಯೆ ಗುರುವಾರ ಪೂರ್ಣಗೊಂಡಿದೆ.
ಜು.14ರಂದು ಮೊದಲ ಬಾರಿ ರತ್ನ ಭಂಡಾರವನ್ನು ತೆರೆಯಲಾಗಿತ್ತು. ಆಗ ಹೊರ ಕೋಣೆಯಲ್ಲಿದ್ದ ಆಭರಣಗಳನ್ನು ಮಾತ್ರ ದೇವಸ್ಥಾನದಲ್ಲೇ ತಾತ್ಕಾಲಿಕವಾಗಿ ನಿರ್ಮಿಸಲಾದ ಭದ್ರತಾ ಕೊಠಡಿಗೆ ಸ್ಥಳಾಂತರಿಸಲಾಗಿತ್ತು. ಅಂದು ಒಳ ಕೋಣೆಯನ್ನು ತೆರೆದು, ವೀಕ್ಷಣೆ ಮಾಡಿ, ಮತ್ತೆ ಸೀಲ್ ಮಾಡಲಾಗಿತ್ತು. ಗುರುವಾರ ರತ್ನ ಭಂಡಾರದ ಒಳಕೋಣೆಯನ್ನು ಮತ್ತೊಮ್ಮೆ ತೆರೆದು, ಅಲ್ಲಿದ್ದ ಆಭರಣ ಹಾಗೂ ಅಮೂಲ್ಯ ವಸ್ತುಗಳನ್ನು ಭದ್ರತಾ ಕೊಠಡಿಗೆ ಸ್ಥಳಾಂತರ ಮಾಡಲಾಯಿತು.
ಇನ್ನುಮುಂದೆ ರತ್ನ ಭಂಡಾರದ ದುರಸ್ತಿ ಕಾರ್ಯ ನಡೆಯಲಿದೆ. ದುರಸ್ತಿ ಪೂರ್ಣಗೊಂಡ ಬಳಿಕ ಆಭರಣಗಳನ್ನು ಪುನಃ ಅಲ್ಲಿಗೆ ಸ್ಥಳಾಂತರ ಮಾಡಲಾಗುತ್ತದೆ. ನಂತರವಷ್ಟೇ ಅವುಗಳ ಮೌಲ್ಯಮಾಪನ ಹಾಗೂ ದಾಖಲೀಕರಣ ಪ್ರಕ್ರಿಯೆ ನಡೆಯಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ನಿವೃತ್ತ ಜಡ್ಜ್, ರಾಜನಿಂದ ನಿಗಾ:
ಗುರುವಾರ ಆಭರಣಗಳನ್ನು ಸ್ಥಳಾಂತರ ಮಾಡುವ ಕಾರ್ಯವು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿಶ್ವನಾಥ್ ರಥ ಅವರ ಮೇಲ್ವಿಚಾರಣೆ ಸಮಿತಿಯ ನಿಗಾದಲ್ಲಿ ಬೆಳಿಗ್ಗೆ 9.15ರಿಂದ ನಡೆಯಿತು. ಜಿಲ್ಲಾಧಿಕಾರಿ ನೇತೃತ್ವದಲ್ಲಿ, ಪುರಿಯ ಮಹಾರಾಜ ಗಜಪತಿ ದಿವ್ಯಸಿಂಗ್ ದೇವ್ ಅವರ ಉಪಸ್ಥಿತಿಯಲ್ಲಿ ಕೇವಲ 11 ಮಂದಿ ಅಧಿಕೃತ ವ್ಯಕ್ತಿಗಳು ಮಾತ್ರ ರತ್ನ ಭಂಡಾರದೊಳಗೆ ತೆರಳಿದ್ದರು. ಹೊರಗೆ ಹಾವಾಡಿಗರು, ಅಗ್ನಿಶಾಮಕ ಹಾಗೂ ಒಡಿಶಾ ಕ್ಷಿಪ್ರ ಪ್ರಹಾರ ದಳದ ಸಿಬ್ಬಂದಿ ಇದ್ದರು. ಭಕ್ತರಿಗೆ ಬೆಳಿಗ್ಗೆ 8ರಿಂದಲೇ ಪುರಿ ದೇಗುಲದ ಪ್ರವೇಶ ನಿರ್ಬಂಧಿಸಲಾಗಿತ್ತು.
ರಹಸ್ಯ ಸುರಂಗಕ್ಕಾಗಿ ಶೋಧ
ರತ್ನ ಭಂಡಾರದ ಒಳಗೆ ರಹಸ್ಯ ಸುರಂಗವಿದ್ದು, ಅಲ್ಲಿ ಇನ್ನಷ್ಟು ಆಭರಣಗಳು ಇರಬಹುದು ಎಂದು ಹೇಳಲಾಗಿದೆ. ಹೀಗಾಗಿ, ಭಂಡಾರದ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳುವ ಮುನ್ನ ಭಾರತೀಯ ಪುರಾತತ್ವ ಸರ್ವೇಕ್ಷಣಾಲಯವು ಸುರಂಗಗಳಿಗಾಗಿ ಶೋಧ ನಡೆಸಲಿದೆ. ಅತ್ಯಾಧುನಿಕ ಉಪಕರಣಗಳನ್ನು ಬಳಸಿ ಸುರಂಗದ ಶೋಧ ನಡೆಯಲಿದೆ. ನಂತರ ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತದೆ.
;Resize=(128,128))
;Resize=(128,128))
;Resize=(128,128))